ಲೋಕಸಭೆ ಚುನಾವಣೆ: ಟಿಕೆಟ್‌ ಘೋಷಣೆ ಬೆನ್ನಲ್ಲೇ ಜಿಲ್ಲೆಗೆ ಬಂದ ಕೇಂದ್ರ ಸಚಿವ ಖೂಬಾ

ಮುಂಬರುವ ಲೋಕಸಭೆ ಚುನಾವಣೆಗೆ ಬೀದರ್‌ ಕ್ಷೇತ್ರದಿಂದ ಬಿಜೆಪಿ ಟಿಕೆಟ್‌ ಘೋಷಣೆಯಾದ ಬೆನ್ನಲ್ಲೇ ಕೇಂದ್ರ ಸಚಿವ ಭಗವಂತ ಖೂಬಾ ಅವರು ಗುರುವಾರ ಜಿಲ್ಲೆಗೆ ಆಗಮಿಸಿದರು.

ಬುಧವಾರ ಸಂಜೆ ಬಿಜೆಪಿ ಬಿಡುಗಡೆಗೊಳಿಸಿದ ರಾಜ್ಯದ 20 ಕ್ಷೇತ್ರಗಳ ಅಭ್ಯರ್ಥಿಗಳಲ್ಲಿ ಖೂಬಾ ಹೆಸರು ಸೇರಿತ್ತು.

ಬಿಜೆಪಿ ಶಾಸಕರಾದ ಪ್ರಭು ಚವಾಣ್‌, ಶರಣು ಸಲಗರ, ಮಾಜಿ ಶಾಸಕ ಸುಭಾಷ ಕಲ್ಲೂರ ಅವರ ತೀವ್ರ ವಿರೋಧದಿಂದಾಗಿ ಅವರಿಗೆ ಟಿಕೆಟ್‌ ಸಿಗುತ್ತದೆಯೋ ಅಥವಾ ಇಲ್ಲವೋ ಎಂಬ ಕುತೂಹಲ ಮನೆ ಮಾಡಿತ್ತು. ಅಂತಿಮವಾಗಿ ಬಿಜೆಪಿ ಹೈಕಮಾಂಡ್‌ ವಿರೋಧ ಲೆಕ್ಕಿಸದೆ ಖೂಬಾ ಅವರಿಗೆ ಮೂರನೇ ಸಲ ಟಿಕೆಟ್‌ ನೀಡಿದೆ.

ಹೈದರಾಬಾದ್‌ ಮೂಲಕ ಬಂದ ಭಗವಂತ ಖೂಬಾ ಅವರನ್ನು ತೆಲಂಗಾಣ ಗಡಿಯಲ್ಲಿ ಅವರ ಬೆಂಬಲಿಗರು, ಕಾರ್ಯಕರ್ತರು ಹೂಮಾಲೆ ಹಾಕಿ ಸ್ವಾಗತಿಸಿದರು. ಆನಂತರ ಅವರು ಗಡಿ ಭಾಗದ ರೇಜಂತಲ್‌ ಸಿದ್ಧಿ ವಿನಾಯಕ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದರು. ಬಳಿಕ ಅವರು ನಗರದ ಪಾಪನಾಶ ದೇವಸ್ಥಾನಕ್ಕೆ ಹೋಗಿ ದೇವರ ದರ್ಶನ ಪಡೆದರು.

ಬಳಿಕ ಅವರು ಔರಾದ್‌ ಅಮರೇಶ್ವರ ದೇವಸ್ಥಾನಕ್ಕೆ ತೆರಳುವರು. ಆನಂತರ ಅವರ ತಾಯಿಯ ಸಮಾಧಿಗೆ ತೆರಳಿ ದರ್ಶನ ಪಡೆಯುವರು. ಸಂಜೆ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆಯಲಿರುವ ‘ದಿಶಾ’ ಸಭೆಯಲ್ಲಿ ಭಾಗವಹಿಸುವರು. ಇಳಿಸಂಜೆಯಲ್ಲಿ ಮೆಟಲ್‌ಕುಂಟಾ ರೈಲ್ವೆ ಅಂಡರ್‌ಬ್ರಿಡ್ಜ್‌ ಕಾಮಗಾರಿಗೆ ಚಾಲನೆ ನೀಡುವರು.

Bidar; ನನ್ನೆದುರು ಸ್ಪರ್ಧಿಸಲು ಕಾಂಗ್ರೆಸ್ ನಲ್ಲಿ ಅಭ್ಯರ್ಥಿಗಳಿಲ್ಲ: ಭಗವಂತ ಖೂಬಾ

ಬೀದರ್ ಲೋಕಸಭೆ ಚುನಾವಣೆಯಲ್ಲಿ ನಮ್ಮ ವಿರುದ್ಧ ಸ್ಪರ್ಧೆ ಮಾಡಲು ಕಾಂಗ್ರೆಸ್ ಪಕ್ಷದ ಮುಖಂಡರಿಗೆ ಅವರ ಪಕ್ಷದಲ್ಲಿ ಸಮರ್ಥ ಅಭ್ಯರ್ಥಿಗಳೇ ಸಿಗುತ್ತಿಲ್ಲಾ, ಎಲ್ಲವೂ ರಿಜೆಕ್ಟ್ ಕ್ಯಾಂಡಿಡೇಟ್ ಇದ್ದಾರೆ. ಈ ಬಾರಿ ಎರಡು ಲಕ್ಷ ಮತಗಳ ಅಂತರದಿಂದ ನಮ್ಮ ಗೆಲುವು ಖಚಿತವಾಗಿದೆ ಕೇಂದ್ರ ಸಚಿವ ಭಗವಂತ ಖೂಬಾ ತಿಳಿಸಿದ್ದಾರೆ.
ಮೂರನೇ ಬಾರಿ ಬಿಜೆಪಿ ಬೀದರ ಲೋಕಸಭೆ ಅಭ್ಯರ್ಥಿಯಾಗಿ ಟಿಕೆಟ್ ಘೋಷಣೆಯಾದ ಬಳಿಕ ಪಟ್ಟಣದ ಅಮರೇಶ್ವರ ಮಂದಿರಕ್ಕೆ ಬಂದು ದರ್ಶನ ಪಡೆದು ಮಾತಾಡಿದರು.

