ವಿಧಾನಸೌಧ ಎಂಬುದು ಪ್ರಜಾಪ್ರಭುತ್ವದ ದೇಗುಲವಿದ್ದಂತೆ: ಶಾಸಕ ಬಂಡೆಪ್ಪ ಖಾಶೆಂಪುರ್

ಬೀದರ್ (ಫೆ.24): ವಿಧಾನಸೌಧ ಎಂಬುದು ಪ್ರಜಾಪ್ರಭುತ್ವದ ದೇಗುಲವಿದ್ದಂತೆ. ಈ ದೇಗುಲಕ್ಕೆ ಪ್ರವೇಶ ಮಾಡುವುದೇ ಒಂದು ದೊಡ್ಡಮಟ್ಟದ ಸಾಧನೆಯಾಗಿದೆ ಎಂದು ಮಾಜಿ ಸಚಿವರು, ಜೆಡಿಎಸ್ ಶಾಸಕಾಂಗ ಪಕ್ಷದ ಉಪನಾಯಕರು, ಜೆಡಿಎಸ್ ಕೋರ್ ಕಮಿಟಿಯ ಅಧ್ಯಕ್ಷರು, ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರಾಗಿರುವ ಬಂಡೆಪ್ಪ ಖಾಶೆಂಪುರ್ ರವರು ಹೇಳಿದರು.


ಬೆಂಗಳೂರಿನ ವಿಧಾನಸೌಧದಲ್ಲಿ ಶುಕ್ರವಾರ ನಡೆದ ಹದಿನೈದನೇ ವಿಧಾನಸಭೆಯ ಹದಿನೈದನೇ ಅಧಿವೇಶನದ 11ನೇ ಹಾಗೂ ಕೊನೆಯ ದಿನದ ಕಲಾಪ (ಬಜೆಟ್ ಅಧಿವೇಶನದ ಕೊನೆಯ ದಿನದ ಕಲಾಪ) ದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಡಾ. ಬಿ.ಆರ್ ಅಂಬೇಡ್ಕರ್ ರವರು ವಿಶ್ವದಲ್ಲೇ ಶ್ರೇಷ್ಠ ಸಂವಿಧಾನ ರೂಪಿಸಿಕೊಟ್ಟಿದ್ದಾರೆ. ಆ ಸಂವಿಧಾನದಡಿಯಲ್ಲಿ ವಿಧಾನಸೌಧ ಎಂಬುದು ದೇವಸ್ಥಾನವಿದ್ದಂತೆ. ಈ ದೇವಸ್ಥಾನಕ್ಕೆ ಪ್ರವೇಶ ಮಾಡುವುದೇ ಒಂದು ದೊಡ್ಡಮಟ್ಟದ ಸಾಧನೆಯಾಗಿದೆ ಎಂದರು.
ವಿಶೇಷವಾಗಿ ನಾನು ನನ್ನ ಬೀದರ್ ದಕ್ಷಿಣ ಕ್ಷೇತ್ರದ ಜನರಿಗೆ ವಿಧಾನಸಭೆಯ ಮೂಲಕ ವಿಶೇಷ ಕೃತಜ್ಞತೆ ಸಲ್ಲಿಸುತ್ತೇನೆ. ನನ್ನ ಕ್ಷೇತ್ರದ ಜನತೆಯ ಆಶೀರ್ವಾದದಿಂದ ನಾನು ವಿಧಾನಸೌಧ ಎಂಬ ದೇಗುಲಕ್ಕೆ ಪ್ರವೇಶ ಪಡೆದುಕೊಂಡಿದ್ದೇನೆ. 15ನೇ ವಿಧಾನಸಭೆಯಲ್ಲಿ ನಾನು ಸಚಿವನಾಗಿ ಮತ್ತು ವಿರೋಧ ಪಕ್ಷದ ಸ್ಥಾನದಲ್ಲೂ ಉಪನಾಯಕನಾಗಿ ಕೆಲಸ ಮಾಡಿದ್ದೇನೆ.


