ಮಡಿಕೇರಿ ಡಿ.29 : ಅಯೋಧ್ಯೆಯಲ್ಲಿ ಶ್ರೀರಾಮನ ಭವ್ಯ ಮಂದಿರದ ನಿರ್ಮಾಣದೊಂದಿಗೆ ಶತ ಶತಮಾನಗಳ ಭಾರತೀಯರ ಕನಸು ನನಸಾಗುತ್ತಿರುವುದರ ಜೊತೆಯಲ್ಲೆ, ‘ರಾಮ ರಾಜ್ಯದ’ ಪರಿಕಲ್ಪನೆ ಸಾಕಾರಗೊಳ್ಳಬೇಕೆಂದು ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‍ನ ಟ್ರಸ್ಟಿಗಳು, ದಕ್ಷಿಣ ಭಾರತದ ಪ್ರತಿನಿಧಿಗಳಾದ ಉಡುಪಿಯ ಪೇಜಾವರ ಮಠದ ಶ್ರೀ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿಗಳು ಆಶಯ ವ್ಯಕ್ತÀಪÀಡಿಸಿದ್ದಾರೆ.
ನಗರದ ಓಂಕಾರ ಸದನದಲ್ಲಿ ಶ್ರೀ ರಾಮ ಜನ್ಮಭೂಮಿ ಟ್ರಸ್ಟ್‍ನ ‘ಅಯೋಧ್ಯೆ ಶ್ರೀರಾಮ ಮಂದಿರ ನಿಧಿ ಸಮರ್ಪಣಾ ಅಭಿಯಾನ’ ಕಛೇರಿಗೆ ಚಾಲನೆ ನೀಡಿ, ಶ್ರೀ ಆಂಜನೇಯ ದೇವಸ್ಥಾನದ ಆವರಣದಲ್ಲಿ ಆಶೀರ್ವಚನ ನೀಡಿ ಅವರು ಮಾತನಾಡಿದರು. ಅಯೋಧ್ಯೆಯಲ್ಲಿನ ಶ್ರೀರಾಮಮಂದಿರದ ನಿರ್ಮಾಣದೊಂದಿಗೆ ಪ್ರತಿಯೊಬ್ಬರು ಶ್ರೀರಾಮನ ಆದರ್ಶಗಳ ಪಾಲನೆಯ ಮೂಲಕ ಸ್ವಯಂ ‘ರಾಮ’ನೇ ಆಗಬೇಕು. ಆ ಮೂಲಕ ದುರ್ಗುಣಗಳಿಂದ ದೂರವಾಗಿ ಸದ್ಗುಣಗಳನ್ನು ಮೈಗೂಡಿಸಿಕೊಳ್ಳುವ ಮೂಲಕ ರಾಮ ರಾಜ್ಯದ ಪರಿಕಲ್ಪನೆ ಸಾಕಾರಗೊಳ್ಳುತ್ತದೆಂದು ವಿಶ್ವಾಸದಿಂದ ನುಡಿದು, ಇದಕ್ಕಾಗಿ ಪ್ರತಿಯೊಬ್ಬರು ಧೀಕ್ಷಾ ಬದ್ಧರಾಗುವ ಅಗತ್ಯವಿದೆಯೆಂದು ದೃಢವಾಗಿ ನುಡಿದರು.
::: ನೆರವನ್ನು ಸಮಾನವಾಗಿ ಸ್ವೀಕರಿಸುತ್ತೇವೆ :::
ಅಯೋಧ್ಯೆಯಲ್ಲಿ ಶ್ರೀರಾಮನ ಮಂದಿರವನ್ನು ಹಣ ಉಳ್ಳವರು ಏಕಾಂಗಿಯಾಗಿ ಕಟ್ಟಿ ಬಿಡಬಹುದು. ಆದರೆ, ಅದು ಶ್ರೀರಾಮ ಮಂದಿರವಾಗಿರಲಾರದು. ಈ ಹಿನ್ನೆಲೆಯಲ್ಲಿ ಶ್ರೀ ರಾಮ ಮಂದಿರ ನಮ್ಮ ನಿಮ್ಮೆಲ್ಲರ ಮಂದಿರವಾಗಿ ರಾರಾಜಿಸಬೇಕಾಗಿರುವುದರಿಂದ ಮಂದಿರ ನಿರ್ಮಾಣದಲ್ಲಿ ನಾವೆಲ್ಲರು ಕೈಜೋಡಿಸಬೇಕಾಗಿದೆ. ಈ ಹಂತದಲ್ಲಿ ಕನಿಷ್ಠ ಪಕ್ಷ 10 ರೂ.ಗಳಿಂದ 10 ಕೋಟಿಯವರೆಗಿನ ನೆರವನ್ನು ಸಮಾನವಾಗಿ ಪ್ರೀತಿ ಪೂರ್ವಕವಾಗಿ ಸ್ವೀಕರಿಸಲಾಗುತ್ತದೆಂದು ಶ್ರೀ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿಗಳು ಷ್ಪಷ್ಟ ಪಡಿಸಿದರು.
