ಕರ್ನಾಟಕದ 8 ಜಿಲ್ಲೆಗಳಲ್ಲಿ ಸೋಂಕು ಹೆಚ್ಚಳ

ಬೆಂಗಳೂರು: ಅತಿ ಹೆಚ್ಚು ಕೊರೊನಾ ಸೋಂಕಿತರಿರುವ ದೇಶದ 8 ರಾಜ್ಯಗಳಲ್ಲಿ ಕರ್ನಾಟಕ ಕೂಡಾ ಒಂದಾಗಿದ್ದು, ಈ ಬೆಳವಣಿಗೆಯು ಜನತೆಯಲ್ಲಿ ಆತಂಕ ಹೆಚ್ಚಾಗುವಂತೆ ಮಾಡಿದೆ.
ಹಲವು ರಾಜ್ಯಗಳಲ್ಲಿ ಅನ್‌ಲಾಕ್ ಪ್ರಕ್ರಿಯೆ ಆರಂಭಿಸಲಾಗಿದ್ದು, ಈ ಬೆಳವಣಿಗೆ ನಡುವಲ್ಲೇ ದೇಶದಲ್ಲಿ ಕೊರೋನಾ ಆರ್ಭಟ ಮತ್ತೆ ಹೆಚ್ಚಾಗತೊಡಗಿದೆ. ಅತೀ ಹೆಚ್ಚು ಕೊರೊನಾ ಸೋಂಕಿತರು ಇರುವ 8 ರಾಜ್ಯಗಳಲ್ಲಿ ಕರ್ನಾಟಕ ಕೂಡ ಒಂದಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲಾವ್ ಅಗರ್ವಾಲ್ ಅವರು, ದೇಶದಲ್ಲಿ ಪ್ರಸ್ತುತ ಪತ್ತೆಯಾಗಿರುವ ಶೇ.80ರಷ್ಟು ಸೋಂಕು ಪ್ರಕರಣಗಳು 8 ರಾಜ್ಯಗಳ 90 ಜಿಲ್ಲೆಗಳಿಂದಲೇ ವರದಿಯಾಗುತ್ತಿವೆ. ಮಹಾರಾಷ್ಟ್ರದ 15 ಜಿಲ್ಲೆಗಳು, ತಮಿಳುನಾಡಿನ 15 ಜಿಲ್ಲೆಗಳು, ಕೇರಳ 14 ಜಿಲ್ಲೆ, ಒಡಿಶಾ 11 ಆಂಧ್ರಪ್ರದೇಶ 10 ಮತ್ತು ಕರ್ನಾಟಕದ 8 ಜಿಲ್ಲೆಗಳಲ್ಲಿ ಅತೀ ಹೆಚ್ಚು ಸೋಂಕು ಪ್ರಕರಣಗಳು ವರದಿಯಾಗುತ್ತಿವೆ ಎಂದು ಹೇಳಿದ್ದಾರೆ.
ಇದು ನಿರಂತರ ಹೋರಾಟ ಎಂದು ಜನರು ಅರ್ಥಮಾಡಿಕೊಳ್ಳಬೇಕು. ವೈರಸ್ ದಣಿದಿಲ್ಲ, ಅದು ಇನ್ನೂ ಇದೆ. ಸೂಕ್ತವಾದ ನಡವಳಿಕೆಯಿಂದ ಮಾತ್ರ ಕೊರೊನಾವೈರಸ್ ಅನ್ನು ನಿಯಂತ್ರಿಸಬಹುದು ಎಂದು ತಿಳಿಸಿದ್ದಾರೆ.
ರಾಜ್ಯಗಳು ಅತೀ ಹೆಚ್ಚು ಸೋಂಕಿರುವ ಜಿಲ್ಲೆಗಳತ್ತ ಹೆಚ್ಚು ಗಮನಹರಿಸಬೇಕಿದೆ. ಈ ಪ್ರದೇಶಗಳಲ್ಲಿ ಅತೀ ಹೆಚ್ಚು ಲಸಿಕೆಯನ್ನು ಹಾಕುವುದರ ಜೊತೆಗೆ ಜನರು ಕೊರೋನಾ ನಿಯಮಗಳನ್ನು ಪಾಲನೆ ಮಾಡುವಂತೆ ನೋಡಿಕೊಳ್ಳಬೇಕಿದೆ. ಜೊತೆಗೆ ಆರ್‌ಟಿ-ಪಿಸಿಆರ್ ಪರೀಕ್ಷೆಗಳನ್ನು ಗರಿಷ್ಠ ಮಟ್ಟದಲ್ಲಿ ನಡೆಸಬೇಕಿದೆ ಎಂದು ರಾಜ್ಯಗಳಿಗೆ ಸೂಚನೆ ನೀಡಿದ್ದಾರೆ.
ಐಸಿಎಂಆರ್ ಮುಖ್ಯಸ್ಥ ಡಾ.ಬಲರಾಮ್ ಭಾರ್ಗವ ಅವರು ಮಾತನಾಡಿ, ಜನರು ಕೊರೋನಾ ನಿಯಮಗಳನ್ನು ಸೂಕ್ತ ರೀತಿಯಲ್ಲಿ ಪಾಲನೆ ಮಾಡದೇ ಹೋದಲ್ಲಿ ಇದೂವರೆಗೂ ತೆಗೆದುಕೊಂಡಿದ್ದ ಕಠಿಣ ಕ್ರಮಗಳೆಲ್ಲಾ ವ್ಯರ್ಥವಾಗುತ್ತದೆ. ಇದೀಗ ಡೆಲ್ಟಾ ಪ್ಲಸ್ ರೂಪಾಂತರಿ ವೈರಸ್ ಕೂಡ ಪತ್ತೆಯಾಗಿದ್ದು, ಇದೂ ಅತ್ಯಂತ ವೇಗವಾಗಿ ಸೋಂಕು ಹರಡುವಂತೆ ಮಾಡುತ್ತಿದೆ. ವೈರಸ್ ವಿರುದ್ಧ ಹೋರಾಟಲು ಡಬಲ್ ಮಾಸ್ಕ್, ಶುಚಿತ್ವ ಕಾಪಾಡುವುದು ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಅತ್ಯಂತ ಪ್ರಮುಖವಾಗಿದೆ ಎಂದು ಹೇಳಿದ್ದಾರೆ.
ಈ ನಡುವೆ ರಾಜ್ಯದ ಕೊಡಗು ಹಾಗೂ ಹಾಸನದಲ್ಲಿ ಸಕ್ರಿಯ ಪ್ರಕರಣಗಳ ಪ್ರಮಾಣ ದಿನಕಳೆದಂತೆ ಹೆಚ್ಚುತ್ತಲೇ ಇದೆ.

Latest Indian news

Popular Stories

error: Content is protected !!