ಈಶಾನ್ಯ ಭಾರತದಲ್ಲಿ ಭಾರೀ ಮಳೆಯ ಕಾರಣ ಪ್ರವಾಹ ತಾಂಡವಾಡುತ್ತಿದ್ದು ಲಕ್ಷಾಂತರ ಮಂದಿ ನಿರಾಶ್ರಿತರಾಗಿದ್ದಾರೆ. ಭಾರೀ ಮಳೆಯಿಂದಾಗಿ ನದಿಗಳು ತುಂಬಿ ಹರಿಯುತ್ತಿರುವುದರಿಂದ, ಅಸ್ಸಾಂ ಮತ್ತು ಅರುಣಾಚಲ ಪ್ರದೇಶಗಳು ತೀವ್ರ ಪ್ರವಾಹ ಪರಿಸ್ಥಿತಿ ಎದುರಿಸುತ್ತಿದೆ.
ರಕ್ಷಣಾ ಕಾರ್ಯಕ್ಕಾಗಿ ಕೆಲವೆಡೆ ಐಎಎಫ್ ಹೆಲಿಕಾಪ್ಟರ್‌ಗಳನ್ನು ಬಳಸಲಾಗುತ್ತಿದೆ.
ಅಸ್ಸಾಂನಲ್ಲಿನ ಪ್ರವಾಹ ಪರಿಸ್ಥಿತಿಯು ಜೂನ್ 30 ರ ಸಂಜೆ ಮೀತಿ ಮೀರಿತ್ತು. ಸೋಮವಾರ ಸಂಜೆಯ ವೇಳೆಗೆ 19 ಜಿಲ್ಲೆಗಳ 1,275 ಹಳ್ಳಿಗಳ 6.4 ಲಕ್ಷ ಜನರು ಬಾಧಿತರಾಗಿದ್ದಾರೆ. ಪ್ರವಾಹದಿಂದ ಉಂಟಾದ ಸ್ಥಳಾಂತರ ಕಾರ್ಯದಿಂದಾಗಿ 11 ಜಿಲ್ಲೆಗಳಾದ್ಯಂತ 72 ಪರಿಹಾರ ಶಿಬಿರಗಳಲ್ಲಿ 8,142 ಜನರು ಆಶ್ರಯ ಪಡೆದಿದ್ದಾರೆ.
ಬರಾಕ್ ಕಣಿವೆಯ ಕರೀಮ್‌ಗಂಜ್ ಜಿಲ್ಲೆ ಮತ್ತು ಮೇಲಿನ ಅಸ್ಸಾಂ ಜಿಲ್ಲೆಗಳಾದ ತಿನ್ಸುಕಿಯಾ, ಲಖಿಂಪುರ ಮತ್ತು ದಿಬ್ರುಗಢದಲ್ಲಿ ಹೆಚ್ಚಿನ ಸಂಖ್ಯೆಯ ಜನರು ಸ್ಥಳಾಂತರಗೊಂಡಿದ್ದಾರೆ . ಈ ವರ್ಷ ಪ್ರವಾಹ ಸಂಬಂಧಿ ಘಟನೆಗಳಿಗೆ ಮೂವತ್ತೈದು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.
ಅಸ್ಸಾಂ ಮೂಲಕ ಹರಿಯುವ ವಿವಿಧ ನದಿಗಳಾದ ಬ್ರಹ್ಮಪುತ್ರ, ದೇಸಾಂಗ್, ಸುಬನ್ಸಿರಿ, ದೇಖೋವ್, ಬುರಿದೇಹಿಂಗ್, ಬೆಕಿ ಮತ್ತು ಬರಾಕ್ ಸಾಮಾನ್ಯ ಮಟ್ಟ ಮೀರಿ ಹರಿಯುತ್ತಿದೆ.
ಅರುಣಾಚಲದಲ್ಲೂ ಪ್ರವಾಹ:
ಅರುಣಾಚಲ ಪ್ರದೇಶದ ಪರಿಸ್ಥಿತಿಯು ಭೀಕರವಾಗಿದ್ದು, ವಿವಿಧ ಭಾಗಗಳು ಪ್ರವಾಹ ಮತ್ತು ಭೂಕುಸಿತದಿಂದ ತತ್ತರಿಸಿವೆ. ಇಟಾನಗರ ಜಿಲ್ಲಾಡಳಿತವು ಜುಲೈ 6 ರವರೆಗೆ ಶಾಲೆಗಳನ್ನು ಮುಚ್ಚುವುದಾಗಿ ಘೋಷಿಸಿದೆ. ನಮ್ಸಾಯಿ ಮತ್ತು ಚಾಂಗ್ಲಾಂಗ್ ಜಿಲ್ಲೆಗಳಲ್ಲಿ ಪ್ರವಾಹಕ್ಕೆ ಸಿಲುಕಿರುವ ಹಳ್ಳಿಗಳಲ್ಲಿ ಸಿಲುಕಿರುವ ಜನರನ್ನು ರಕ್ಷಿಸಲು ಅಸ್ಸಾಂ ರೈಫಲ್ಸ್ ಅನ್ನು ಸಹ ಕರೆತರಲಾಯಿತು. ಸೋಮವಾರ ಸಂಜೆಯ ವೇಳೆಗೆ ಸುಮಾರು 500 ಜನರನ್ನು ರಕ್ಷಿಸಲಾಗಿದೆ.
ಮಂಗಳವಾರ ಬೆಳಗ್ಗೆ ರಕ್ಷಿಸಿದವರಲ್ಲಿ ಜೂನ್ 28 ರಿಂದ ದಿಬ್ರುಗಢದ ನದಿಯ ದ್ವೀಪದಲ್ಲಿ ಸಿಕ್ಕಿಬಿದ್ದ 12 ಮೀನುಗಾರರು ಸೇರಿದ್ದಾರೆ.