ಚಾರ್ಮಾಡಿ ಘಾಟ್: ತಡೆಗೋಡೆ ಬಿರುಕು, ಕುಸಿಯುವ ಭೀತಿ|ದುರಸ್ತಿಗೊಳಿಸುವಂತೆ ವಾಹನ ಚಾಲಕರ ಒತ್ತಾಯ

ಚಾರ್ಮಾಡಿ ಘಾಟಿಯ ಅಣ್ಣಪ್ಪ ದೇವಸ್ಥಾನದ ಸಮೀಪ ಒಮ್ಮುಖ ಇಕ್ಕಟ್ಟು ರಸ್ತೆಯಲ್ಲಿ ತಡೆಗೋಡೆ ಕುಸಿಯುವ ಆತಂಕ ಎದುರಾಗಿದೆ.

ಚಾರ್ಮಾಡಿ ಘಾಟಿಯಲ್ಲಿ ಬಾರಿ ಕಿರಿದಾದ ರಸ್ತೆ ಇದಾಗಿದ್ದು ಈ ರಸ್ತೆಯಲ್ಲಿ ಒಂದೇ ವಾಹನ ಸಾಗಲು ಆಗುವುದರಿಂದ ಯಾವುದೋ ವಾಹನ ತಡೆಗೋಡೆಗೆ ಡಿಕ್ಕಿ ಹೊಡೆದಿರುವ ಪರಿಣಾಮ ತಡೆಗೋಡೆ ತಳದಿಂದಲೇ ಬಿರುಕು ಬಿಟ್ಟಿದ್ದು ತಡೆಗೊಡೆ ಕುಸಿಯುವ ಸಂಭವವೇ ಹೆಚ್ಚಾಗಿದೆ.

ಈ ರಸ್ತೆಯ ಬಲ ಭಾಗದಲ್ಲಿ ಬೃಹತ್ ಬಂಡೆ ಆಕಾಶಕ್ಕೆ ಮುಖ ಮಾಡಿರುವುದರಿಂದ ಈ ಸ್ಥಳದಲ್ಲಿ ರಸ್ತೆ ಮಾಡಲು ಆಗದೇ ವಾಹನಕ್ಕೆ ಸುಮಾರು ವರ್ಷಗಳಿಂದ ಎರಡು ಕಡೆ ರಸ್ತೆ ಉಬ್ಬುಗಳನ್ನು (ಹಂಪ್ಸ್)ಹಾಕಿ ಸಂಚರಿಸಲು ಕಿರುದಾರಿಯನ್ನೇ ಬಿಡಲಾಗಿದೆ.ಆದರೆ ಚಾರ್ಮಾಡಿ ಘಾಟ್ ನ ಈ ತಡೆಗೋಡೆ ಕುಸಿದರೆ ದಕ್ಷಿಣ ಕನ್ನಡ ಹಾಗೂ ಚಿಕ್ಕಮಗಳೂರು ರಸ್ತೆ ಸಂಪರ್ಕ ಸಂಪೂರ್ಣ ಕಡಿತಗೊಳ್ಳಲಿದೆ.

ಚಾರ್ಮಾಡಿ ಘಾಟ್ ರಸ್ತೆಯಲ್ಲಿ ಸಂಚರಿಸುವ ವಾಹನ ಚಾಲಕರು ರಸ್ತೆಯ ತಡೆಗೋಡೆ ಭಾಗದಲ್ಲಿ ಕಲ್ಲು ಇರಿಸಿ ವಾಹನ ಸವಾರರಿಗೆ ಮುನ್ನೆಚ್ಚರಿಕೆ ನೀಡಿದ್ದಾರೆ. ಆದಷ್ಟು ಬೇಗ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ತಳದಿಂದ ರಿವಿಟ್ ಮೆಂಟ್ ಕಟ್ಟಿ ತಡೆಗೋಡೆ ಏರಿಸಿದರೆ ರಸ್ತೆ ಉಳಿಯುತ್ತದೆ.ಈಗಾಗಲೇ ತಡೆಗೋಡೆ ಬಿರುಕು ಬಿಟ್ಟು ಅಪಾಯದ ಸ್ಥಿತಿಯಲ್ಲಿದೆ ಎಂದು ಈ ಭಾಗದಲ್ಲಿ ಸಂಚರಿಸುವ ವಾಹನ ಚಾಲಕ ರಮೇಶ್ ಪತ್ರಿಕೆಗೆ ಮಾಹಿತಿ ನೀಡಿದ್ದಾರೆ.
ಸಂಬಂಧ ಪಟ್ಟ ಅಧಿಕಾರಿಗಳು ಇತ್ತ ಗಮನ ಹರಿಸುವಂತೆ ವಾಹನ ಚಾಲಕರು ಒತ್ತಾಯಿಸಿದ್ದಾರೆ.

‘ ರಸ್ತೆಯ ತಡೆಗೋಡೆ ಕುಸಿದಿರುವ ಬಗ್ಗೆ ನಮ್ಮ ಗಮನಕ್ಕೆ ಬಂದಿಲ್ಲ. ಚುನಾವಣೆ ನಿಮಿತ್ತ ಕರ್ತವ್ಯದಲ್ಲಿ ಇರುವುದರಿಂದ ಈಗ ತಾತ್ಕಾಲಿಕವಾಗಿ ಸೂಚನಾ ಫಲಕ ಹಾಗೂ ಟೇಪ್‌ ಗಳನ್ನು ಅಳವಡಿಸಿ ಕ್ರಮ ಕೈಗೊಳ್ಳಲಾಗುವುದು’
–ಗಣಪತಿ ಹೆಗಡೆ , ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿ

Latest Indian news

Popular Stories