ಬರದಿಂದ ಬತ್ತಿದ ಕೆರೆ; ಜಲಚರಗಳಿಗೆ ಕಂಟಕ

ರಾಯಚೂರು: ಪ್ರಸಕ್ತ ಸಾಲಿನಲ್ಲಿ ಹಿಂಗಾರು, ಮುಂಗಾರು ಮಳೆ ಆಗದ ಕಾರಣ ಜಿಲ್ಲೆಯಲ್ಲಿ ಬರ ಆವರಿಸಿದ್ದು ಜನ ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆಯಾಗಿದ್ದು ಒಂದೆಡೆಯಾದರೆ, ನದಿ, ಕೆರೆಗಳು ಬತ್ತಿ ಹೋಗಿದ್ದರಿಂದ ಜಲಚರಗಳಿಗೂ ಜೀವ ಕಂಟಕ ಎದುರಾಗಿದೆ.

ಮಳೆ ಕೊರತೆಯಿಂದಾಗಿ ಜಿಲ್ಲೆಯ ಅನೇಕ ಕೆರೆಗಳು ಬತ್ತು ಹೋಗಿದೆ. ಈ ಪೈಕಿ ರಾಯಚೂರು ತಾಲ್ಲೂಕಿನ ಮನ್ಸಲಾಪೂರು ಗ್ರಾಮ ಪಂಚಾಯಿತಿಯ ಮರ್ಚೆಡ್ ಕೆರೆಯೂ ಬತ್ತಿ ಹೋಗಿದ್ದು ಕೆರೆಯಲ್ಲಿನ ಲಕ್ಷಾಂತರ ಮೀನುಗಳು ಸಾನವಪ್ಪಿವೆ.

ಮರ್ಚೆಡ್ ಕೆರೆ ಸುಮಾರು 400 ಎಕರೆಗೂ ಅಧಿಕ ವಿಸ್ತೀರ್ಣ ಹೊಂದಿದ್ದು, ಇದೀಗ ಕೆರೆಯ ನೀರು ಬಿಸಿಲಿಗೆ ಒಣಗಿ ಹೋಗಿದೆ. ಈ ಕೆರೆಯಲ್ಲಿ ಮನ್ಸಲಾಪೂರ ಮತ್ತು ಮರ್ಚೆಡ್ ಗ್ರಾಮದ ರೈತರು ಲಕ್ಷಾಂತರ ಪ್ರಮಾಣದಲ್ಲಿ ಮೀನು ಸಾಕಾಣಿಕೆ ಮಾಡಿ ಜೀವನ ಸಾಗುತ್ತಿದ್ದಾರೆ. ಕೆರೆಯು ಸಂಪೂರ್ಣ ಒಣಗಿದ್ದರಿಂದ ಸಾಕಾಣಿಕೆ ಮಾಡಿದ ಮೀನುಗಳು ಸಾವನಪ್ಪಿವೆ, ಇದರಿಂದಾಗಿ ರೈತರ ಬದುಕು ಮೂರಾಬಟ್ಟೆಯಾಗಿದೆ.
ಬರ ಹಿನ್ನೆಲೆಯಲ್ಲಿ ಕೃಷಿ ಕೈಕೊಟ್ಟಿದ್ದರಿಂದ ಮೀನು ಸಾಕಣೆ ಆಸರೆಯಾಗಬಹುದು ಎಂದುಕೊಂಡ ರೈತರಿಗೆ ಈಗ ದಿಕ್ಕು ತೋಚದಂತಾಗಿದೆ.

ತಾಲ್ಲೂಕಿನಲ್ಲಿಯೇ ಅತ್ಯಂತ ಬೃಹತ್ ಗಾತ್ರದ ಕೆರೆಯಾಗಿದ್ದು ಹಿಂದೆ ಸುತ್ತಮುತ್ತಲಿನ ಗ್ರಾಮದ ನಿವಾಸಿಗಳಿಗೆ ಕುಡಿಯುವ ನೀರಿನ ಜಲ ಮೂಲವಾಗಿತ್ತು. ವಿವಿಧ ಕುಡಿಯುವ ನೀರಿನ ಯೋಜನೆಗಳ ಫಲವಾಗಿ ಕೆರೆಯ ಮೇಲೆ ಅವಲಂಬನೆ ಕಡಿಮೆಯಾಯಿತು. ಬಳಿಕ ಮೀನು ಸಾಕಾಣಿಕೆ ಹಾಗೂ ಗೃಹ ಬಳಕೆಗೆ ಕೆರೆಯ ನೀರು ಅನಿವಾರ್ಯವಾಗಿತ್ತು.

