ಕಲ್ಯಾಣ ಕರ್ನಾಟಕ ಜಾಂಬೊರೇಟ್‍ನಲ್ಲಿ ಯೋಗ ಪ್ರಾತ್ಯಕ್ಷಿಕೆ, ಅಗ್ನಿ ಅನಾಹುತ: ಅಣಕು ಪ್ರದರ್ಶನ

ಬೀದರ್: ಇಲ್ಲಿಯ ಶಹಾಪುರ ಗೇಟ್ ಸಮೀಪದ ಶಾಹೀನ್ ಪದವಿಪೂರ್ವ ವಿಜ್ಞಾನ ಕಾಲೇಜು ಆವರಣದಲ್ಲಿ ನಡೆಯುತ್ತಿರುವ ಕಲ್ಯಾಣ ಕರ್ನಾಟಕ ಪ್ರಥಮ ಜಾಂಬೊರೇಟ್ ಶನಿವಾರ ವಿದ್ಯಾರ್ಥಿಗಳಲ್ಲಿ ಅಗ್ನಿ ಅನಾಹುತ ತಡೆ ಹಾಗೂ ಯೋಗ ಜಾಗೃತಿಗೂ ವೇದಿಕೆ ಆಯಿತು.

IMG 20240210 WA0062 Bidar

ಜಿಲ್ಲಾ ಅಗ್ನಿಶಾಮಕ ಅಧಿಕಾರಿ ರವೀಂದ್ರ ಅಶೋಕ ಘಾಟಗೆ ಅವರ ನೇತೃತ್ವದಲ್ಲಿ ಅಗ್ನಿಶಾಮಕ ಠಾಣೆಯ 15 ಸಿಬ್ಬಂದಿ ಅಗ್ನಿ ಅನಾಹುತ ತಡೆ ಅಣಕು ಪ್ರದರ್ಶನ ನೀಡಿದರು.
ಮನೆಯಲ್ಲಿ ಆಕಸ್ಮಿಕ ಬೆಂಕಿ ಅವಘಡ, ಪೆಟ್ರೊಲ್, ಡೀಸೆಲ್‍ಗೆ ಬೆಂಕಿ, ಅಡುಗೆ ಅನಿಲ್ ಸಿಲಿಂಡರ್‍ಗೆ ಬೆಂಕಿ, ಸ್ಫೋಟ ಸಂಭವಿಸಿದಾಗ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಕುರಿತು ಮಾಹಿತಿ ನೀಡಿದರು.

ಅಗ್ನಿ ಅನಾಹುತ ಸಂಭವಿಸಿದಾಗ ಮೊದಲಿಗೆ ಏನು ಮಾಡಬೇಕು. ಬೆಂಕಿಯನ್ನು ಹೇಗೆ ನಿಯಂತ್ರಿಸಬೇಕು. ಕಟ್ಟಡದೊಳಗೆ ಸಿಕ್ಕಿ ಹಾಕಿಕೊಂಡವರನ್ನು ಹೇಗೆ ರಕ್ಷಿಸಬೇಕು ಎನ್ನುವುದನ್ನು ಪ್ರಾತ್ಯಕ್ಷಿಕೆ ಮೂಲಕ ಎಳೆಎಳೆಯಾಗಿ ತೋರಿಸಿದರು.

ಪೆಟ್ರೋಲ್ ಹಾಗೂ ಡೀಸೆಲ್‍ಗೆ ಬೆಂಕಿ ತಗುಲಿದಾಗ ಅದನ್ನು ನೀರಿನಿಂದ ನಂದಿಸಲು ಆಗದು. ಹಾಗೆ ಮಾಡಿದ್ದಲ್ಲಿ ಬೆಂಕಿ ಹೆಚ್ಚುತ್ತಲೇ ಹೋಗುತ್ತದೆ. ಕಾರಣ, ಎಎಫ್‍ಎಫ್‍ಎಫ್ ರಾಸಾಯನಿಕ ಬಳಸಿ ಆರಿಸಬೇಕು ಎಂದು ಮನದಟ್ಟು ಮಾಡಿದರು.ಅಗ್ನಿಶಾಮಕ ಠಾಣೆಯ ಮೂರು ವಾಹನಗಳು ಪ್ರದರ್ಶನದಲ್ಲಿ ಪಾಲ್ಗೊಂಡಿದ್ದವು.

