5 ವರ್ಷದ ಒಳಗಿನ ಪ್ರತಿ ಮಗುವಿಗೆ ಪೋಲಿಯೊ ಲಸಿಕೆ ಹಾಕಿಸಿ- ಗೋವಿಂದ ರೆಡ್ಡಿ

ಮಾರ್ಚ್ 3 ರಂದು ಬೀದರ ಜಿಲ್ಲೆಯಲ್ಲಿ ಆರೋಗ್ಯ ಇಲಾಖೆ ವತಿಯಿಂದ ಸಾರ್ವತ್ರಿಕ ಪಲ್ಸ್ ಪೋಲಿಯೊ ಲಸಿಕಾ ಕಾರ್ಯಕ್ರಮ ಹಮ್ಮಿಕೊಂಡಿದ್ದು ಸಾರ್ವಜನಿಕರು ತಮ್ಮ 5 ವರ್ಷದ ಒಳಗಿನ ಮಗುವಿಗೆ ತಪ್ಪದೇ ಪೋಲಿಯೊ ಲಸಿಕೆ ಹಾಕಿಸಿ ಎಂದು ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಹೇಳಿದರು.
ಅವರು ಬುಧವಾರ ಜಿಲ್ಲಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿ ಪಲ್ಸ್ ಪೋಲಿಯೊ ಸಾರ್ವತ್ರಿಕ ಲಸಿಕಾ ಕಾರ್ಯಕ್ರಮದ ಪೂರ್ವಭಾವಿ ಸಭೆಯಲ್ಲಿ ಅಧ್ಯಕ್ಷತೆವಹಿಸಿ ಮಾತನಾಡಿದರು.
ಮಗುವಿನ ಶಾಶ್ವತ ಅಂಗವಿಕಲತೆಯನ್ನು ತಡೆಯಲು ತಮ್ಮ ಮಗುವಿಗೆ ಎರಡು ಹನಿ ಪೋಲಿಯೊ ಲಸಿಕೆ ಹಾಕಿಸಿ, ಭಾರತ ಪೋಲಿಯೊ ಮುಕ್ತ ದೇಶವಾಗಿದೆ. ಆದರೆ ಕೆಲವು ದೇಶಗಳಲ್ಲಿ ಪೋಲಿಯೊ ಇನ್ನೂ ಭೀತಿಯನ್ನುಂಟು ಮಾಡುತ್ತಿದ್ದು ನಮ್ಮ ದೇಶದಲ್ಲಿ ಇದನ್ನು ಮರುಕಳಿಸುವ ಸಾಧ್ಯತೆ ಇರುವುದರಿಂದ ಪೋಲಿಯೊ ಲಸಿಕೆ ಹಾಕಲಾಗುತ್ತಿದೆ ಎಂದರು.

ಮಾರ್ಚ್ 3 ರಂದು ನಡೆಯುವ ಪೋಲಿಯೊ ಲಸಿಕಾ ಕಾರ್ಯಕ್ರಮ ಬೀದರ ಜಿಲ್ಲೆಯಲ್ಲಿ ಒಟ್ಟು 210212 ಮಕ್ಕಳಿಗೆ ಲಸಿಕೆ ಹಾಕುವ ಗುರಿ ಇದ್ದು 1001 ಪೋಲಿಯೊ ಭೂತಗಳನ್ನು ಬೀದರ ಜಿಲ್ಲೆಯಲ್ಲಿ ಮಾಡಲಾಗುತ್ತಿದೆ ಹಾಗೂ 13 ಮೊಬೈಲ್ ಟೀಂಗಳು ಕಾರ್ಯನಿರ್ವಹಿಸಲಿವೆ. ಆರೋಗ್ಯ ಇಲಾಖೆಯ ಅಧಿಕಾರಿ ಮತ್ತು ಸಿಬ್ಬಂದಿಗಳು ಆಶಾ ಅಂಗನವಾಡಿ ಕಾರ್ಯಕರ್ತರು ಸೇರಿದಂತೆ ಒಟ್ಟು. 2156 ಜನ ಲಸಿಕೆ ಹಾಕುವ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದು ಇದರ ಮೇಲ್ವಿಚಾರಣೆಗಾಗಿ 216 ಜನರಿಗೆ ನಿಯೋಜನೆ ಮಾಡಲಾಗಿದೆ. ಆರೋಗ್ಯ ಇಲಾಖೆಯ ಅಧಿಕಾರಿಗಳು, ಆಶಾ, ಅಂಗನವಾಡಿ ಕಾರ್ಯಕರ್ತೆಯರು ಪೋಲಿಯೊ ದಿನ ತಮ್ಮ ಮನೆ ಭೇಟಿಗೆ ಬಂದಾಗ ಅವರಿಗೆ ಸಹಕಾರ ನೀಡುವದರ ಜೊತೆಗೆ ತಮ್ಮ ಮಕ್ಕಳಿಗೆ ತಪ್ಪದೇ ಎರಡು ಹನಿ ಪೋಲಿಯೊ ಲಸಿಕೆ ಹಾಕಿಸಿ ಎಂದು ಹೇಳಿದರು.

