ಸಗಣಿಯಿಂದ ಪೆಂಟ್ ತಯಾರಿಸಿದ ವಿಜಯಪುರದ ಯುವಕರು- ವಿಶೇಷ ವರದಿ

ವಿಜಯಪುರ : ಇಟ್ಟರೆ ಸೆಗಣಿಯಾದೆ….. ತಟ್ಟಿದರೆ ಕರುಳಾದೆ….. ಸುಟ್ಟರೆ ನೊಸಲಿಗೆ ವಿಭೂತಿಯಾದೆ ನೀನಾರಿಗಾದೆಯೋ ಎಲೆ ಮಾನವ ಹರಿ ಹರಿ ಗೋವು ನಾನು…. ಎಂಬ ಹಾಡು ಜನಜನಿತ. ಆದರೆ ಈಗ ಈ ಸಾಲಿಗೆ ಇಟ್ಟರೆ ಸೆಗಣಿಯಾದೆ, ಸೆಗಣಿಯ ಜೊತೆಗೆ ಪೇಂಟ್ ಆದೆ ಎಂಬ ಸಾಲು ಸೇರಿಸಬಹುದೇನೋ?

ಹೌದು…. ವಿಜಯಪುರದ ಬಿಎಲ್ಡಿಇ ಇಂಜನಿಯರಿಂಗ್ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಸೆಗಣಿ ಮೂಲಕವೇ ಪೇಂಟ್ ತಯಾರಿಸುವ ಮೂಲಕ ಹೊಸ ಪ್ರಯೋಗದಲ್ಲಿ ಯಶಸ್ವಿಯಾಗಿದ್ದಾರೆ. ವಿಜಯಪುರದಲ್ಲಿ ನಡೆಯುತ್ತಿರುವ ತಾಂತ್ರಿಕ ಉತ್ಸವದಲ್ಲಿ ವಿದ್ಯಾರ್ಥಿಗಳು ರೂಪಿಸಿದ ಈ ಮಾದರಿ ಎಲ್ಲರ ಗಮನ ಸೆಳೆಯುತ್ತಿದೆ.

ಈ ಹಿಂದೆ ಕಾಲವೊಂದಿತ್ತು, ಮನೆ ಮೊದಲಾದವುಗಳನ್ನು ಬೆರಣಿಯೇ ಗೋಡೆಯ ಪೇಂಟ್ ಆಗಿರುತ್ತಿತ್ತು. ಪರಿಸರ ಸ್ನೇಹಿಯಾದ ಈ ಪ್ರಕ್ರಿಯೆ ಪೇಂಟ್ ಅಬ್ಬರದಲ್ಲಿ ಮಾಯವಾಗಿ ಹೋಗಿತ್ತು. ಈಗ ಅದೇ ಬೆರಣಿಯನ್ನು ಬಳಸಿ ಹಳೆ ಬೇರು ಹೊಸ ಚಿಗುರು ಎಂಬಂತೆ ಅದರಿಂದಲೇ ಪೇಂಟ್ ರೂಪಿಸುವ ಮೂಲಕ ಹೊಸ ತಾಂತ್ರಿಕತೆಯನ್ನು ವಿಜಯಪುರದ ವಿದ್ಯಾರ್ಥಿಗಳು ಪರಿಚಯಿಸಿದ್ದಾರೆ.

ಮೆಕ್ಯಾನಿಕಲ್ ಇಂಜನಿಯರಿಂಗ್ ವಿಭಾಗದ ವಿದ್ಯಾರ್ಥಿಗಳಾದ ಅದನಾನ್ ಇನಾಮದಾರ, ಸೂರಜ್ ಪರಮಶೆಟ್ಟಿ, ಸೈಫ್ ಶೇಖ್ ಅವರನ್ನೊಳಗೊಂಡ ತಂಡ ಈ ವಿಶಿಷ್ಟ ಯಂತ್ರವನ್ನು ರೂಪಿಸಿದೆ. ಸರಳವಾಗಿರುವ ಈ ಯಂತ್ರದಲ್ಲಿ ವಿವಿಧ ಪ್ರಕ್ರಿಯೆಗಳ ಮೂಲಕ `ವೈಟ್ ಪೇಂಟ್’ ಸಿದ್ಧಪಡಿಸಬಹುದಾಗಿದೆ.

ಈ ರೀತಿಯ ಪೇಂಟ್ ಒಂದು ರೀತಿ ಪರಿಸರ ಸ್ನೇಹಿ, ವಾತಾವರಣಕ್ಕೆ ಪೂರಕವಾಗಿರುತ್ತದೆ. ಹಿರಿಯರು ಈ ಕಾರಣಕ್ಕಾಗಿಯೇ ಬೆರಣಿಯನ್ನು ಬಳಸಿ ಗೋಡೆಯನ್ನು ಲೇಪಿಸುತ್ತಿದ್ದರು. ಹೀಗಾಗಿ ಹಳೆಯ ಸಾಂಪ್ರದಾಯಕ್ಕೆ ಹೊಸ ರೂಪ ಕೊಡುವ ಉದ್ದೇಶದಿಂದ ಈ ರೀತಿಯ ಮಾದರಿ ತಯಾರಿಸಿದ್ದೇವೆ ಎಂದು ವಿದ್ಯಾರ್ಥಿಗಳು ವಿವರಿಸಿದರು.