ಯೋಗ ಸಾಧಕರಾದ ಆನಂದ ಮೋಳಕೇರಾ ಹಾಗೂ ಯೋಗೇಂದ್ರ ಯದಲಾಪುರೆ ಅವರು ಯೋಗ ಪ್ರಾತ್ಯಕ್ಷಿಕೆ ನಡೆಸಿಕೊಟ್ಟರು.

ಪ್ರಾಣಾಯಾಮ, ಧ್ಯಾನ, ಯೋಗದ ವಿವಿಧ ಪ್ರಕಾರಗಳನ್ನು ಹೇಳಿಕೊಟ್ಟರು. ಯೋಗ ಪ್ರದರ್ಶನವನ್ನೂ ಮಾಡಿದರು.
ಸ್ಕೌಟ್ಸ್ ಹಾಗೂ ಗೈಡ್ಸ್ ವಿದ್ಯಾರ್ಥಿಗಳು ಪ್ರತ್ಯೇಕ ತಂಡಗಳಲ್ಲಿ ಪ್ರೇಕ್ಷಣಿಯ ಸ್ಥಳಗಳ ಭೇಟಿ, ಸಾಹಸ ಪ್ರದರ್ಶನ ಹಾಗೂ ಸ್ಪರ್ಧೆಗಳಲ್ಲಿ ಪಾಲ್ಗೊಂಡರು.

ಜಿಲ್ಲಾವಾರು ಜಾತ್ರಾ ಉತ್ಸವ, ದೇಶಭಕ್ತಿ ಗೀತೆ ಹಾಗೂ ಶಾಹೀನ್ ಶಿಕ್ಷಣ ಸಂಸ್ಥೆಗಳ ಸಮೂಹದ ಮಕ್ಕಳಿಂದ ಸಾಂಸ್ಕøತಿಕ ಕಾರ್ಯಕ್ರಮ ಜರುಗಿದವು.

ಸ್ಕೌಟ್ಸ್ ಮತ್ತು ಗೈಡ್ಸ್ ರಾಜ್ಯ ಪ್ರಧಾನ ಆಯುಕ್ತ ಪಿ.ಜಿ.ಆರ್. ಸಿಂಧ್ಯ, ಜಾಂಬೊರೇಟ್ ಮುಖ್ಯಸ್ಥ ಡಾ. ಅಬ್ದುಲ್ ಖದೀರ್, ಹೆಚ್ಚುವರಿ ಮುಖ್ಯಸ್ಥೆ ಗುರಮ್ಮ ಸಿದ್ಧಾರೆಡ್ಡಿ, ಸಂಯೋಜಕಿ ಮಲ್ಲೇಶ್ವರಿ ಜುಜಾರೆ, ಕಾರ್ಯದರ್ಶಿ ಡಾ. ಎಚ್.ಬಿ. ಭರಶೆಟ್ಟಿ, ಖಜಾಂಚಿ ತೌಸಿಫ್, ಸಿ.ಬಿ. ಪಾಟೀಲ ಓಕಳಿ, ಡಾ. ವಿಕ್ರಮ ಸಿದ್ಧಾರೆಡ್ಡಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಗೌತಮ ಅರಳಿ, ಗುಂಡಪ್ಪ ಹುಡಗಿ, ಅಬ್ದುಲ್ ಮುಖಿತ್, ಅಬ್ದುಲ್ ಹಸೀಬ್, ಸುಜಾತಾ ಪೂಜಾರಿ, ಶಂಭುಲಿಂಗ ವಾಲ್ದೊಡ್ಡಿ ಮೊದಲಾದವರು ಇದ್ದರು.

Latest Indian news

Popular Stories