ಕಲಬುರಗಿ.ಡಿ.19:-ಪೌರಕಾರ್ಮಿಕರಿಗೆ ಉತ್ತಮ ಗುಣಮಟ್ಟದ ಮತ್ತು ಒಳ್ಳೆಯ ಪ್ರಮಾಣದಲ್ಲಿ ಬೆಳಗಿನ ಉಪಹಾರ ನೀಡಬೇಕು ಎಂದು ಜಿಲ್ಲಾಧಿಕಾರಿ ವಿ.ವಿ.ಜ್ಯೋತ್ಸ್ನಾ ಅವರು ಪಾಲಿಕೆ ಆಯುಕ್ತ ಸ್ನೇಹಲ್ ಸುಧಾಕರ ಲೋಖಂಡೆ ಅವರಿಗೆ ನಿರ್ದೇಶನ ನೀಡಿದರು.
ಶನಿವಾರ ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಜಿಲ್ಲಾ ಮಟ್ಟದ ಮ್ಯಾನ್ಯುವಲ್ ಸ್ಕ್ಯಾವೆಂಜರ್ಸ್ ನೇಮಕಾತಿ ಪ್ರತಿಬಂಧಕ ಮತ್ತು ಪುನರ್ ವಸತಿ ಅಧಿನಿಯಮ-2013ರ ಅನುಷ್ಠಾನದ ಕುರಿತು ಜಿಲ್ಲಾ ಮಟ್ಟದ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಗುಣಮಟ್ಟದ ಉಪಹಾರದ ನೀಡುತ್ತಿಲ್ಲ ಎಂಬ ಆರೋಪ ಹಿನ್ನೆಲೆಯಲ್ಲಿ ಕಲಬುರಗಿ ಮಹಾನಗರ ಪಾಲಿಕೆಯಿಂದ ಕಳೆದ ಒಂದು ತಿಂಗಳಿನಿಂದ ಉಚಿತ ಉಪಹಾರ ನಿಲ್ಲಿಸಿ ಅದರ ಬದಲಾಗಿ ಹಣ ನೀಡಲಾಗುತ್ತಿದೆ. ಇದಕ್ಕೆ ಜಿಲ್ಲಾಧಿಕಾರಿಗಳು ಪೌರಕಾರ್ಮಿಕರಿಗೆ ಹಣ ನೀಡಿದರೆ ಸರಿ ಹೋಗುವುದಿಲ್ಲ, ಮತ್ತೊಮ್ಮೆ ಟೆಂಡರ್ ಕರೆದು ಗುಣಮಟ್ಟದ ಉಚಿತ ಉಪಹಾರ ನೀಡಲು ಕ್ರಮ ವಹಿಸಿ ಎಂದರು.
ರಾಷ್ಟ್ರೀಯ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮದಿಂದ ಪೌರ ಕಾರ್ಮಿಕರು ಮತ್ತು ಮ್ಯಾನ್ಯುವಲ್ ಸ್ಕ್ಯಾವೆಂಜರ್ಸ್‍ಗಳು ಮತ್ತು ಅವರ ಅವಲಂಭಿತರಿಗೆ ನೇರ ಸಾಲ ಮತ್ತು ಉದ್ಯಮಶೀಲತಾ ಯೋಜನೆಯಡಿ 449 ಅರ್ಜಿ ಸಲ್ಲಿಕೆಯಾಗಿದ್ದು, ಗ್ರಾಮ ಪಂಚಾಯತಿ ನೀತಿ ಸಂಹಿತೆ ಮುಗಿದ ಕೂಡಲೆ ಆಯ್ಕೆ ಪ್ರಕ್ರಿಯೆ ಪೂರ್ಣಗೊಳಿಸಬೇಕು ಎಂದು ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದ ಅಧಿಕಾರಿಗಳಿಗೆ ಸೂಚಿಸಿದರು.
ಕಲಬುರಗಿ ಮಹಾನಗರ ಪಾಲಿಕೆಯ ಪೌರಕಾರ್ಮಿಕರಿಗೆ ಇ.ಎಸ್.ಐ. ಮತ್ತು ಪಿ.ಎಫ್ ವೇತನ ಗುತ್ತಿಗೆದಾರ ಸರಿಯಾಗಿ ಪಾವತಿ ಮಾಡದಿರುವ ಸಂಬಂಧ ಕಾರ್ಮಿಕ ಉಪ ಆಯುಕ್ತರ ಬಳಿ ಪ್ರಕರಣ ಬಾಕಿಯಿದ್ದು, ಕೂಡಲೆ ಇತ್ಯರ್ಥಪಡಿಸಬೇಕು ಎಂದು ಜಿಲ್ಲಾ ಕಾರ್ಮಿಕ ಅಧಿಕಾರಿ ಶ್ರೀಹರಿ ದೇಶಪಾಂಡೆ ಅವರಿಗೆ ಜಿಲ್ಲಾಧಿಕಾರಿಗಳು ನಿರ್ದೇಶನ ನೀಡಿದರು.
