ಬೀದರ್‌ | ಅಂಬೇಡ್ಕರ್‌-ಬಸವೇಶ್ವರ ಭಾವಚಿತ್ರ ಅಳವಡಿಕೆ ವಿವಾದ: ಗ್ರಾಮದಲ್ಲಿ ಬಿಗುವಿನ ವಾತಾವರಣ

ಬೀದರ್ | ಜಿಲ್ಲೆಯ ಕೌಡಗಾಂವ್ ಗ್ರಾಮದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಭಾವಚಿತ್ರ ಅಳವಡಿಸಿರುವುದಕ್ಕೆ ಪ್ರತಿಯಾಗಿ ಅದರ ಸಮೀಪದಲ್ಲೇ ಸೋಮವಾರ ರಾತ್ರಿ ಬಸವೇಶ್ವರರ ಭಾವಚಿತ್ರವಿರುವ ಧ್ವಜ ಕಟ್ಟೆ ನಿರ್ಮಿಸಲಾಗಿದ್ದು, ಗ್ರಾಮದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ.

IMG 20240207 WA0053 Bidar

ಬೀದರ್-ಔರಾದ್ ಹೆದ್ದಾರಿಗೆ ಹೊಂದಿಕೊಂಡಿರುವ ಕೌಡಗಾಂವ್ ಗ್ರಾಮದಲ್ಲಿ ಎರಡು ವಾರಗಳ ಹಿಂದೆ ಡಾ.ಅಂಬೇಡ್ಕರ್ ಭಾವಚಿತ್ರ ಅಳವಡಿಸಲಾಗಿತ್ತು. ಈ ರೀತಿ ಭಾವಚಿತ್ರ ಅಳವಡಿಸಲು ಅವಕಾಶ ಇಲ್ಲ. ಅದನ್ನು ತೆಗೆಯಬೇಕು ಎಂದು ಪೊಲೀಸರು ಹೇಳಿದ್ದರೂ ಪರಿಶಿಷ್ಟ ಜಾತಿಯವರು ಅದಕ್ಕೆ ಸಹಮತ ವ್ಯಕ್ತಪಡಿಸಲಿಲ್ಲ. ಗ್ರಾಮದಲ್ಲಿನ ಎಲ್ಲಾ ಧಾರ್ಮಿಕ ಸ್ಥಳಗಳು, ಮಹಾಪುರುಷರ ಮೂರ್ತಿಗಳನ್ನು ತೆರವುಗೊಳಿಸಿದರೆ ಅಂಬೇಡ್ಕರ್‌ ಭಾವಚಿತ್ರ ತೆರವುಗೊಳಿಸುತ್ತೇವೆ ಎಂದು ಪಟ್ಟು ಹಿಡಿದು ಧರಣಿ ನಡೆಸುತ್ತಿದ್ದಾರೆ.

ಈ ಮಧ್ಯೆ ಸೋಮವಾರ ರಾತ್ರಿ ಲಿಂಗಾಯತ ಸಮಾಜದವರು ಬಸವೇಶ್ವರರ ಚಿತ್ರವಿರುವ ಧ್ವಜ ಕಟ್ಟೆ ನಿರ್ಮಿಸಿದ್ದರಿಂದ ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಭಾವಚಿತ್ರಗಳನ್ನು ತೆರವುಗೊಳಿಸಲಾಗಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ವದಂತಿ ಹರಡಿದ್ದರಿಂದ ಪರಿಸ್ಥಿತಿ ಇನ್ನಷ್ಟು ವಿಷಮಗೊಂಡಿತ್ತು. ಮುನ್ನೆಚ್ಚರಿಕೆ ಕ್ರಮವಾಗಿ ಗ್ರಾಮದಲ್ಲಿ ಪೊಲೀಸ್‌ ಬಿಗಿ ಬಂದೋಬಸ್ತ್‌ ಮಾಡಲಾಗಿದೆ.

ಗ್ರಾಮದಲ್ಲಿ ಯಾವುದೇ ತೆರವು ಕಾರ್ಯಾಚರಣೆ ಮಾಡಿಲ್ಲ. ಗ್ರಾಮದಲ್ಲಿ ಮಹಾಪುರುಷರ ಸ್ಥಳಗಳನ್ನು ತಾಲ್ಲೂಕು ಆಡಳಿತದಿಂದ ತೆರವುಗೊಳಿಸುತ್ತಿರುವುದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿ ಹರಡಿರುವುದು ಗಮನಕ್ಕೆ ಬಂದಿದೆ. ಸದ್ಯ ಗ್ರಾಮದ ಎಲ್ಲಾ ಸಮುದಾಯಗಳ ನಡುವೆ ಸೌಹಾರ್ದಯುತವಾಗಿ ಮಾತುಕತೆಗಳು ನಡೆಯುತ್ತಿವೆ. ಹೀಗಾಗಿ ಯಾವುದೇ ತೆರವು ಕಾರ್ಯಾಚರಣೆ ಮಾಡಿಲ್ಲ’ ಎಂದು ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ತಿಳಿಸಿದ್ದಾರೆ.

Latest Indian news

Popular Stories