ಮಾರ್ಚ್ 3 ರಂದು ಪೋಲಿಯೊ ಲಸಿಕೆಯನ್ನು ಭೂತಗಳಲ್ಲಿ ನೀಡಲಾಗುವುದು ಇದರಲ್ಲಿ ಬಿಟ್ಟು ಹೋದ ಮಕ್ಕಳಿಗೆ ಮಾರ್ಚ್ 4 ರಿಂದ 6 ರವರೆಗೆ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತರು ಮನೆಗಳಿಗೆ ತೆರಳಿ ಲಸಿಕೆ ಹಾಕಲಿದ್ದಾರೆ. ಈ ಲಸಿಕಾ ದಿನಗಳಲ್ಲಿ ಯಾವುದೇ ಸಮಸ್ಯೆಗಳಾಗದಂತೆ ಮುಂಜಾಗ್ರತೆವಹಿಸಿ ಎಂದು ಜಿಲ್ಲಾ ಆರೋಗ್ಯ ಅಧಿಕಾರಿಗಳಿಗೆ ಸೂಚನೆ ನೀಡಿದ ಅವರು ಆರೋಗ್ಯ ಇಲಾಖೆಯ ಅಧಿಕಾರಿ ಮತ್ತು ಸಿಬ್ಬಂದಿಗಳ ಅವಶ್ಯಕತೆಗೆ ತಕ್ಕಂತೆ ವಾಹನಗಳನ್ನು ಒದಗಿಸುವಂತೆ ಸಾರಿಗೆ ಇಲಾಖೆಯ ಅಧಿಕಾರಿಗಳಿಗೆ ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಜ್ಞಾನೇಶ್ವರ ನೀರುಗುಡೆ, ಡಾ.ಶಿವಶಂಕರ, ಆರ್.ಸಿ.ಎಚ್.ಅಧಿಕಾರಿ, ಡಾ.ಅನಿಲಕುಮಾರ ತಾಳಿಕೋಟಿ, ಡಾ. ರಾಜಶೇಖರ ಪಾಟೀಲ, ಡಾ. ಶಂಕ್ರೆಪ್ಪಾ ಬೊಮ್ಮಾ, ಡಾ. ದೀಪಾ ಖಂಡ್ರೆ ,ಕುಟುಂಬ ಕಲ್ಯಾಣ ಅಧಿಕಾರಿ ಡಾ ದೀಲಿಪ್ ಡೊಂಗರೆ,ಜಿಲ್ಲಾ ಕಾರ್ಯಕ್ರಮ ವ್ಯವಸ್ಫಾಪಕರು ಉಮೇಶ ಬಿರಾದರ, ಶಿವಶಂಕರ್ ಬೆಮಳಗಿ,ಲೊಕೇಶ್ ಸೇರಿದಂತೆ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಆರೋಗ್ಯ ಅಧಿಕಾರಿಗಳು ಹಾಗೂ ಕಾರ್ಯಕ್ರಮ ಅನುಷ್ಠಾನಾಧಿಕಾರಿಗಳು ಸೇರಿದಂತೆ ಇತರರು ಉಪಸ್ಥಿತರಿದ್ದರು.

Latest Indian news

Popular Stories