ರೈತ ಕುಟುಂಬದಿಂದ ಬಂದು ಪ್ರಧಾನಮಂತ್ರಿಯವರೆಗೂ ಹೋಗಿರುವ ವಿಶೇಷ ವ್ಯಕ್ತಿತ್ವ ನಮ್ಮ ದೇವೇಗೌಡರದ್ದಾಗಿದ್ದೆ. ಅವರು ರಾಜ್ಯದ ಸಮಸ್ಯೆಗಳನ್ನು ಪರಿಹರಿಸುವ ಕೆಲಸ ಮಾಡುತ್ತಿರುವುದು, ಕರ್ನಾಟಕದ ಗೌರವವೆನಿಸುತ್ತಿದೆ. ಅಂತವರ ಮತ್ತು ಕುಮಾರಸ್ವಾಮಿರವರ ಆಶೀರ್ವಾದದಿಂದ ನಾನು ಮಂತ್ರಿಯಾಗಿ ಕೆಲಸ ಮಾಡಿದ್ದೇನೆ.
ಬುದ್ದ, ಬಸವ, ಕನಕ, ಅಂಬಿಗರ ಚೌಡಯ್ಯ, ಅಂಬೇಡ್ಕರ್ ರಂತಹ ಮಹಾತ್ಮರು ಸಮಾನತೆಗಾಗಿ ಹೋರಾಡಿದ್ದಾರೆ. ಈ ದೇಗುಲದಲ್ಲಿರುವ ನಾವೆಲ್ಲರೂ ಅವರ ಹಾದಿಯಲ್ಲಿ ಸಾಗುವ ಕೆಲಸ ಮಾಡಬೇಕಾಗಿದೆ. ಸಾರ್ವಜನಿಕ ಜೀವನದಲ್ಲಿ ಬಂದಾಗ ನಮ್ಮ ನಡೆ, ನುಡಿಯನ್ನು ಎಲ್ಲರೂ ಗಮನಿಸುತ್ತಿರುತ್ತಾರೆ. ಗ್ರಾಮ ಪಂಚಾಯತಿ, ತಾಲೂಕು ಪಂಚಾಯತಿ, ಜಿಲ್ಲಾ ಪಂಚಾಯತಿಗಳಿಗಿಂತ ಶಾಸಕ ಸ್ಥಾನ ಬಹಳ ಮಹತ್ವದ್ದಾಗಿರುತ್ತದೆ. ಶಾಸಕರಿಗೆ ಹೆಚ್ಚಿನ ಮಹತ್ವವನ್ನು ಜನರು ನೀಡುತ್ತಾರೆ. ಹಾಗಾಗಿ ನಮ್ಮ ಜವಾಬ್ದಾರಿ ಬಹಳ ಮುಖ್ಯವಾಗಿರುತ್ತದೆ ಎಂದರು.


ಕೊರೊನಾ ಸಂದರ್ಭವನ್ನು ನೆನಪಿಸಿಕೊಂಡ ಖಾಶೆಂಪುರ್:
ನನಗೆ ಕೊರೊನಾ ಬಂದಾಗ ನಾನು 22 ದಿನ ಮಣಿಪಾಲ್ ಆಸ್ಪತ್ರೆಯಲ್ಲಿದ್ದೆ. 6 – 7 ದಿನ ಆಕ್ಸಿಜನ್ ನಲ್ಲಿದ್ದೆ. ಆ ಸಂದರ್ಭದಲ್ಲಿ ನಾನು ಗುಣಮುಖನಾಗಲಿ ಎಂದು ನನ್ನ ಕ್ಷೇತ್ರದ ಜನ ಮಂದಿರ, ಮಸೀದಿ, ಚರ್ಚ್ ಗಳಲ್ಲಿ ಪ್ರಾರ್ಥಿಸಿ ನನಗೆ ವಿಡಿಯೋಗಳನ್ನು ಕಳಿಸಿದ್ದರು. ಅವುಗಳನ್ನು ನೋಡುವಾಗ ನನಗೆ ಕಣ್ಣೀರು ಬರುತ್ತಿತ್ತು. ಅದನ್ನೆಲ್ಲಾ ನೋಡಿದಾಗ ನಾವು ನಮ್ಮ ಮನೆಯ ಆಸ್ತಿ ಮಾತ್ರವಲ್ಲ. ಜನರ ಆಸ್ತಿ ಇದ್ದಿವಿ ಎನಿಸುತ್ತದೆ.


