ಚಾಮರಾಜನಗರ: ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಕಷ್ಟದ ದಿನಗಳಗಳ ಬಗ್ಗೆ ಮೆಲುಕು ಹಾಕಿದ್ದಾರೆ. ಈಗಿನಂತೆ ನಮಗೆ ಇಡ್ಲಿ, ದೋಸೆ ಇರುತ್ತಿರಲಿಲ್ಲ. ತಂಗಳು ತಿಂದು ಇರಿತ್ತಿದ್ದೆವು ಎಂದು ತಮ್ಮ ನೋವಿನ ದಿನಗಳನ್ನು ನೆನೆದಿದ್ದಾರೆ.
ಚಾಮರಾಜನಗರದಲ್ಲಿ ಮಾಜಿ ರಾಜ್ಯಪಾಲ ದಿ|| ಬಿ.ರಾಚಯ್ಯ ಅವರ ಸ್ಮಾರಕವನ್ನು ಉದ್ಘಾಟಿಸಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಊಟದ ಸಮಯ ತಡವಾದದ್ದನ್ನು ಪ್ರಸ್ತಾಪಿಸಿ ಕ್ಷಮೆ ಕೋರಿ ಭಾಷಣ ಆರಂಭಿಸಿದರು.
ಹಿಂದೆ ನಮಗೆ ಮನೆಯಲ್ಲಿ ತಂಗಳು ಇರ್ತಿತ್ತೇ ಹೊರತು, ಇಡ್ಲಿ, ದೋಸೆ, ಉಪ್ಪಿಟ್ಟು ಏನೂ ಇರ್ತಾ ಇರ್ಲಿಲ್ಲ. ರಾತ್ರಿ ಉಳಿದ ಮುದ್ದೆಗೆ ಮಜ್ಜಿಗೆ ಬೆರೆಸಿ ತಂಗಳು ತಿಂತಾ ಇದ್ವಿ ಎಂದು ಹೇಳಿದರು.
ರಾಚಯ್ಯ ಅವರ ಮನೆಯಲ್ಲೂ ಇಡ್ಲಿ ದೋಸೆ ಇರ್ತಿಲಿಲ್ಲ ಅಂತ ಕಾಣ್ತದೆ. ಅವರೂ ನನ್ನಂಗೆ ತಂಗಳು ತಿಂದು ಗಟ್ಟಿಯಾದರು ಎಂದರು. ರಾಚಯ್ಯ ಅವರ ಮಾರ್ಗದರ್ಶನದಂತೆ ನಾನು ಶೋಷಿತರ ಪರವಾಗಿದ್ದೇನೆ. ರಾಚಯ್ಯ ಅವರು ರಾಜ್ಯ ರಾಜಕಾರಣದ ಅತ್ಯಂತ ಮುತ್ಸದ್ದಿ ರಾಜಕಾರಣಿ. ಹೆಚ್ಚು ಮಾತಾಡುತ್ತಿರಲಿಲ್ಲ. ಬಡವರ ಪರವಾಗಿ ಹೆಚ್ಚೆಚ್ಚು ಕೆಲಸ ಮಾಡುತ್ತಿದ್ದರು ಎಂದರು.
ರಾಮಕೃಷ್ಣ ಹೆಗಡೆ ಅವರ ಮಂತ್ರಿ ಮಂಡಲದಲ್ಲಿ ಪ್ರಭಾವಿ ಆಗಿದ್ದ ರಾಚಯ್ಯನವರಿಗೆ, ಪ್ರತಿಭಾವಂತ, ಜನಪರ ಕಾಳಜಿಯುಳ್ಳ ರಾಜಕಾರಣಿಗಳನ್ನು ಹತ್ತಿರಕ್ಕೆ ಕರೆದು ಬೆಳೆಸುವ ಗುಣ ಇತ್ತು. ಹೆಗಡೆ ಮತ್ತು ರಾಚಯ್ಯ ಅವರು ನನ್ನನ್ನು ಕರೆದು ಕನ್ನಡ ಕಾವಲು ಸಮಿತಿಯ ಅಧ್ಯಕ್ಷರನ್ನಾಗಿ ಮಾಡಿದರು. ಬಳಿಕ ನನ್ನನ್ನು ಮಂತ್ರಿ ಮಾಡಿದರು ಎಂದು ಇತಿಹಾಸವನ್ನು ಸ್ಮರಿಸಿದರು.