ಬೀದರ್ ಸೇರಿ 10 ಜಿಲ್ಲಾ ಆಸ್ಪತ್ರೆಗಳಲ್ಲಿ ಆಮ್ಲಜನಕ ಉತ್ಪಾದನಾ ಘಟಕ

ಬೆಂಗಳೂರು: ಆಕ್ಸಿಜನ್ ಕೊರತೆ ಕಡಿಮೆ ಮಾಡಲು ಹಲವು ಕ್ರಮ ಕೈಗೊಂಡಿರುವ ರಾಜ್ಯ ಸರಕಾರ ಇದೀಗ, ಜಿಲ್ಲಾ ಮತ್ತು ತಾಲೂಕು ಆಸ್ಪತ್ರೆಗಳಲ್ಲಿ ಆಕ್ಸಿಜನ್ ತಯ್ಯಾರಿಕಾ ಘಟಕ ಸ್ಥಾಪಿಸಲು ಮುಂದಾಗಿದೆ.
10 ಜಿಲ್ಲಾ ಆಸ್ಪತ್ರೆ ಹಾಗೂ 30 ತಾಲೂಕು ಆಸ್ಪತ್ರೆಗಳು ಶೀಘ್ರದಲ್ಲಿಯೇ ಆಮ್ಲಜನಕ ಉತ್ಪಾದನಾ ಘಟಕ ಹೊಂದಲಿವೆ. ಜಿಲ್ಲಾ ಆಸ್ಪತ್ರೆಗಳ ಪಟ್ಟಿಯಲ್ಲಿ ಬೀದರ್ ಸೇರಿದೆ. ತಾಲೂಕು ಆಸ್ಪತ್ರೆಗಳ ಪಟ್ಟಿಯಲ್ಲಿ ಜಿಲ್ಲೆಯ ಭಾಲ್ಕಿ ತಾಲೂಕು ಆಸ್ಪತ್ರೆ ಸೇರಿದೆ.
ಆಮ್ಲಜನಕ ಉತ್ಪಾದನಾ ಘಟಕ ಸ್ಥಾಪನೆಗೆ ಆರೋಗ್ಯ ಇಲಾಖೆ ಒಪ್ಪಿಗೆ ನೀಡಿದೆ.
ಕೋವಿಡ್ ಪರಿಸ್ಥಿತಿ ಹಿನ್ನಲೆಯಲ್ಲಿ ಈ ವಿಷಯವನ್ನು ತುರ್ತಾಗಿ ಪರಿಗಣಿಸಿ ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ಕೊಡಲಾಗಿದೆ. ಘಟಕ ಸ್ಥಾಪನೆಗೆ ಅಗತ್ಯವಿರುವ ಸಿವಿಲ್ ಮತ್ತು ವಿದ್ಯುತ್ ಕಾಮಗಾರಿಯನ್ನು ತಕ್ಷಣವೇ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಣೆ ಮಾಡುವ ಅರ್ಹ ಗುತ್ತಿಗೆದಾರರಿಂದ ಅನುಷ್ಠಾನಗೊಳಿಸಬೇಕು ಎಂದು ಸೂಚಿಸಲಾಗಿದೆ.
10 ಜಿಲ್ಲಾ ಆಸ್ಪತ್ರೆಗಳಲ್ಲಿ 500 ಎಲ್‌ಟಿಎಂ ಮತ್ತು 30 ತಾಲೂಕು ಆಸ್ಪತ್ರೆಗಳಲ್ಲಿ 390 ಎಲ್‌ಟಿಎಂ ಸಾಮರ್ಥ್ಯದ ಆಮ್ಲಜನಕ ಉತ್ಪಾದನಾ ಘಟಕ ನಿರ್ಮಾಣ ಮಾಡಲು ಉದ್ದೇಶಿಸಲಾಗಿದೆ. ಪಿಎಸ್‌ಎ ತಂತ್ರಜ್ಞಾನದ ಅಡಿ ಘಟಕ ನಿರ್ಮಾಣಗೊಳ್ಳಲಿದೆ.
40 ಆಸ್ಪತ್ರೆಗಳ ಪೈಕಿ ಬೆಂಗಳೂರು, ಕಲಬುರಗಿ, ಮೈಸೂರು, ಉತ್ತರ ಕನ್ನಡ, ದಕ್ಷಿಣ ಕನ್ನಡ, ಗದಗ, ಹಾಸನ ಮತ್ತು ಶಿವಮೊಗ್ಗದ ಜಿಲ್ಲಾ ಆಸ್ಪತ್ರೆಗಳು ಸಹ ಸೇರಿವೆ.

Latest Indian news

Popular Stories