ಕೊಡಗು: ಅಕಾಲಿಕ ಮಳೆಯಿಂದ ಬೆಳೆಗಾರರು ಅತಂತ್ರ : ಪ್ಯಾಕೇಜ್ ಘೋಷಣೆಗೆ ಬಿ.ಎನ್. ಪ್ರತ್ಯು ಒತ್ತಾಯ

ಮಡಿಕೇರಿ ಜ.12 : ಕಳೆದ ಕೆಲದಿನಗಳಿಂದ ಕೊಡಗಿನಲ್ಲಿ ಸುರಿಯುತ್ತಿರುವ ಅಕಾಲಿಕ ಮಳೆಯಿಂದ ಜಿಲ್ಲೆಯ ಬೆಳೆಗಾರರು ಮತ್ತಷ್ಟು ತೊಂದರೆ ಅನುಭವಿಸುವಂತಾಗಿದೆ. ಇದನ್ನು ಗಂಭೀರವಾಗಿ ಪರಿಗಣಿಸಿ ಜಿಲ್ಲೆಯ ಬೆಳಗಾರರ ಪುನಶ್ಚೇತನಕ್ಕಾಗಿ ಸರಕಾರ ವಿಶೇಷ ಪ್ಯಾಕೇಜನ್ನು ಕೊಡಗಿಗೆ ಸೀಮಿತವಾಗಿ ಘೋಷಿಸಬೇಕು ಎಂದು ಜಿ.ಪಂ ಸದಸ್ಯ ಬಿ.ಎನ್.ಪ್ರತ್ಯು ಒತ್ತಾಯಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಲೆ ಕುಸಿತದಿಂದ ಮೊದಲೇ ತೊಂದರೆ ಅನುಭವಿಸುತ್ತಿರುವ ರೈತರಿಗೆ ಅಕಾಲಿಕವಾಗಿ ಬೀಳುತ್ತಿರುವ ಮಳೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಕೊಡಗಿನ ಬೆಳಗಾರರು ಈ ರೀತಿ ನಿರಂತರವಾಗಿ ಅನುಭವಿಸುತ್ತಿರುವ ಸಂಕಷ್ಟಗಳಿಂದಾಗಿ ಕೃಷಿಯನ್ನೇ ಸಂಪೂರ್ಣವಾಗಿ ಕೈ ಬಿಡುವ ಪರಿಸ್ಥಿತಿ ಬಂದೊದಗಿದೆ. ಸರಕಾರದ ಸೂಕ್ತ ನೆರವು ದೊರೆತರೆ ಮಾತ್ರ ಜಿಲ್ಲೆಯ ಕೃಷಿ ಮತ್ತು ಬೆಳೆಗಾರರ ಉಳಿವು ಸಾಧ್ಯ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಕೊಡಗಿನ ಪ್ರಮುಖ ಬೆಳೆಗಳಾದ ಭತ್ತ, ಕಾಫಿ, ಕರಿಮೆಣಸು, ಅಡಿಕೆ ಬೆಳೆಗಾರರು ತೀವ್ರ ತೊಂದರೆಯಲ್ಲಿದ್ದಾರೆ. ಪ್ರಾಕೃತಿಕ ವಿಕೋಪದಿಂದ ತೀವ್ರ ನಷ್ಟ ಅನುಭವಿಸಿದ್ದ ಬೆಳೆಗಾರರಿಗೆ, ಫಸಲಿನ ಕಟಾವು ಸಮಯದಲ್ಲಿ ಎದುರಾದ ಅಕಾಲಿಕ ಮಳೆ ಮತ್ತಷ್ಟು ನಷ್ಟ ಉಂಟು ಮಾಡಿದೆ. ಈ ಮಧ್ಯೆ ನಿರಂತರವಾಗಿ ಕಾಡುತ್ತಿರುವ ವನ್ಯಜೀವಿ ಉಪಟಳದಿಂದ ರೈತನ ಬದುಕು ಕಷ್ಟದಲ್ಲಿದೆ. ಈ ವಾಸ್ತವತೆಯನ್ನು ಸರಕಾರ ಅರಿತುಕೊಳ್ಳಬೇಕು. ಜಿಲ್ಲಾಧಿಕಾರಿಗಳು ಈ ಕುರಿತು ಕೂಡಲೇ ಜನಪ್ರತಿನಿಧಿಗಳ ಮತ್ತು ಅಧಿಕಾರಿಗಳ ಜಿಲ್ಲಾ ಮಟ್ಟದ ಸಭೆ ಕರೆದು ಅಭಿಪ್ರಾಯ ಸಂಗ್ರಹಿಸಿ ಸರಕಾರಕ್ಕೆ ನೈಜ ವರದಿ ಸಲ್ಲಿಸಬೇಕು ಎಂದು ಆಗ್ರಹಿಸಿದ್ದಾರೆ.

Latest Indian news

Popular Stories