ನಮ್ಮ ಜನರು ನಮ್ಮ ಮೇಲೆ ಹೇಗೆ ವಿಶ್ವಾಸವಿಟ್ಟಿರುತ್ತಾರೆಯೋ ಅಷ್ಟೇ ಪ್ರಾಮಾಣಿಕವಾಗಿ ನಾವು ಕೆಲಸ ಮಾಡಬೇಕಾಗಿರುತ್ತದೆ. ವಿಧಾನಸಭೆ ಮತ್ತು ವಿಧಾನಸಭೆಯ ಹೊರಗೆ ಕೂಡ ನಾವೆಲ್ಲರೂ ಪ್ರಾಮಾಣಿಕವಾಗಿ ಕೆಲಸ ಮಾಡಬೇಕಾಗುತ್ತದೆ ಎಂದರು.


ಅಧಿವೇಶನದಲ್ಲಿ ನೀಡುವ ಆಶ್ವಾಸನೆಗಳು ಈಡೇರಿಸಬೇಕು:
ಶಾಸಕರಾದ ನಾವು ಪ್ರಶ್ನೋತ್ತರಗಳಲ್ಲಿ ಪಾಲ್ಗೊಳ್ಳುತ್ತೇವೆ. ಮಂತ್ರಿಗಳ ಉತ್ತರದಿಂದ ನಮ್ಮ ಜನರು ಖುಷಿಯಾಗಿರುತ್ತಾರೆ. ಆದರೇ ಅದು ಕಾರ್ಯರೂಪಕ್ಕೆ ಬರುವುದು ಬಹಳಷ್ಟು ಕಡಿಮೆಯಾಗಿದೆ. ಒಂದು ಬಾರಿ ಶಾಸಕರ ಪ್ರಶ್ನೆಗೆ ಉತ್ತರ ಸಿಕ್ಕಮೇಲೆ ಅದು ಕಾರ್ಯರೂಪಕ್ಕೆ ಬರಬೇಕು. ಆ ಕೆಲಸ ಮುಂದಿನ ದಿನಗಳಲ್ಲಿ ಅಧ್ಯಕ್ಷರ ಪೀಠದಿಂದ ಆಗಬೇಕು. ಜನ ನಮ್ಮ ಮೇಲೆ ನಿರೀಕ್ಷೆ ಇಟ್ಟುಕೊಂಡಿರುತ್ತಾರೆ. ಆ ನಿರೀಕ್ಷೆಗಳನ್ನು ನಾವು ಪೂರೈಸುವ ಕೆಲಸ ಮಾಡಬೇಕಾಗಿರುತ್ತದೆ.


ಪ್ರಜಾಪ್ರಭುತ್ವದ ದೇಗುಲದಲ್ಲಿ ನಾವು ಎಷ್ಟು ದಿನ ಅಧಿಕಾರದಲ್ಲಿ ಇರುತ್ತೇವೆ ಎಂಬುದು ಮುಖ್ಯವಲ್ಲ. ನಾವು ಏನೆನೂ ಕೆಲಸ ಮಾಡಿದ್ದೇವೆ ಎಂಬುದು ಬಹಳಷ್ಟು ಮುಖ್ಯವಾಗಿರುತ್ತದೆ. ಆಗಾಗಿ ನಾವೆಲ್ಲರೂ ಒಳ್ಳೆಯ ಕೆಲಸ ಮಾಡಬೇಕಾಗಿದೆ. ನನಗೆ ಅಧ್ಯಕ್ಷರ ಪೀಠದಿಂದ ಬಹಳಷ್ಟು ಅವಕಾಶ ಸಿಕ್ಕಿದೆ. ತಾವು ವಿಧಾನಸಭೆಯ ಜೊತೆಗೆ ಹತ್ತಾರು ಹೊಸ ಹೊಸ ಪ್ರಯೋಗಗಳನ್ನು ಮಾಡಿದ್ದಿರಿ. ಅವೆಲ್ಲವುಗಳು ಐತಿಹಾಸಿಕವಾಗಿವೆ ತಮಗೂ ಧನ್ಯವಾದಗಳನ್ನು ಸಲ್ಲಿಸುತ್ತೇನೆಂದು ಸ್ಪೀಕರ್ ವಿಶೇಶ್ವರ ಹೆಗಡೆ ಕಾಗೇರಿಯವರಿಗೆ ಮತ್ತು ಬೀದರ್ ದಕ್ಷಿಣ ಕ್ಷೇತ್ರದ ಜನತೆಗೆ ಶಾಸಕ ಬಂಡೆಪ್ಪ ಖಾಶೆಂಪುರ್ ರವರು ಸದನದ ಮೂಲಕ ಧನ್ಯವಾದಗಳನ್ನು ಸಲ್ಲಿಸಿದರು.

Latest Indian news

Popular Stories