ಮಡಿಕೇರಿ ಡಿ.11 : ಕೊಡಗು ಜಿಲ್ಲೆಯಲ್ಲಿ ಮಾನವ ಕಾಡಾನೆ ಹಾವಳಿಗೆ ಕಡಿವಾಣ ಬೀಳುವ ಲಕ್ಷಣಗಳು ಕಂಡು ಬರುತ್ತಿಲ್ಲ. ಸೋಲಾರ್ ಬೇಲಿ, ರೈಲು ಕಂಬಿ, ಆನೆ ಕಂದಕ ಸೇರಿದಂತೆ ತಾಂತ್ರಿಕವಾಗಿ ಕಾಡಾನೆ ಹಾವಳಿಯನ್ನು ನಿಯಂತ್ರಸಲು ಹರಸಾಹಸ ನಡೆಸಲಾಗುತ್ತಿದೆ. ಅದರೆ ಕಾಡಾನೆ ಹಾವಳಿಗೆ ಕಡಿವಾಣ ಬಿದ್ದಿಲ್ಲ. ಹೀಗಾಗಿ ಜಿಲ್ಲೆಯ ಕೃಷಿಕರು ಮತ್ತು ಕಾಫಿ ಬೆಳೆಗಾರರು ಅಷ್ಟೇ ಏಕೆ ತೋಟಗಳ ಕಾರ್ಮಿಕರ ಪಾಲಿಗೆ ಕಾಡಾನೆಗಳು ನುಂಗಲಾರದ ತುತ್ತಾಗಿ ಪರಿಣಮಿಸಿವೆ.
ಹೀಗಾಗಿ ಬೆಳೆಗಾರರೇ ಮಾರುಕಟ್ಟೆಯಲ್ಲಿ ಅಗ್ಗದ ದರದಲ್ಲಿ ಲಭ್ಯವಿರುವ ತಾಂತ್ರಿಕ ಕೃಷಿ ಆವಿಷ್ಕಾರಗಳನ್ನು ತಮ್ಮ ತೋಟಗಳಲ್ಲಿ ಅಳವಡಿಸಿಕೊಳ್ಳುತ್ತಿದ್ದಾರೆ. ಕೊಡಗಿನ ಯುವ ಕಾಫಿ ಬೆಳೆಗಾರರೊಬ್ಬರು ಕಾಡಾನೆಗಳನ್ನು ಓಡಿಸುವ ಕೃಷಿ ಯಂತ್ರವನ್ನು ತಮ್ಮ ತೋಟದಲ್ಲಿ ಅಳವಡಿಸಿದ್ದಾರೆ. ಮಹಾರಾಷ್ಟ್ರದಿಂದ ಈ ಯಂತ್ರವನ್ನು ತರಿಸಲಾಗಿದ್ದು, ಸಂಪೂರ್ಣ ಸೋಲಾರ್ ಬ್ಯಾಟರಿ ಮೂಲಕ ಈ ಯಂತ್ರ ಕೆಲಸ ಮಾಡುತ್ತಿದೆ. ಈ ಯಂತ್ರದಲ್ಲಿ ಒಂದು ಎಂ.ಪಿ.3 ಪ್ಲೇಯರ್, ಒಂದು ಕಂಟ್ರೋಲ್ ಯೂನಿಟ್ ಹಾಗೂ ಸೋಲಾರ್ ಪ್ಯಾನಲ್ ಕೂಡ ಇದೆ. ಹಗಲು ಮತ್ತು ರಾತ್ರಿ ವೇಳೆಯಲ್ಲಿಯೂ ಕಾರ್ಯಾಚರಿಸುವಂತೆ ಈ ಕೃಷಿ ಯಂತ್ರವನ್ನು ಅಭಿವೃದ್ದಿಪಡಿಸಲಾಗಿದೆ.
ತೋಟಗಳಲ್ಲಿ ದಿನದ 24 ಗಂಟೆಯೂ ಮಾನವನ ಇರುವಿಕೆಯನ್ನು ಪ್ರತಿ ಬಿಂಬಿಸುವಂತೆ ಈ ಯಂತ್ರ ಶಬ್ಧಗಳನ್ನು ಕೂಡ ಹೊರ ಸೂಸುವುದರಿಂದ ಕಾಡಾನೆಗಳು ತೋಟದ ಕಡೆಗಳಿಗೆ ಮುಖ ಮಾಡುವುದಿಲ್ಲ ಎಂದು ಬೆಳೆಗಾಗರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ಯಂತ್ರದಲ್ಲಿ ಗುಂಡು ಹಾರಿಸುವ, ಗಂಟೆ ಬಾರಿಸುವ, ಮಾನವ ಆನೆ ಓಡಿಸುವಾಗ ಬೊಬ್ಬೆ ಹೊಡೆಯುವ, ನಾಯಿ ಬೊಗಳುವ ರೀತಿಯ ಶಬ್ದಗಳನ್ನು ಹೊರ ಸೂಸುತ್ತದೆ. ಈ ಯಂತ್ರವನ್ನು ತೋಟದಲ್ಲಿ ಅಳವಡಿಸಲು 15ರಿಂದ 20 ಸಾವಿರ ರೂ. ವೆಚ್ಚವಾಗಿದೆ ಎನ್ನುವ ಬೆಳೆಗಾರ, ಒಮ್ಮೆ ಈ ಯಂತ್ರವನ್ನು ಚಾಲನೆ ಮಾಡಿದಲ್ಲಿ ಪ್ರತಿ 15 ನಿಮಿಷಕ್ಕೊಮ್ಮೆ ಮತ್ತದೇ ಪುನರಾವರ್ತನೆ ಮಾಡಿಕೊಳ್ಳುತ್ತದೆ. ಇದರಿಂದ ತೋಟಗಳನ್ನು ಜನರ ಇರುವಿಕೆಯನ್ನು ಅರಿತುಕೊಳ್ಳುವ ಆನೆಗಳು ತೋಟಗಳಿಗೆ ಬರುವುದನ್ನು ತಡೆಯಬಹುದು ಎಂದು ಯುವ ಬೆಳೆಗಾರರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.