ಬೀದರ್ ಜಿಲ್ಲೆಯ ವಿವಿಧ ಕಡೆ ಬೆಳೆದ ಬಿಳಿ ಜೋಳ ಬೆಳೆ ಹುಲುಸಾಗಿ ಬೆಳೆದು ನಿಂತಿದೆ. ಸದ್ಯ ಹಾಲುಗಾಳು ಜೋಳಕ್ಕೆ ಹಕ್ಕಿಗಳ ಕಾಟ ವಿಪರೀತವಾಗಿದೆ. ಈ ಹಕ್ಕಿಗಳಿಂದ ರಕ್ಷಿಸಿಕೊಳ್ಳಲು ರೈತರು ಗೊಂಬೆ, ಪೀಪಿ ಹೊಡೆಯುವುದು ಸೇರಿದಂತೆ ವಿವಿಧ ತಂತ್ರಜ್ಞಾನಗಳ ಮೊರೆ ಹೋಗುತ್ತಿದ್ದಾರೆ.
ಹಕ್ಕಿಗಳಿಗೆ ಬಿಳಿ ಜೋಳದ ಹಾಲುಗಾಳು ಎಂದರೆ ಎಲ್ಲಿಲ್ಲದ ಪ್ರೀತಿ. ಹೀಗಾಗಿ ಈ ಸಮಯದಲ್ಲಿ ಹಕ್ಕಿಗಳು ಹಿಂಡು ಹಿಂಡಾಗಿ ಬಂದು ಜೋಳದ ತೆನೆಗಳಿಗೆ ಹೆಕ್ಕಿ ಹೆಕ್ಕಿ ತಿನ್ನುತ್ತವೆ. ಅವುಗಳನ್ನು ಓಡಿಸಲು ಹರಸಾಹಸ ಪಡುವ ರೈತರು ಇದೀಗ ತಂತ್ರಜ್ಞಾನದ ಮೊರೆ ಹೋಗಿದ್ದಾರೆ.
‘ಹಿಂದೆ ಹಕ್ಕಿಗಳನ್ನು ಓಡಿಸುವುದಕ್ಕಾಗಿ ಡಬ್ಬಗಳಿಂದ ಶಬ್ದ ಮಾಡುತ್ತಿದ್ದರು. ಹೊಲದ ಸುತ್ತಲೂ ಶಬ್ದ ಬರುವ ಹಾಗೆ ಸೀರೆಗಳನ್ನು ಕಟ್ಟುತ್ತಿದ್ದರು. ಆದರೆ ಪ್ರಸ್ತುತ ದಿನಗಳಲ್ಲಿ ಧ್ವನಿ ವರ್ಧಕಗಳು, ಪೀಪಿ ಉದುವುದು, ಮನುಷ್ಯನಾಕಾರದ ಗೊಂಬೆಗಳನ್ನು ಸಿದ್ಧಪಡಿಸಿ ನಿಲ್ಲಿಸುವುದು, ಜೋಳದ ತೆನೆಗೆ ಪ್ಲಾಸ್ಟಿಕ್ ಕ್ಯಾರಿ ಬ್ಯಾಗ್ ಕಟ್ಟುವುದು ಸೇರಿದಂತೆ ಹಲವು ಬಗೆಯ ತಂತ್ರಗಳನ್ನು ಬಳಸುತ್ತಿದ್ದಾರೆ.
ಪ್ರತಿದಿನ ನಸುಕಿನ ಜಾವ ಐದು ಗಂಟೆಯಾದರೆ ಸಾಕು ರೈತರು ಹೊಲಗಳತ್ತ ಧಾವಿಸುವುದೇ ಅವರಿಗಿರುವ ಚಿಂತೆಯಾಗಿತ್ತು. ಆದರೆ ಸದ್ಯ ತಂತ್ರಜ್ಞಾನದ ಬಳಕೆಯಿಂದಾಗಿ ನಿಟ್ಟುಸಿರು ಬಿಡುವಂತಾಗಿದೆ ಎಂದು ಜೋಳ ಬೆಳೆದ ರೈತ ಅನಿಲ ಸಂತಸ ವ್ಯಕ್ತಪಡಿಸುತ್ತಾರೆ.