ಪೌರಕಾರ್ಮಿಕರಿಗೆ ಆಗಾಗ ಆರೋಗ್ಯ ತಪಾಸಣೆ ನಡೆಸಬೇಕು ಮತ್ತು ಅವರ ಸ್ವಚ್ಛತಾ ಕಾರ್ಯಕ್ಕೆ ಅಗತ್ಯ ಪರಿಕರಗಳನ್ನು ಪೌರ ಸಂಸ್ಥೆಗಳು ಪೂರೈಸಬೇಕು. ಗೃಹಭಾಗ್ಯ ಯೋಜನೆಯಡಿ ಪೌರ ಕಾರ್ಮಿಕರಿಗೆ ನಿವೇಶನ ನೀಡುವ ಸಂಬಂಧ ಬೇಕಾಗುವ ನಿವೇಶನ ಮತ್ತು ಜಮೀನು ಕುರಿತು ಮಾಹಿತಿ ನೀಡುವಂತೆ ಡಿ.ಯು.ಡಿ.ಸಿ. ಯೋಜನಾ ನಿರ್ದೇಶಕ ಶಿವಶರಣಪ್ಪ ನಂದಗಿರಿ ಅವರಿಗೆ ಸೂಚಿಸಿದರು.
ಮಹಾನಗರ ಪಾಲಿಕೆಯ ಆಯುಕ್ತ ಸ್ನೇಹಲ ಸುಧಾಕರ ಲೋಖಂಡೆ ಮಾತನಾಡಿ ಗೃಹಭಾಗ್ಯ ಯೋಜನೆಯಡಿ ನಗರದ 122 ಪೌರಕಾರ್ಮಿಕರಿಗೆ ಮನೆ ನಿರ್ಮಣ ಕಾರ್ಯಕ್ಕೆ ಈಗಾಗಲೆ ಟೆಂಡರ್ ಕರೆಯಲಾಗಿದೆ ಎಂದು ಸಭೆಗೆ ತಿಳಿಸಿದರು.
ಡಿ.ಯು.ಡಿ.ಸಿ. ಯೋಜನಾ ನಿರ್ದೇಶಕ ಶಿವಶರಣಪ್ಪ ನಂದಗಿರಿ ಮಾತನಾಡಿ ಕಲಬುರಗಿ ಪಾಲಿಕೆಯ 160 ಸೇರಿದಂತೆ ಜಿಲ್ಲೆಯಾದ್ಯಂತ 196 ಮ್ಯಾನ್ಯುವಲ್ ಸ್ಕ್ಯಾವೆಂಜರ್ಸ್‍ಗಳೆಂದು ಗುರುತಿಸಿ ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ. ಜಿಲ್ಲೆಯಾದ್ಯಂತ 9 ಸಕ್ಕಿಂಗ್ ಮತ್ತು 4 ಜಟ್ಟಿಂಗ್ ಯಂತ್ರಗಳಿದ್ದು, ಎಲ್ಲಿಯೂ ಮ್ಯಾನ್ ಹೋಲ್ ಸ್ವಚ್ಚತೆಗೆ ಮಾನವರನ್ನು ಬಳಸುತ್ತಿಲ್ಲ. ಗ್ರಾಮೀಣ ಭಾಗದಲ್ಲಿಯೂ ಮ್ಯಾನ್ಯುವಲ್ ಸ್ಕ್ಯಾವೆಂಜರ್ಸ್‍ಗಳ ಸಮೀಕ್ಷೆ ಕೈಗೊಳ್ಳುವಂತೆ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಪತ್ರ ಬರೆಯಲಾಗಿದೆ ಎಂದರು.
ಜಿಲ್ಲೆಯ 9 ಸ್ಥಳೀಯ ಸಂಸ್ಥೆಗಳಲ್ಲಿ ಮಂಜೂರಾದ 1325 ಪೌರಕಾರ್ಮಿಕ ಹುದ್ದೆಗಳ ಪೈಕಿ 507 ಜನರ ಖಾಯಂ ಆಗಿ ಮತ್ತು 1024 ಜನರು ಗುತ್ತಿಗೆ ಅಧಾರದ ಮೇಲೆ ಕಾರ್ಯನಿರ್ವಹಿಸುತ್ತಿದ್ದಾರೆ. ಖಾಲಿ ಹುದ್ದೆಗಳ ಭರ್ತಿ ಪ್ರಕ್ರಿಯೆ ಚಾಲ್ತಿಯಲ್ಲಿದ್ದು, ನೇಮಕಾತಿಗಳ ಅರ್ಜಿಗಳ ಪರಿಶೀಲನಾ ಕಾರ್ಯ ಮುಗಿದಿದೆ ಎಂದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಸಿ.ಇ.ಓ. ಡಾ.ಪಿ.ರಾಜಾ, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಅಲ್ಲಾಭಕ್ಷ ಸೇರಿದಂತೆ ವಿವಿಧ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.