10 ಲಕ್ಷ ಮಕ್ಕಳಿಗಿಲ್ಲ ಶಿಕ್ಷಣ: ಕೋವಿಡ್ ತಂದಿಟ್ಟ ಆಘಾತ ಸಮೀಕ್ಷೆ ವಿವರ ಹೈಕೋರ್ಟ್‌ಗೆ ಸಲ್ಲಿಕೆ

ಬೆಂಗಳೂರು: ಹದಿನಾಲ್ಕು ವರ್ಷದೊಳಗಿನ ಮಕ್ಕಳಿಗೆ ಶಿಕ್ಷಣ ನೀಡುವ ಬಗ್ಗೆ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಹಲವು ಕಾರ್ಯಕ್ರಮಗಳನ್ನು ಜಾರಿಗೊಳಿಸುತ್ತಿದ್ದರೂ ರಾಜ್ಯದಲ್ಲಿ 10 ಲಕ್ಷಕ್ಕೂ ಹೆಚ್ಚು ಮಕ್ಕಳು ಶಾಲೆ ಮತ್ತು ಅಂಗನವಾಡಿಗಳಿಂದ ಹೊರಗೆ ಉಳಿದಿದ್ದಾರೆ.

ರಾಜ್ಯ ಸರಕಾರ ನಡೆಸಿದ ಸಮೀಕ್ಷಾ ವರದಿಯಲ್ಲಿ ಈ ವಿಷಯ ದೃಢಪಟ್ಟಿದೆ. 2020ರಲ್ಲಿ ಕೊರೊನಾ ಹಬ್ಬಲಾ ರಂಭಿಸಿದ ಬಳಿಕ ಶಾಲೆ, ಅಂಗನವಾಡಿಗಳು ಮುಚ್ಚಿದ್ದ ಕಾರಣ ಹೀಗಾಗಿದೆ ಎನ್ನುತ್ತದೆ ಈ ಸಮೀಕ್ಷಾ ವರದಿ.


ಗ್ರಾಮೀಣ ಭಾಗದಲ್ಲಿ ಶಾಲೆಗಳಿಂದ ಹೊರಗುಳಿದ ಮಕ್ಕಳ ಬಗ್ಗೆ 2020ರಲ್ಲಿ ಸಮೀಕ್ಷೆ ಆರಂಭಿಸಲಾಗಿತ್ತು. ಬಿಬಿಎಂಪಿ ಸಹಿತ ರಾಜ್ಯದ ಎಲ್ಲ 319 ನಗರ ಸ್ಥಳೀಯ ಸಂಸ್ಥೆಗಳಲ್ಲಿ ಮಾರ್ಚ್‌ನಲ್ಲಿ ಸಮೀಕ್ಷೆ ಪೂರ್ಣಗೊಳಿಸ ಲಾಗಿತ್ತು. ರಾಜ್ಯದ ಎಲ್ಲ ನಗರ ಸ್ಥಳೀಯ ಸಂಸ್ಥೆಗಳು ಮತ್ತು ಗ್ರಾಮೀಣ ಭಾಗದಲ್ಲಿ ಒಟ್ಟಾರೆ 6ರಿಂದ 14 ವರ್ಷದ 15,338 ಮಕ್ಕಳು ಶಾಲೆಯಿಂದ ಹೊರಗುಳಿದಿದ್ದಾರೆ.

ಇದೇ ವಯೋಮಾನದ 10 ಸಾವಿರ ಮಕ್ಕಳು ಶಾಲೆಗೆ ಪ್ರವೇಶವನ್ನೇ ಪಡೆದಿಲ್ಲ. 3 ವರ್ಷದೊಳಗಿನ 4.54 ಲಕ್ಷ ಮಕ್ಕಳು ಹಾಗೂ 4ರಿಂದ 6 ವರ್ಷದ 5.33 ಲಕ್ಷ ಮಕ್ಕಳು ಅಂಗನವಾಡಿ ಕೇಂದ್ರಗಳಲ್ಲಿ ನೋಂದಾಯಿಸಿಲ್ಲ. ಒಟ್ಟಾರೆ 10.12 ಲಕ್ಷ ಮಕ್ಕಳು ಶಾಲೆ ಹಾಗೂ ಅಂಗನವಾಡಿ ಕೇಂದ್ರಗಳಿಂದ ಹೊರಗಿದ್ದಾರೆ ಎಂದು ವರದಿ ತಿಳಿಸಿದೆ.