ಶ್ರೀ ರಾಮ ಮಂದಿರ ನಿರ್ಮಾಣಕ್ಕೆ ನಿಧಿ ಸಂಗ್ರಹ ಅಭಿಯಾನ ಮುಂದಿನ ಮಕರ ಸಂಕ್ರಾತಿಯ ಮರು ದಿನದಿಂದ 45 ದಿನಗಳ ಕಾಲ ನಡೆಯಲಿದೆ. ಈ ಅವಧಿಯಲ್ಲಿ ಪ್ರತಿ ಮನೆ ಮನೆಗಳಿಗೆ ತೆರಳಿ ಅವರವರ ಸಾಮಥ್ರ್ಯದ ನೆರವನ್ನು ಸ್ವೀಕರಿಸಲಾಗುತ್ತದೆ. ಅಯೋಧ್ಯೆಯಲ್ಲಿ ಉದ್ದೇಶಿತ ಶ್ರೀ ರಾಮಮಂದಿರವನ್ನು 500 ಕೋಟಿ ರೂ. ವೆಚ್ಚದಲ್ಲಿ ಹಾಗೂ ಅದರ ಸುತ್ತಮುತ್ತಲ ಪ್ರದೇಶದಲ್ಲಿ 1 ಸಾವಿರ ಕೋಟಿ ವೆಚ್ಚದಲ್ಲಿ ಮೂಲ ಸೌಲಭ್ಯಗಳನ್ನು ಒದಗಿಸುವ ನಿರ್ಮಾಣ ಕಾರ್ಯಗಳು ನಡೆಯಲಿದ್ದು, ಇದಕ್ಕಾಗಿ ನಡೆಯುವ ನೆರವಿನ ಸಂಗ್ರಹದಲ್ಲಿ ಪ್ರತಿಯೊಬ್ಬರು ಕೈಜೋಡಿಸುವಂತೆ ಮನವಿ ಮಾಡಿ, ಶ್ರೀ ರಾಮಮಂದಿರ ನಿರ್ಮಾಣಕ್ಕೆ ನೀಡುವ ನೆರವು ಎಷ್ಟು ಎನ್ನುವುದು ಮುಖ್ಯವಲ್ಲ. ಬದಲಾಗಿ ಯಾವ ಭಾವದಿಂದ ಅದನ್ನು ನೀಡುತ್ತಿದ್ದೇವೆ ಎನ್ನುವುದು ಮುಖ್ಯವಾಗುತ್ತದೆ. ರಾಮ ಸೇತುವಿನ ನಿರ್ಮಾಣದಲ್ಲಿ ಅಳಿಲಿನ ಸೇವೆ ಏನು ಎನ್ನುವುದು ಮುಖ್ಯವಲ್ಲ. ಅದರ ಹಿಂದಿನ ಅಚಲ ಶ್ರದ್ಧೆ, ನೆರವು ನೀಡಬೇಕೆನ್ನುವ ಭಾವ ಮುಖ್ಯವಾಗಿದೆಯೆಂದು ಸ್ವಾಮೀಜಿಗಳು ಅಭಿಪ್ರಾಯಿಸಿದರು.
ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಅರಮೇರಿ ಕಳಂಚೇರಿ ಮಠದ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿಗಳು ಮಾತನಾಡಿ, ರಾಷ್ಟ್ರದ ಜನರ ಇಚ್ಛಾಶಕ್ತಿಯೊಂದಿಗೆ ರಾಮ ಮಂದಿರ ನಿರ್ಮಾಣದ ನಿಧಿ ಸಂಗ್ರಹ ಅಭಿಯಾನ ಯಶಸ್ವಿಯಾಗಲಿದ್ದು, ಎಲ್ಲರೂ ನಮ್ಮವರು ಎನ್ನುವ ವಿಶಾಲ ಚಿಂತನೆಯ ರಾಮ ರಾಜ್ಯದ ಪರಿಕಲ್ಪನೆ ಸಾಕಾರಗೊಳ್ಳುವ ಅಗತ್ಯವಿದೆ ಎಂದರು. ಬಾಹ್ಯ ಸಂಪತ್ತಿನ ಗಳಿಕೆಯ ತರಾತುರಿಯಲ್ಲಿ ಆಂತರ್ಯದ ಸಂಪತ್ತನ್ನು ಕಳೆದುಕೊಳ್ಳುವಂತಾಗಬಾರದೆಂದು ಸೂಕ್ಷ್ಮವಾಗಿ ಇದೇ ಸಂದರ್ಭ ನುಡಿದರು.