ರಾಯಚೂರು ಜಿಲ್ಲೆಯಲ್ಲಿ ಕೃಷ್ಣಾ ಮತ್ತು ತುಂಗಭದ್ರಾ ನದಿಗಳು ಹರಿದು ಹೋಗಿದ್ದರೂ ಶುದ್ಧ ಕುಡಿವ ನೀರಿನ ಸೌಕರ್ಯ ಕನ್ನಡಿಯೊಳಗಿನ ಗಂಟಾಗಿದೆ. ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಬೇಜವಾಬ್ದಾರಿತನದಿಂದ ಕುಡಿವ ನೀರಿಗಾಗಿ ಅನೇಕ ಗ್ರಾಮಗಳಲ್ಲಿ ಜನರು ಅಲೆದಾಡುವುದು ತಪ್ಪಿಲ್ಲ. ಇನ್ನೂ ಬೇಸಿಗೆಯಲ್ಲಂತೂ ಜನ-ಜಾನುವಾರುಗಳು ನೀರಿಲ್ಲದೇ ಪರಿತಪಿಸುವ ಪರಿಸ್ಥಿತಿ ಸಾಮಾನ್ಯವಾಗಿದೆ. ಯಾವುದೇ ಗ್ರಾಮಕ್ಕೆ ಹೋದರೂ ಮೊದಲ ಬೇಡಿಕೆಯೇ ಕುಡಿವ ನೀರಿನ ಸೌಕರ್ಯದ ಕೊರತೆಯಾಗಿದೆ.

ಜಿಲ್ಲೆಯಲ್ಲಿ ಈ ಬಾರಿ ಮಳೆಯಾಗದ ಕಾರಣ ಬೆಳೆಗಳು ನಾಶವಾಗಿದ್ದು ಒಂದೆಡೆಯಾದರೆ ಬಿಸಿಲಿನ ತಾಪಮಾನ ಏರಿಕೆಯಾಗಿ ಅನೇಕ ಸಾವುನೋವುಗಳಿಗೆ ಕಾರಣವಾಗಿದೆ. ಬಿಸಿಲಿನ ಝಳಕ್ಕೆ ನೀರು ಸಂಪೂರ್ಣ ಬತ್ತಿ ಹೋಗಿದ ಪರಿಣಾಮ ಮೀನುಗಳು ವಿಲವಿಲ ಒದ್ದಾಡಿ ಸಾವನ್ನಪ್ಪಿದ್ದು ಮರ್ಚೆಡ್ ಕೆರೆ ದಡದಲ್ಲಿ ರಾಶಿ ರಾಶಿ ಮೀನುಗಳು ಕಾಣುತ್ತಿವೆ.

‘ಕೆರೆಯಲ್ಲಿ ನೀರಿದ್ದ ಸಂದರ್ಭದಲ್ಲಿ ಸುಮಾರು ₹15 ಲಕ್ಷ ವೆಚ್ಚದಲ್ಲಿ ಲಕ್ಷಾಂತರ ಮೀನು ಮರಿಗಳನ್ನ ತಂದು ಕೆರೆಗೆ ಬಿಡಲಾಗಿತ್ತು. ಮೀನುಗಳ ಸಾಕಿ, ಮಾರಾಟ ಮಾಡಬೇಕಾದ ಸಂದರ್ಭದಲ್ಲಿ ಕೆರೆಯು ಬರದಿಂದ ಒಣಗಿ ಹೋಗಿದ್ದು ತಲೆಮೇಲೆ ಕೈಯಿಟ್ಟುಕೊಳ್ಳುವಂತಾಗಿದೆ. ಜಿಲ್ಲಾಡಳಿತದಿಂದ ಎನ್ ಡಿಆರ್ ಎಫ್ ನಡಿ ಪರಿಹಾರ ನೀಡಬೇಕು’ ಎಂದು ರೈತ ಮಲ್ಲಪ್ಪ ನಾಯಕ ಒತ್ತಾಯಿಸಿದ್ದಾರೆ.

Latest Indian news

Popular Stories