ಹೋಬಳಿಯ ಚಳಕಾಪುರ, ದಾಡಗಿ, ಮದಕಟ್ಟಿ, ಕುರುಬಖೇಳಗಿ ಸೇರಿದಂತೆ ಇನ್ನಿತರ ಗ್ರಾಮಗಳಲ್ಲಿ ಫಲವತ್ತಾದ ಕಪ್ಪು ಮಣ್ಣಿನಿಂದ ಕೂಡಿದ ಭೂಮಿ ಇದೆ. ಹೀಗಾಗಿ ಈ ಭಾಗದಲ್ಲಿ ಬಿಳಿ ಜೋಳ ಹೆಚ್ಚಾಗಿ ಬೆಳೆಯುತ್ತಾರೆ. ಅದರಂತೆ ಬೆಳೆಯೂ ಚನ್ನಾಗಿ ಬಂದಿದೆ. ಹೀಗಾಗಿ ಈ ಬಾರಿ ಹೆಚ್ಚಿನ ಇಳುವರಿ ಬರುವ ನಿರೀಕ್ಷೆಯಲ್ಲಿ ರೈತರಿದ್ದಾರೆ.
‘ಹಾಲುಗಾಳು ಜೋಳದ ತೆನೆಯನ್ನು ಬೆಂಕಿಯಲ್ಲಿ ಸ್ವಲ್ಪ ಬೇಯಿಸಿ ತಿನ್ನಲು ಜನ ಮುಗಿ ಬೀಳುತ್ತಾರೆ. ಹೀಗಾಗಿ ರೈತರು ತಮ್ಮ ನೆಂಟರಿಷ್ಟರು, ಬಂಧು ಬಳಗದವರನ್ನು ಹೊಲಕ್ಕೆ ಕರೆಸಿ ಅವುಗಳನ್ನು ಬೆಯಿಸಿ ಉಪ್ಪು, ಖಾರಾ ಬೆರೆಸಿ ತಿನ್ನುತ್ತಾರೆ. ಅದರ ಆನಂದ ತಿಂದವರಿಗಷ್ಟೇ ಗೋತ್ತಾಗುತ್ತದೆ’ ಎಂದು ಹಿರಿಯರಾದ ಧನರಾಜ ಮುತ್ತಂಗೆ ಹೇಳುತ್ತಾರೆ.
ಗ್ರಾಮದಲ್ಲಿ ಬೆಳೆದ ಜೋಳದ ಹೊಲದಲ್ಲಿ ಮನುಷ್ಯಾಕಾರದ ಗೊಂಬೆ ಸಿದ್ಧಪಡಿಸಿ ನಿಲ್ಲಿಸಿರುವುದು
ಹಾಲುಗಾಳು ಸವಿಯಲು ಉತ್ಸುಕತೆ ತೋರುವ ಜನರು ಹೊಲದ ಮಧ್ಯದಲ್ಲಿ ಧ್ವನಿವರ್ಧಕ ಅಳವಡಿಕೆ ಮಾಡಿದ್ದಾರೆ
ಪ್ರಸಕ್ತ ಸಾಲಿನಲ್ಲಿ ಎಲ್ಲೆಡೆ ಜೋಳ ಹುಲುಸಾಗಿ ಬೆಳೆದಿದೆ. ಅದಕ್ಕೆ ತಕ್ಕಂತೆ ಮಾರುಕಟ್ಟೆಯಲ್ಲಿ ಬೆಲೆಯೂ ಚೆನ್ನಾಗಿದೆ. ಹೀಗಾಗಿ ಈ ಬಾರಿ ಉತ್ತಮ ಆದಾಯ ಬರುವ ನಿರೀಕ್ಷೆಯಿದೆ-
– ಅನಿಲ ಜಾಧವ್ ರೈತ