ಮುಂದಿನ ಐದು ದಿನಗಳಲ್ಲಿ ಲಘು ಮಳೆ ಹೊರತಾಗಿಯೂ ತಾಪಮಾನ ಹೆಚ್ಚಳ ಸಾಧ್ಯತೆ; ಹವಾಮಾನ ಇಲಾಖೆ

ಬೆಂಗಳೂರು: ಮುಂದಿನ ಐದು ದಿನಗಳಲ್ಲಿ ಬೆಂಗಳೂರಿನಲ್ಲಿ ತಾಪಮಾನದ ಪ್ರಮಾಣವು ಒಂದು ಡಿಗ್ರಿ ಸೆಲ್ಸಿಯಸ್‌ನಷ್ಟು ಹೆಚ್ಚಾಗುವ ಸಾಧ್ಯತೆಯಿದೆ. ಆದರೆ, ನಗರದಲ್ಲಿ ಮೇ 30ರವರೆಗೆ ಬಿರುಗಾಳಿಯೊಂದಿಗೆ ಕಡಿಮೆ ಅಥವಾ ಸಾಧಾರಣ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ತಿಳಿಸಿದೆ.

ಬಂಗಾಳಕೊಲ್ಲಿಯಲ್ಲಿ ರೆಮಲ್ ಚಂಡಮಾರುತವು ದುರ್ಬಲಗೊಳ್ಳುವ ನಿರೀಕ್ಷೆಯಿದ್ದು, ಇದು ಬೆಂಗಳೂರಿನ ಹವಾಮಾನದ ಮೇಲೆ ನಿರ್ದಿಷ್ಟ ಪ್ರಭಾವ ಬೀರುವುದಿಲ್ಲ ಎಂದು ಐಎಂಡಿಯ ವಿಜ್ಞಾನಿ ತಿಳಿಸಿದ್ದಾರೆ.

ಆದಾಗ್ಯೂ, ಮುಂಬರುವ ವಾರದಲ್ಲಿ ಗರಿಷ್ಠ ತಾಪಮಾನವು 33 ರಿಂದ 34 ಡಿಗ್ರಿ ಸೆಲ್ಸಿಯಸ್‌ನಷ್ಟು ಹೆಚ್ಚಾಗುವ ಸಾಧ್ಯತೆಯಿದೆ. ಆದರೆ, ಕನಿಷ್ಠ ತಾಪಮಾನವು 23 ರಿಂದ 24 ಡಿಗ್ರಿ ಸೆಲ್ಸಿಯಸ್ ನಡುವೆ ಇರಲಿದ್ದು, ಇದು ಸಾಮಾನ್ಯ ತಾಪಮಾನಕ್ಕಿಂತ ಸ್ವಲ್ಪ ಹೆಚ್ಚಾಗಿದೆ ಎಂದು ತಿಳಿಸಿದ್ದಾರೆ.

ಹವಾಮಾನ ಇಲಾಖೆ ಪ್ರಕಾರ, ಮುಂದಿನ ನಾಲ್ಕು ದಿನಗಳವರೆಗೆ ಕೇರಳ ಕರಾವಳಿಯಲ್ಲಿ ಮಾನ್ಸೂನ್ ವ್ಯವಸ್ಥೆಗಳಿಲ್ಲದ ಪರಿಣಾಮವಾಗಿ ನಗರದಲ್ಲಿ ತಾಪಮಾನದ ಏರಿಳಿತ ಮತ್ತು ಲಘುವಾದ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಆದರೆ, ನೈರುತ್ಯ ಮುಂಗಾರು ಜೂನ್ 5 ರೊಳಗೆ ಕರ್ನಾಟಕಕ್ಕೆ ಆಗಮಿಸುವ ನಿರೀಕ್ಷೆಯಿದೆ.

Latest Indian news

Popular Stories