ಸೃಜಿಸಿದ ತಾಂತ್ರಿಕ ಲೋಕ:
ಈ ರೀತಿಯ ಹತ್ತು ಹಲವು ವಿಭಿನ್ನ ಪ್ರಯೋಗಗಳೊಂದಿಗೆ ಹಲವಾರು ರೀತಿಯ ಮಾದರಿಗಳು ಒಂದು ರೀತಿ ತಾಂತ್ರಿಕ ಲೋಕವನ್ನೇ ಸೃಷ್ಟಿಸಿದ್ದು, ಸಂಶೋಧನೆಯ ವಿವಿಧ ಆಯಾಮಗಳನ್ನು ಪರಿಚಯಿಸುವಲ್ಲಿ ಯಶಸ್ವಿಯಾಗಿದೆ. ವಿಶೇಷವಾಗಿ ಇಂಜನಿಯರಿಂಗ್ ವಿದ್ಯಾರ್ಥಿಗಳು ಈ ವಿಜ್ಞಾನ ಮಾದರಿ ರೂಪಿಸುವ ಜೊತೆಗೆ ಅವುಗಳ ಪ್ರಕ್ರಿಯೆ, ಕಾರ್ಯವಿಧಾನ, ವೈಜ್ಞಾನಿಕ ಹಿನ್ನೆಲೆ ಹೀಗೆ ಅನೇಕ ಅಂಶಗಳನ್ನು ಬರೆದು ಚಾರ್ಟ್ ಮೂಲಕ ಬಿತ್ತರಿಸಿದ್ದಾರೆ.

ಬೈಸಿಕಲ್ ಚಾಲಿತ ನೀರು ಶುದ್ಧೀಕರಣ ವ್ಯವಸ್ಥೆಯ ಅಭಿವೃದ್ಧಿ ಮತ್ತು ನಿರ್ಮಾಣ, ಮಾಸ್ಟರ್ ಆಫ್ ಕಂಪ್ಯೂಟರ್ ಅಪ್ಲಿಕೇಶನ್ಸ್ ವಿಭಾಗದಿಂದ ಐಒಟಿ ಆಧಾರಿತ ಹೊಗೆ ವಲಯ ಮೇಲ್ವಿಚಾರಣಾ ವ್ಯವಸ್ಥೆ, ಮಾಹಿತಿ ವಿಜ್ಞಾನ ಎಂಜಿನಿಯರಿಂಗ್ ವಿಭಾಗದಿಂದ ಅಂಧರಿಗೆ ಸ್ಮಾರ್ಟ್ ಧರಿಸಬಹುದಾದ ಸಾಧನಗಳು.
ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್ ವಿಭಾಗದಿಂದ ಎಲೆಕ್ಟ್ರಿಕ್ ವಾಹನಗಳಲ್ಲಿ ಬ್ಯಾಟರಿ ಮೇಲ್ವಿಚಾರಣಾ ವ್ಯವಸ್ಥೆಯ ವಿನ್ಯಾಸ ಮತ್ತು ಅಭಿವೃದ್ಧಿ, ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ಎಂಜಿನಿಯರಿಂಗ್ ಇಲಾಖೆಯಿಂದ ಯಂತ್ರ ಕಲಿಕೆಯನ್ನು ಬಳಸಿಕೊಂಡು ನಕಲಿ ಕರೆನ್ಸಿ ಪತ್ತೆ, ಕೃತಕ ಬುದ್ಧಿಮತ್ತೆ ಮತ್ತು ಯಂತ್ರ ಕಲಿಕೆ ಇಲಾಖೆಯಿಂದ ಆಳವಾದ ಕಲಿಕೆ ಮಾದರಿಗಳನ್ನು ಬಳಸಿಕೊಂಡು ನೆಫ್ರೋಪತಿ ಮುನ್ಸೂಚನೆ ಕುರಿತ ಮಾದರಿಗಳು ಗಮನ ಸೆಳೆದವು.