ವಲಸೆ, ಕೋವಿಡ್‌ ಕಾರಣ?
ಇಷ್ಟೊಂದು ಪ್ರಮಾಣದಲ್ಲಿ ಮಕ್ಕಳು ಶಾಲೆ ಹಾಗೂ ಅಂಗನವಾಡಿ ಕೇಂದ್ರಗಳಿಂದ ಹೊರಗುಳಿಯಲು ವಲಸೆ ಕೋವಿಡ್‌ ಪ್ರಮುಖ ಕಾರಣ ಎನ್ನಲಾಗಿದೆ. ವಲಸೆ ಕಾರ್ಮಿಕರು, ಕೃಷಿ ಕೂಲಿಕಾರರು ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಆಗಾಗ್ಗೆ ವಲಸೆ ಹೋಗುತ್ತಾರೆ. ಬಡ ಕುಟುಂಬಗಳು ಉದ್ಯೋಗ ಆರಸಿ ಗುಳೆ ಹೊರಡುತ್ತಾರೆ. ಇದರಿಂದಾಗಿ ಮಕ್ಕಳು ಹೊರಗುಳಿಯುತ್ತಾರೆ ಎಂದು ಸಮೀಕ್ಷೆ ನಡೆಸಿದ ಇಲಾಖೆಗಳ ಅಧಿಕಾರಿಗಳು ಹೇಳುತ್ತಾರೆ.

ಹೈಕೋರ್ಟಲ್ಲಿ ಪಿಐಎಲ್‌
ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಮರಳಿ ಶಾಲೆಗೆ ಕರೆತರುವ ವಿಚಾರವಾಗಿ 2013ರಲ್ಲಿ ಹೈಕೋರ್ಟ್‌ ದಾಖಲಿಸಿಕೊಂಡಿರುವ ಸ್ವಯಂಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಿಚಾರಣೆ ನಡೆಸಿದ ಹಂಗಾಮಿ ಮುಖ್ಯ ನ್ಯಾ| ಆಲೋಕ್‌ ಆರಾಧೆ ಹಾಗೂ ನ್ಯಾ| ಜೆ.ಎಂ. ಖಾಜಿ ಅವರಿದ್ದ ವಿಭಾಗೀಯ ನ್ಯಾಯಪೀಠಕ್ಕೆ ಬುಧವಾರ ವರದಿ ಸಲ್ಲಿಸಲಾಗಿದೆ.

ಈ ಪ್ರಕರಣದಲ್ಲಿ ಹೈಕೋರ್ಟ್‌ಗೆ “ನೆರವುಗಾರರು’ (ಅಮಿಕಸ್‌ ಕ್ಯೂರಿ) ಆಗಿ ನಿಯೋಜಸಲ್ಪಟ್ಟಿರುವ ಹಿರಿಯ ನ್ಯಾಯವಾದಿ ಕೆ.ಎನ್‌. ಫ‌ಣೀಂದ್ರ ಅವರು, ಶಾಲೆಯಿಂದ ಹೊರಗುಳಿದ 18 ವರ್ಷದೊಳಗಿನ ಮಕ್ಕಳ ಪತ್ತೆಗೆ ನಗರಾಭಿವೃದ್ಧಿ, ಇಲಾಖೆ, ಪೌರಾಡಳಿತ ನಿರ್ದೇಶನಾಲಯ, ಗ್ರಾಮೀಣಾಭಿವೃದ್ಧಿ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಹಿತ ಸರಕಾರದ ವಿವಿಧ ಇಲಾಖೆಗಳು ಮತ್ತು ಪ್ರಾಧಿಕಾರಗಳು ನಡೆಸಿದ ಮನೆಮನೆ ಸಮೀಕ್ಷೆಯ ವಸ್ತುಸ್ಥಿತಿ ವರದಿಯನ್ನು ನ್ಯಾಯಪೀಠಕ್ಕೆ ಸಲ್ಲಿಸಿದರು.

ವರದಿಯನ್ನು ದಾಖಲಿಸಿಕೊಂಡ ನ್ಯಾಯಪೀಠ, ಈ ಪ್ರಕರಣದಲ್ಲಿ ಹೈಕೋರ್ಟ್‌ ರಚಿಸಿರುವ ಉನ್ನತಾಧಿಕಾರ ಸಮಿತಿಯು ಜು.16ರಂದು ಸಭೆ ನಡೆಸಿ ಶಾಲೆಯಿಂದ ಹೊರಗುಳಿದ ಮಕ್ಕಳನ್ನು ವಾಪಸ್‌ ಕರೆ ತರುವ ಬಗ್ಗೆ ಏನೆಲ್ಲ ಕ್ರಮಗಳನ್ನು ಕೈಗೊಳ್ಳಬಹುದು ಎಂಬ ಬಗ್ಗೆ ಸಲಹೆ ಕೊಡಬೇಕು ಎಂದು ನಿರ್ದೇಶಿಸಿ ವಿಚಾರಣೆಯನ್ನು ಜುಲೈ 19ಕ್ಕೆ ಮುಂದೂಡಿತು.

