ಬಡವರಿಗೆ ಆಕ್ಸಿಮೀಟರ್ ವಿತರಿಸಲು 2 ಲಕ್ಷ ರೂ. ಸಂಗ್ರಹ !

ಬೆಂಗಳೂರು: ನಿರ್ಗತಿಕ ವರ್ಗದ ಜನರಿಗೆ ವಿತರಣೆ ಮಾಡಲು 300 ನಾಡಿಮಿಡಿತ ಆಕ್ಸಿಮೀಟರ್ ಗೆ ಕೇವಲ 24 ಗಂಟೆಗಳಲ್ಲಿ 2 ಲಕ್ಷಕ್ಕೂ ಅಧಿಕ ಹಣವನ್ನು ಸಂಗ್ರಹಿಸಿ ಸಹಾಯ ಮಾಡುವ ಮೂಲಕ 10ನೇ ತರಗತಿಯ ಇಬ್ಬರು ವಿದ್ಯಾರ್ಥಿನಿಯರಾದ ಸ್ನೇಹ ರಾಘವನ್ ಮತ್ತು ಶ್ಲೋಕ ಅಶೋಕ್ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ನಗರದ ಗ್ರೀನ್ ವುಡ್ ಹೈ ಇಂಟರ್ ನಾಷನಲ್ ಶಾಲೆಯ ವಿದ್ಯಾರ್ಥಿಗಳು. ಆಕ್ಸಿಮೀಟರ್‌ಗಳನ್ನು ಬೆಂಗಳೂರು ಮೂಲದ ಸಂಪರ್ಕ ಎಂಬ ಎನ್ ಜಿಒಗೆ ದಾನ ಮಾಡಲಿದ್ದು, ಈ ಸಂಸ್ಥೆಯು ನಿರ್ಗತಿಕ ವರ್ಗದವರ ಏಳಿಗೆಗೆ ಶ್ರಮಿಸುತ್ತಿದೆ.
ಬೆಂಗಳೂರಿನ ಕೊಳಗೇರಿ ಪ್ರದೇಶದ ಮತ್ತು ಕೊಪ್ಪಳ ಜಿಲ್ಲೆಯ ಗ್ರಾಮಾಂತರ ಪ್ರದೇಶದ ಮಹಿಳೆಯರಿಗೆ ಆಕ್ಸಿಮೀಟರ್ ಗಳನ್ನು ವಿತರಿಸಲು ಉದ್ದೇಶಿಸಲಾಗಿದೆ.
ಪೋಸ್ಟರ್ ಗಳನ್ನು ವಿನ್ಯಾಸ ಮಾಡಿ ಗಿವ್ ಇಂಡಿಯಾ ವೆಬ್ ಸೈಟ್ ನಲ್ಲಿ ಹಣ ಸಂಗ್ರಹಿಸುವುದಾಗಿ ಪ್ರಕಟಿಸಿದ್ದೇವು. ಹಲವು ಆಕ್ಸಿಮೀಟರ್ ತಯಾರಕರನ್ನು ಸಂಪರ್ಕಿಸಿದೇವು. ಪೂರೈಕೆ ಕೊರತೆಯಿಂದಾಗಿ ಹೆಚ್ಚು ಹಣ ಕೇಳಿದರು. ನಾವಿಬ್ಬರೂ 2 ಲಕ್ಷ ರೂಪಾಯಿ ಸಂಗ್ರಹಿಸುವ ಗುರಿ ಹೊಂದಿದ್ದೆವು, ಇನ್ನೂ 14 ಸಾವಿರ ರೂಪಾಯಿ ಹೆಚ್ಚು ಸಂಗ್ರಹವಾಯಿತು. ಆಗ ಆಕ್ಸಿಮೀಟರ್ ಗಳ ಸಂಖ್ಯೆಯನ್ನು 300ಕ್ಕೆ ಹೆಚ್ಚಿಸಿದೆವು ಎಂದು ಶ್ಲೋಕಾ ಹೇಳುತ್ತಾಳೆ.
ಸೋಷಿಯಲ್ ಪ್ರಾಜೆಕ್ಟ್ ಭಾಗವಾಗಿ ಹಣ ಸಂಗ್ರಹಿಸುತ್ತೀರಾ ಎಂದು ಸಾಮಾಜಿಕ ಕಾರ್ಯಕರ್ತೆ ಅನುಪಮ ಪರೇಖ್ ಈ ವಿದ್ಯಾರ್ಥಿನಿಯರಲ್ಲಿ ಕೇಳಿ ಕೊರೋನಾ ಸಮಯದಲ್ಲಿ ಆಕ್ಸಿಮೀಟರ್ ಗೆ ಹಣ ಸಂಗ್ರಹಿಸಿ ಎಂದು ಕೇಳಿದರಂತೆ. ವಾರದ ಹಿಂದಷ್ಟೇ ಆರಂಭ ಮಾಡಿದ ಈ ಯೋಜನೆಗೆ ಎರಡೇ ದಿನಗಳಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತಂತೆ. ನಮಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದ್ದು ನೋಡಿ ಖುಷಿಯಾಗಿದೆ. ಮುಂದಿನ ದಿನಗಳಲ್ಲಿ ಇಂತಹ ಸಾಮಾಜಿಕ ಕಾಳಜಿಯ ಕೆಲಸಗಳನ್ನು ಮಾಡಲು ನಮಗೆ ಪ್ರೇರಣೆ ಸಿಕ್ಕಿದೆ ಎನ್ನುತ್ತಾರೆ, ಸ್ನೇಹಾ.
ನಮ್ಮ ಬೋರ್ಡ್ ಪರೀಕ್ಷೆ ರದ್ದಾಗಿರುವುದರಿಂದ ಈ ಕೊರೋನಾ ಸಂಕಷ್ಟ ಕಾಲದಲ್ಲಿ ಸಾಮಾಜಿಕ ಕೆಲಸಗಳಿಗೆ ಸಮಯ ಸಿಗುತ್ತಿದೆ. ಕೊರೋನಾ ಸಾಂಕ್ರಾಮಿಕ ಮತ್ತು ಲಸಿಕೆ ಅಭಿಯಾನದ ಬಗ್ಗೆ ಜಾಗೃತಿ ಮೂಡಿಸಲು ನಾನು ಪೋಸ್ಟರ್ ತಯಾರು ಮಾಡುತ್ತಿದ್ದೇನೆ, ಇದು ಬಹಳ ಮುಖ್ಯವಾಗಿದೆ ಎಂದು ಶ್ಲೋಕಾ ಹೇಳುತ್ತಾರೆ.

Latest Indian news

Popular Stories