ಕಳೆದ ಹತ್ತು ವರ್ಷದ ಅವಧಿಯಲ್ಲಿ ನಾವು ಮಾಡಿರುವ ಅಭಿವೃದ್ಧಿಯ ಕಾಮಗಾರಿಗಳು ಹಾಗೂ ದೇಶದ ಹೆಮ್ಮೆಯ ಪ್ರಧಾನಿ ಮಾರ್ಗದರ್ಶನದಲ್ಲಿ ನಡೆದುಕೊಂಡು ಬಂದ ನಮ್ಗೆ ಈ ಬಾರಿ ಎರಡು ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಗೆಲುವು ಸಿಗಲ್ಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಪಟ್ಟಣದ ಆರಾಧ್ಯ ದೇವ ಅಮರೇಶ್ವರ ಆರ್ಶಿವಾದ ಹಾಗೂ ಬೀದರ ಲೋಕಸಭೆ ಕ್ಷೇತ್ರದ ಮತದಾರರ ಆಶೀರ್ವಾದ ನಮ್ಮ ಬೆನ್ನಿಗೆ ಇರುವಾಗ ಚುನಾವಣೆ ಹಾಗೂ ಟಿಕೆಟ್ ಪಡೆಯಲು ನಮ್ಮಗೆ ಸಮಸ್ಯೆಯಾಗಿಲ್ಲಾ. ರಾಜಕೀಯದಲ್ಲಿ ಅಡೆ ತಡೆಗಳು ಬರುವುದು ಸರ್ವ ಸಾಮಾನ್ಯವಾಗಿದೆ. ಅದನ್ನು ಶಾಂತಿಯಿಂದ ನಿಭಾಯಿಸಿಕೊಂಡು ಹೋಗುವುದೊಂದೆ ದೊಡ್ಡ ಸಾಧನೆಯಾಗುತ್ತದೆ ಎಂದರು.

ಬಿಜೆಪಿ ಪಕ್ಷದ ಮುಖಂಡರ ಮದ್ಯೆ ವೈಮನಸ್ಸಿದೆ ಎನ್ನುವುದು ಗಾಳಿ ಸುದ್ದಿ:

ಪಕ್ಷದಲ್ಲಿರುವ ನಾವೆಲ್ಲರೂ ಒಂದೇ ಕುಟುಂಬದ ಸದಸ್ಯರಂತೆ ಇದ್ದೇವೆ. ಇದೆಲ್ಲವೂ ಕಾಂಗ್ರೆಸ್ ಪಕ್ಷದ ಶಕುನಿ ತಂತ್ರವಾಗಿದೆ. ಪಕ್ಷದಲ್ಲಿ ಒಡಕಿದೆ ಎಂದರೆ ತಮಗೆ ಅದರ ಲಾಭ ಸಿಗುತ್ತದೆ ಎನ್ನುವ ಹಗಲು ಕನಸು ಕಾಂಗ್ರೆಸ್ ಪಕ್ಷದ ಮುಖಂಡರು ಕಾಣುವುದನ್ನು ಬಿಟ್ಟು ತಾವು ಮಾಡಿರುವ ಸಾಧನೆಗಳ ಬಗ್ಗೆ ಜನತೆಯ ಮುಂದೆ ತಿಳಿಸಿ ಮತ ಕೇಳಲು ಮುಂದಾಗಿ ಎಂದು ಕೈ ನಾಯಕರ ವಿರುದ್ಧ ಖೂಬಾ ಮಾತಿನ ಸಮರ ಸಾರಿದರು.

ಮುಖಂಡ ಬಂಡೆಪ್ಪ ಕಂಟೆ, ದೀಪಕ ಪಾಟೀಲ್, ಸಂತೋಷ ಪಾಟೀಲ್ ದಯಾನಂದ ಹಳಿಖೇಡೆ, ಶರಣಪ್ಪ ಪಂಚಾಕ್ಷರೆ, ಸಚೀನ ಎಡವೆ, ಪ್ರಕಾಶ ಟೋಣ್ಣೆ, ಶ್ರೀರಂಗ ಪರಿಹಾರ, ರವೀಂದ್ರ ಮೀಸೆ, ರಾಜಕುಮಾರ ಮೀಸೆ, ರಾಜಕುಮಾರ ಚಿದ್ರೆ, ಶ್ರೀನಿವಾಸ ಖೂಬಾ, ಗುಂಡಯ್ಯಾ ಸ್ವಾಮಿ, ಅಮರ ಎಡವೆ, ರಾಜಹಂಸ ಶಟಕಾರ ಸೇರಿದಂತೆ ಇನ್ನಿತರರು ಇದ್ದರು.

Latest Indian news

Popular Stories