ಸಮೀಕ್ಷೆಯ ವಿವರಗಳು
ನಗರ ಪ್ರದೇಶ
ಕುಟುಂಬಗಳ ಸಮೀಕ್ಷೆ: 33.42 ಲಕ್ಷ
ಸಮೀಕ್ಷೆ ಶೇಕಡವಾರು 98.06
18 ವರ್ಷದೊಳಗಿನ ಮಕ್ಕಳ ಸಂಖ್ಯೆ: 13.73 ಲಕ್ಷ
ಅಂಗನವಾಡಿಗಳಲ್ಲಿ ನೋಂದಾಯಿಸಿಕೊಳ್ಳದವರು
3 ವರ್ಷದೊಳಗಿನ ಮಕ್ಕಳು: 87,921
4ರಿಂದ 6 ವರ್ಷದ ಮಕ್ಕಳು: 1.23 ಲಕ್ಷ
ಶಾಲೆಗಳಲ್ಲಿ ದಾಖಲೆ ಪಡೆದವರು
ಶಾಲೆಗೆ ದಾಖಲಾತಿ ಪಡೆದ 6ರಿಂದ 18 ವರ್ಷದ ಒಟ್ಟು ಮಕ್ಕಳು: 10.62 ಲಕ್ಷ
ಶಾಲೆಯಿಂದ ಹೊರಗುಳಿದ 6ರಿಂದ 14 ವರ್ಷದ ಮಕ್ಕಳು: 2,798
ಇಲ್ಲಿವರೆಗೆ ದಾಖಲಾತಿಯೇ ಪಡೆಯದ 6ರಿಂದ 14 ವರ್ಷದ ಮಕ್ಕಳು: 3,225
ಗ್ರಾಮೀಣ ಪ್ರದೇಶ
ಕುಟುಂಬಗಳ ಸಮೀಕ್ಷೆ: 84.02 ಲಕ್ಷ
ಸಮೀಕ್ಷೆ ಶೇಕಡವಾರು: 100
18 ವರ್ಷದೊಳಗಿನ ಮಕ್ಕಳ ಸಂಖ್ಯೆ: 35.24ಲಕ್ಷ
ಅಂಗನವಾಡಿಯಲ್ಲಿ ನೋಂದಾಯಿಸದ ಮಕ್ಕಳು
3 ವರ್ಷದೊಳಗಿನ ಮಕ್ಕಳು: 93 ಸಾವಿರ
4ರಿಂದ 6 ವರ್ಷದ ಮಕ್ಕಳು: 1.07 ಲಕ್ಷ
ಶಾಲೆಗಳಲ್ಲಿ ದಾಖಲೆ ಪಡೆದವರು
6ರಿಂದ 18 ವರ್ಷದ ಮಕ್ಕಳು : 27.11 ಲಕ್ಷ
ಶಾಲೆಗಳಿಂದ ಹೊರಗೆ ಉಳಿದವರು
6ರಿಂದ 14 ವರ್ಷದ ಮಕ್ಕಳು: 10,378
ದಾಖಲಾತಿಯೇ ಪಡೆಯದ 6ರಿಂದ 14 ವರ್ಷದ ಮಕ್ಕಳು: 5, 248

ಶಿಕ್ಷಣ ಇಲಾಖೆ ಮಾಹಿತಿ ಪ್ರಕಾರ 10 ಲಕ್ಷ ಮಕ್ಕಳು ಶಾಲೆಯಿಂದ ಹೊರಗುಳಿದಿರಲು ಸಾಧ್ಯವಿಲ್ಲ. ನಗರಾಭಿವೃದ್ಧಿ ಇಲಾಖೆ ಯಾವ ರೀತಿಯಲ್ಲಿ ಸರ್ವೇ ಮಾಡಿ ಮಾಹಿತಿ ಪಡೆದುಕೊಂಡಿದೆ ಎಂಬುದನ್ನು ಪರಿಶೀಲಿಸಿ ಬಳಿಕ ಕ್ರಮ ಕೈಗೊಳ್ಳುತ್ತೇವೆ.
– ಬಿ.ಸಿ. ನಾಗೇಶ್‌, ಶಿಕ್ಷಣ ಸಚಿವ

ರಾಜ್ಯದಲ್ಲಿ ಶಾಲೆಯಿಂದ ಹೊರಗುಳಿದ 0-18 ವರ್ಷದೊಳಗಿನ ಮಕ್ಕಳನ್ನು ಗುರುತಿಸಲು ನಡೆಸ ಲಾದ ಮನೆಮನೆ ಸಮೀಕ್ಷೆ ಪೂರ್ಣಗೊಂಡಿದೆ. ಶಾಲೆ ಯಿಂದ ಹೊರಗುಳಿದ ಮತ್ತು ಶಾಲೆಗೆ ಪ್ರವೇಶವನ್ನೇ ಪಡೆಯದ ಮಕ್ಕಳನ್ನು ಶಾಲೆಗೆ ಮರಳಿ ತರಲು ಹಾಗೂ 6 ವರ್ಷದೊಳಗಿನ ಮಕ್ಕಳಿಗೆ ಅಂಗನವಾಡಿ ಕೇಂದ್ರಗಳಿಗೆ ಸೇರಿಸುವ ನಿಟ್ಟಿನಲ್ಲಿ ಸರಕಾರ ಕ್ರಮ ಕೈಗೊಳ್ಳಬೇಕಾಗಿದೆ.
– ಕೆ.ಎನ್‌. ಫ‌ಣೀಂದ್ರ, ಹಿರಿಯ ನ್ಯಾಯವಾದಿ

ಕೃಪೆ: ಉದಯವಾಣಿ

Latest Indian news

Popular Stories

Social Media Auto Publish Powered By : XYZScripts.com
error: Content is protected !!