ವಿಜಯಪುರ ಮೇಯರ್, ಉಪ ಮೇಯರ್ ಚುನಾವಣೆ ಮುಂದಕ್ಕೆ: ಬಿಜೆಪಿ ಆಕ್ಷೇಪ

ಬೆಂಗಳೂರು: ವಿಜಯಪುರ ಮಹಾನಗರ ಪಾಲಿಕೆ ಮೇಯರ್, ಉಪ ಮೇಯರ್ ಚುನಾವಣೆಯನ್ನು ಮುಂದೂಡಿರುವುದನ್ನು ಪ್ರತಿಪಕ್ಷ ಬಿಜೆಪಿ ಆಕ್ಷೇಪಿಸಿದೆ. ಚುನಾವಣಾಧಿಕಾರಿಯಾಗಿದ್ದ ಬೆಳಗಾವಿ ಪ್ರಾದೇಶಿಕ ಆಯುಕ್ತ ಸಂಜಯ ಶೆಟ್ಟಣ್ಣವರ್ ಪಕ್ಷಪಾತ ಮಾಡಿದ್ದಾರೆ ಎಂದು ಆರೋಪಿಸಿದೆ.
ರಾಜ್ಯ ಚುನಾವಣಾ ಆಯೋಗದ ಅಧಿಕಾರಿಗೆ ಬಿಜೆಪಿ ನಿಯೋಗ ಈ ಕುರಿತು ದೂರು ಸಲ್ಲಿಸಿ, ಕ್ರಮವಹಿಸುವಂತೆ ಮನವಿ ಮಾಡಿಕೊಂಡಿತು.
ನಿಯೋಗದ ನೇತೃತ್ವವಹಿಸಿದ್ದ ವಿಧಾನ ಪರಿಷತ್ ಸದಸ್ಯ ಎನ್.ರವಿಕುಮಾರ್ ನಂತರ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದರು.
ಮೇಯರ್ ಚುನಾವಣೆಗೆ ನಾವು 24 ಜನ, ಕಾಂಗ್ರೆಸ್‌ನವರು 22 ಜನ ಮತದಾನ ಮಾಡಿದ್ದಾರೆ. ಮೇಯರ್ ಚುನಾವಣೆ ಪ್ರಕ್ರಿಯೆ ಪೂರ್ಣಗೊಂಡಿತ್ತು. ನಂತರ ಉಪ ಮೇಯರ್ ಚುನಾವಣೆ ವೇಳೆ ನಾವು 24 ಜನ ಕೈ ಎತ್ತಿದ್ದೆವು. ಸೋಲು ಖಚಿತವಾದುದನ್ನು ಮನಗಂಡು ಕಾಂಗ್ರೆಸ್‌ನವರು ನೆಪ ತೆಗೆದರು.
ಚುನಾವಣಾ ಪ್ರಕ್ರಿಯೆ ಸರಿಯಾಗಿ ನಡೆಸಿಲ್ಲವೆಂದು ಚುನಾವಣಾಧಿಕಾರಿ ಮೇಲೆ ಸಚಿವ ಎಂ.ಬಿ.ಪಾಟೀಲ ಒತ್ತಡ ಹೇರಿ ಚುನಾವಣೆ ಮುಂದೂಡಿಸಿದ್ದು, ಕಾಂಗ್ರೆಸ್‌ನ ಎಲ್ಲ ಸದಸ್ಯರು ಗಲಾಟೆ ಮಾಡಿದ್ದಾರೆ ಎಂದು ಆರೋಪಿಸಿದರು.
ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿ ನ್ಯಾಯ ಒದಗಿಸಲು ಕೋರಿದ್ದೇವೆ. ನಗರಾಭಿವೃದ್ಧಿ ಇಲಾಖೆ ಜತೆ ಮಾತನಾಡಿ ನಿರ್ಣಯಿಸುವುದಾಗಿ ಚುನಾವಣಾಧಿಕಾರಿ ಭರವಸೆ ನೀಡಿದ್ದಾರೆ ಎಂದು ಎನ್.ರವಿಕುಮಾರ್ ಹೇಳಿದರು.
ನಿಯೋಗದಲ್ಲಿ ವಿಧಾನ ಪರಿಷತ್ ಸದಸ್ಯ ಎನ್.ರವಿಕುಮಾರ್, ಕೇಶವ ಪ್ರಸಾದ್, ಕಾನೂನು ಪ್ರಕೋಷ್ಠದ ರಾಜ್ಯ ಸಂಚಾಲಕ ಎ.ವಸಂತಕುಮಾರ್, ಮಾಧ್ಯಮ ವಿಭಾಗದ ಸಂಚಾಲಕ ಕರುಣಾಕರ್ ಖಾಸಲೆ, ವಕೀಲರು, ಮುಖಂಡರು ಇದ್ದರು.