ಅಲ್ಲದೇ, ಯುಎನ್ಇಟಿ ಪರಿಣಾಮಕಾರಿ ದಾಳಿಂಬೆ ವಿಭಾಗೀಕರಣ: ಒಂದು ತುಲನಾತ್ಮಕ ವಿಶ್ಲೇಷಣೆ”, ಕಂಪ್ಯೂಟರ್ ಸೈನ್ಸ್ ಎಂಜಿನಿಯರಿಂಗ್ ವಿಭಾಗವು ನಡೆಸಿದ ಕೃಷಿಯಲ್ಲಿ ಅನ್ವಯಿಕೆಗಳನ್ನು ಹೊಂದಿರುವ ಯೋಜನೆ, ಸಿವಿಲ್ ಎಂಜಿನಿಯರಿಂಗ್ ಇಲಾಖೆ ನಡೆಸಿದ ಭೂಕಂಪ-ಸ್ಥಿತಿಸ್ಥಾಪಕ ರಚನೆಗಳ ಅಧ್ಯಯನ, ಭೂಕಂಪನ ಶಕ್ತಿಗಳ ರಚನೆಗಳ ಮೇಲೆ ಕಾಲಮ್ ದೃಷ್ಟಿಕೋನದ ಪರಿಣಾಮವನ್ನು ಅಧ್ಯಯನ ಮಾಡುತ್ತದೆ, ವಾಸ್ತುಶಿಲ್ಪ ಇಲಾಖೆಯಿಂದ ಹುಬ್ಬಳ್ಳಿ-ಧಾರವಾಡದ ನವಲೂರು ರೈಲ್ವೆ ನಿಲ್ದಾಣದ ಪುನರಾಭಿವೃದ್ಧಿ ಸೇರಿದಂತೆ ಎಲ್ಲಾ 201 ಯೋಜನೆಗಳನ್ನು ಉದ್ಯಮ ಮತ್ತು ಶೈಕ್ಷಣಿಕ ಸಂಸ್ಥೆಗಳ ವಿಷಯ ತಜ್ಞರು ಮೌಲ್ಯಮಾಪನ ಮಾಡಿದರು.

ನಾನಾ ವಿಭಾಗಳ 800ಕ್ಕೂ ಹೆಚ್ಚು ವಿದ್ಯಾರ್ಥಿಗಳು ಒಟ್ಟು 201 ಮಾದರಿಗಳನ್ನು ತಯಾರಿಸಿದ್ದರು. 79 ನಾವೀನ್ಯತೆ, 54 ಸಾಮಾಜಿಕ ಪರಿಣಾಮ, 15 ಪರಿಸರ ಕೇಂದ್ರಿತ ಹಾಗೂ 53 ಅನ್ವಯಿಕೆ (ಅಪ್ಲಿಕೇಶನ್) ವಿಭಾಗಗಳಲ್ಲಿಮಾದರಿಗಳು ಪ್ರದರ್ಶನವಾದವು. ಈ ಸಂದರ್ಭದಲ್ಲಿ ಒಟ್ಟು 41 ಯೋಜನೆಗಳನ್ನು ಇಲಾಖೆಗಳಿಂದ ವರ್ಷದ ಅತ್ಯುತ್ತಮ ಯೋಜನೆ ಎಂದು ಪ್ರಶಸ್ತಿ ನೀಡಲಾಯಿತು.

ಕಾಲೇಜಿನ ಪ್ರಾಂಶುಪಾಲ ಡಾ. ವಿ. ಜಿ. ಸಂಗಮ ಅವರ ನೇತೃತ್ವದಲ್ಲಿ ನಡೆದ ಈ ಕಾರ್ಯಕ್ರಮವನ್ನು ಪ್ರೌಢಶಾಲೆ, ಪಿಯು ಮತ್ತು ಪಾಲಿಟೆಕ್ನಿಕ್ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಸಾರ್ವಜನಿಕರು ಮಾದರಿಗಳನ್ನು ವಿಕ್ಷಿಸಿ ಜ್ಞಾನಾರ್ಜನೆ ಮಾಡಿದರು. ಅಲ್ಲದೇ, ಈ ಕಾರ್ಯಕ್ರಮವು ಭೇಟಿ ನೀಡಿದ ವಿದಾರ್ಥಿಗಳು ಮತ್ತು ಪೋಷಕರಿಗೆ ಕ್ಯಾಂಪಸ್ ಪ್ರವಾಸಗಳು, ಉತ್ಕೃಷ್ಟತಾ ಕೇಂದ್ರಗಳಿಗೆ ಭೇಟಿ, ಪ್ರಯೋಗಾಲಯಗಳು, ಪ್ಲೇಸ್ಮೆಂಟ್ ಸೆಲ್ ಮತ್ತು ಗ್ರಂಥಾಲಯಗಳ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಲು ಅನುಕೂಲ ಮಾಡಿಕೊಟ್ಟಿತು.

ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿಭಾಗದ ಆರ್. ಎಸ್. ಎಲ್ಲೂರು, ಡಾ .ಎಸ್. ಜಿ. ಚೋಳಕೆ ಹಾಗೂ ಡಾ. ಆರ್. ಎನ್. ಜೀರಗಲ ಕಾರ್ಯಕ್ರಮ ಸಂಯೋಜಿಸಿದರು.

Latest Indian news

Popular Stories