ಬೀದರ್ : ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ತಾಯಿಯೊಬ್ಬಳು ತನ್ನ ಇಬ್ಬರು ಮಕ್ಕಳನ್ನು ಕೊಂದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೀದರ್ ಜಿಲ್ಲೆಯ ಬಾಲ್ಕಿ ತಾಲೂಕಿನ ನಿಲಮನಹಳ್ಳಿ ತಾಂಡಾದಲ್ಲಿ ನಡೆದಿದೆ.
25 ವರ್ಷದ ಮೀರಾಬಾಯಿ ತನ್ನ ಮೂರು ಮತ್ತು ಎರಡು ವರ್ಷದ ಮಕ್ಕಳಾದ ನಚ್ಚುಬಾಯಿ ಮತ್ತು ಗೋಲುಬಾಯಿಗೆ ವಿಷ ಉಣಿಸಿದ್ದಾರೆ. ಅವೆರಡೂ ನಿದ್ದೆಯಲ್ಲೇ ಉಸಿರು ನಿಲ್ಲಿಸುತ್ತಿದ್ದಂತೆಯೇ ಮೀರಾಬಾಯಿ ತಾನು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಘಟನಾ ಸ್ಥಳಕ್ಕೆ ಧನ್ನೂರು ಪೊಲೀಸರು ದೌಡಾಯಿಸಿದ್ದಾರೆ. ಗಂಡನ ಮನೆಯವರ ಹಿಂಸೆ, ಮಾನಸಿಕ ಒತ್ತಡ ತಡೆಯಲಾಗದೆ ಮೀರಾಬಾಯಿ ಈ ಕೃತ್ಯ ನಡೆಸಿದ್ದಾರೆ ಎಂಬ ಮಾತು ಪರಿಸರದಲ್ಲಿ ಕೇಳಿಬರುತ್ತಿದೆ. ಪೊಲೀಸರು ಈ ವಿಚಾರಗಳನ್ನು ಗಮನದಲ್ಲಿಟ್ಟುಕೊಂಡು ತನಿಖೆ ನಡೆಸುತ್ತಿದ್ದಾರೆ.