ಉತ್ತರ ಕರ್ನಾಟಕ ಸಹಿತ ದೇಶದ ಹಲವೆಡೆ 3 ತಿಂಗಳು ಬಿಸಿಗಾಳಿ

ಹೊಸದಿಲ್ಲಿ: ಮುಂದಿನ 3 ತಿಂಗಳ ಕಾಲ ಉತ್ತರ ಕರ್ನಾಟಕ ಸೇರಿ ದೇಶದ ಹಲವು ಭಾಗಗನ್ನು ಬಿಸಿಗಾಳಿ ಬಾಧಿಸಲಿದೆ ಎಂದು ಹವಾಮಾನ ಇಲಾಖೆ ಸೋಮವಾರ ಹೇಳಿದೆ. ಲೋಕಸಭೆ ಚುನಾವಣೆ ಸಮಯದಲ್ಲಿ ಈ ಬಿಸಿಗಾಳಿ ಜನರಿಗೆ ಸಮಸ್ಯೆ ಉಂಟು ಮಾಡಲಿದೆ. ಆರೋಗ್ಯ ಸಮಸ್ಯೆ ಗಳು ಸಹ ಕಾಣಿಸಿಕೊಳ್ಳಬಹುದು ಎಂದು ಇಲಾಖೆ ಎಚ್ಚರಿಕೆ ನೀಡಿದೆ.

ಎಲ್‌ ನಿನೋ ಪರಿಣಾಮವಾಗಿ ಮಧ್ಯ ಹಾಗೂ ಪಶ್ಚಿಮ ಭಾರತದಲ್ಲಿ ಬಿಸಿಗಾಳಿಯ ಪ್ರಕೋಪ ಇರಲಿದೆ. ಆದರೆ ಕಟಾವಿಗೆ ಬಂದಿರುವ ಗೋಧಿ ಬೆಳೆಯ ಮೇಲೆ ಇದು ಯಾವುದೇ ರೀತಿಯ ಪರಿಣಾಮ ಬೀರುವುದಿಲ್ಲ ಎಂದು ಇಲಾಖೆ ತಿಳಿಸಿದೆ. ಈ ಕುರಿತಾಗಿ ದೆಹಲಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಕೇಂದ್ರ ಸಚಿವ ಕಿರಣ್‌ ರಿಜಿಜು, ಮುಂಬರುವ 3 ತಿಂಗಳ ಕಾಲ ದೇಶದಲ್ಲಿ ವೈಪರೀತ್ಯ ಹವಾಮಾನ ಇರಲಿದೆ. ಇದು ನಮ್ಮೆಲ್ಲರಿಗೂ ಸವಾಲಿನ ದಿನಗಳಾಗಲಿವೆ. ಅತ್ಯಂತ ಹೆಚ್ಚಿನ ಜನಸಂಖ್ಯೆಯ ರಾಷ್ಟ್ರವಾಗಿ ನಾವು ಇಂತಹ ವೈಪರೀತ್ಯಗಳಿಗೆ ಮೊದಲೇ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಹೇಳಿದ್ದಾರೆ.

ಮುಂಬರುವ ದಿನಗಳಲ್ಲಿ ಲೋಕಸಭೆ ಚುನಾವಣೆ ಇರುವು ದರಿಂದ ಹೆಚ್ಚಿನ ಜನರು ಬಿಸಿಲಿಗೆ ಒಡ್ಡಿಕೊ ಳ್ಳಲಿದ್ದಾರೆ. ಈ ಸಮಯದಲ್ಲೇ ಬಿಸಿಗಾಳಿಯ ಪ್ರಭಾವವೂ ಹೆಚ್ಚಾಗುವುದರಿಂದ ಜನರು ಆರೋಗ್ಯ ಸಮಸ್ಯೆಗಳಿಗೆ ತುತ್ತಾಗಬಹುದು.ಉತ್ತರ ಕರ್ನಾಟಕ, ಗುಜರಾತ್‌, ಮಹಾರಾಷ್ಟ್ರ, ರಾಜಸ್ಥಾನ, ಒಡಿಶಾ, ಛತ್ತೀಸ್‌ಗಢ, ಆಂಧ್ರಪ್ರದೇಶದಲ್ಲಿ ಬಿಸಿಗಾಳಿಯ ಪ್ರಭಾವ ಹೆಚ್ಚಿನ ಪ್ರಮಾಣದಲ್ಲಿ ಇರಲಿದೆ ಎಂದು ಹವಾಮಾನ ಇಲಾಖೆಯ ನಿರ್ದೇಶಕ ಮೃತ್ಯುಂಜಯ ಮೋಹಪಾತ್ರ ಹೇಳಿದ್ದಾರೆ.

10ರಿಂದ 20 ದಿನ ಬಿಸಿಗಾಳಿ: ಪ್ರತಿ ವರ್ಷ ದೇಶದಲ್ಲಿ ಸಾಮಾನ್ಯವಾಗಿ 7ರಿಂದ 8 ದಿನಗಳ ಕಾಲ ಬಿಸಿಗಾಳಿಯ ಪ್ರಭಾವ ಇರುತ್ತಿತ್ತು. ಆದರೆ ಈ ಬಾರಿ ಹಲವು ಪ್ರದೇಶಗಳಲ್ಲಿ 10ರಿಂದ 20 ದಿನಗಳವರೆಗೆ ಬಿಸಿಗಾಳಿ ಬೀಸಲಿದೆ.

ಇದೇ ಅವಧಿಯಲ್ಲಿ ಹಿಮಾಲಯದ ತಪ್ಪಲು ಹಾಗೂ ಈಶಾನ್ಯ ಭಾರತದಲ್ಲಿ ಸಾಮಾನ್ಯಕ್ಕಿಂತ ಕಡಿಮೆ ತಾಪಮಾನ ಇರಲಿದೆ. ಈ ಅವಧಿಯಲ್ಲಿ ಸಾಮಾನ್ಯಕ್ಕಿಂತ ಕೊಂಚ ಹೆಚ್ಚು ಮಳೆ (8-11 ಸೆ.ಮೀ.) ಬೀಳಲಿದೆ ಎಂದು ಇಲಾಖೆ ಹೇಳಿದೆ.ಗೋಧಿ ಬೆಳೆಗೆ ಹಾನಿ ಇಲ್ಲ: ಅತಿಯಾದ ತಾಪಮಾನದಿಂದಾಗಿ ಸದ್ಯ ಕಟಾವಿನ ಹಂತಕ್ಕೆ ತಲುಪಿರುವ ಗೋಧಿ ಬೆಳೆಯ ಮೇಲೆ ಯಾವುದೇ ಪರಿಣಾಮ ಉಂಟಾಗುವುದಿಲ್ಲ. ಈ ಅವಧಿಯಲ್ಲಿ ಸಾಮಾನ್ಯಕ್ಕಿಂತ 3ರಿಂದ 4 ಡಿಗ್ರಿ ಸೆ.ನಷ್ಟು ಉಷ್ಣಾಂಶ ಹೆಚ್ಚಿರಲಿದೆ. ಹೀಗಾಗಿ ಇದು ಗೋಧಿ ಬೆಳೆಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಹವಾಮಾನ ಇಲಾಖೆ ಹೇಳಿದೆ.


ಏಪ್ರಿಲ್‌ನಿಂದ ಜೂನ್‌ವರೆಗೂ ಇದರ ಪ್ರಭಾವ ಇರಲಿದೆ ಎಂದು ಐಎಂಡಿ ಹೇಳಿದೆ.

Latest Indian news

Popular Stories