ಪೊನ್ನಂಪೇಟೆ ಶ್ರೀರಾಮಕೃಷ್ಣ ಶಾರದಾಶ್ರಮದ ಶ್ರೀಬೋಧಸ್ವರೂಪಾನಂದ ಮಹಾರಾಜ್ ಮಾತನಾಡಿ, ಅಯೋಧ್ಯೆಯಲ್ಲಿ ನಿರ್ಮಾಣವಾಗಲಿರುವ ಶ್ರೀ ರಾಮ ಮಂದಿರ ಭಾರತದ ಅಸ್ಮಿಥೆಗೆ ಪೂರಕವಾದ ವಿಚಾರ. ಇಂತಹ ಮಂದಿರ ಜನ ಸಾಮಾನ್ಯರ ಸಹಕಾರದಿಂದಲೆ ನಿರ್ಮಾಣವಾಗಬೇಕಾಗಿದೆಯೆಂದು ತಿಳಿಸಿ, 2018ರಲ್ಲಿ ಕೊಡಗಿನಲ್ಲಿ ನಡೆದ ಪ್ರಾಕೃತಿಕ ವಿಕೋಪದ ಸಂದರ್ಭ ನಾಡಿನ ಜನತೆಯಿಂದ ನೆರವಿನ ಮಹಾಪೂರವೇ ಹರಿದು ಬಂದಿತ್ತು. ಇದೀಗ ಸ್ವಾರ್ಥರಹಿತವಾದ, ಸೇವಾ ಮನೋಭಾವನೆಯಡಿ ನಡೆಯುವ ಶ್ರೀರಾಮಮಂದಿರ ನಿರ್ಮಾಣದ ಉದ್ದೇಶಿತ ನಿಧಿ ಸಂಗ್ರಹಕ್ಕೆ ನಿಗದಿತ ಕಾಲ ಮಿತಿಯ ಅಗತ್ಯವಿಲ್ಲ. ಅದಕ್ಕೂ ಮುಂಚಿತವಾಗಿಯೇ ನೆರವು ದೊರಕಲಿದೆಯೆಂದು ವಿಶ್ವಾಸದಿಂದ ನುಡಿದರು.
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ದಕ್ಷಿಣ ಪ್ರಾಂತೀಯ ಸಹ ಸೇವಾ ಪ್ರಮುಖ್ ಸೀತಾರಾಂ ಮಾತನಾಡಿ, 1529 ರಲ್ಲಿ ಅಯೋಧ್ಯೆಯಲ್ಲಿ ಬಾಬರ್‍ನ ಮಂತ್ರಿ ಮೀರ್ ಬಾಕಿಯಾನಿಂದ ಶ್ರೀ ರಾಮಮಂದಿರ ಧ್ವಂಸ ಗೊಂಡಲ್ಲಿಂದ ಅಲ್ಲಿ ಮತ್ತೆ ಶ್ರೀರಾಮನ ಮಂದಿರವನ್ನು ಕಾಣಬೇಕೆನ್ನುವ ಹಂಬಲದ ಹೋರಾಟಗಳು ನಿರಂತರವಾಗಿ ನಡೆಯುತ್ತಾ ಬಂದಿದ್ದು, 1990ರ ದಶಕದ ಕರಸೇವೆಯೊಮದಿಗೆ ಮಂದಿರ ನಿರ್ಮಾಣದ ನಿರೀಕ್ಷೆಗಳು ಬಲವಾಯಿತೆಂದು ತಿಳಿಸಿದ ಅವರು, ಸ್ವಾತಂತ್ರ್ಯಾ ನಂತರದ ಅವಧಿಯಲ್ಲಿ ವಿಶ್ವ ಸಮುದಾಯ ಭಾರತವನ್ನು ನೋಡುವ ದೃಷ್ಟಿ ಬದಲಾಗಿದೆ. ಪ್ರಸ್ತುತ ಭಾರತದ ಶ್ರೇಷ್ಟ ಸಂಸ್ಕøತಿ, ಇಲ್ಲಿಯ ಆದರ್ಶಗಳತ್ತ ಇಡೀ ಜಗತ್ತು ನೋಡುತ್ತಿದ್ದು, ಪರಿವರ್ತನೆಯ ಕಾಲ ಕೂಡಿ ಬಂದಿದೆಯೆಂದು ಹೆಮ್ಮೆಯಿಂದÀ ನುಡಿದರು.
ಮಕರ ಸಂಕ್ರಾಂತಿಯ ಮರು ದಿನದಿಂದ ಪ್ರತಿ ಗ್ರಾಮ ಮಟ್ಟದಲ್ಲಿ ಆಯಾ ಗ್ರಾಮ ದೇವತೆಗೆ ಪೂಜೆ ಸಲ್ಲಿಸುವುದರೊಂದಿಗೆ ಹಿಂದೂ ಕಾರ್ಯಕರ್ತರು ಪ್ರತಿಯೊಂದು ಮನೆಗೆ ನಿಧಿ ಸಂಗ್ರಹಕ್ಕೆ ಆಗಮಿಸಲಿದ್ದಾರೆ. ಇದಕ್ಕಾಗಿ 10 ರೂ., 100 ರೂ. ಮತ್ತು 1 ಸಾವಿರ ರೂ.ಗಳ ಕೂಪನ್ ಸಿದ್ಧಪಡಿಸಲಾಗಿದೆ. 2 ಸಾವಿರ ರೂ.ಗಳಿಗಿಂತ ಹೆಚ್ಚಿನ ನೆರವನ್ನು ಅಗತ್ಯ ರಶೀದಿಯನ್ನು ನೀಡಿ ಪಡೆದುಕೊಳ್ಳಲಾಗುತ್ತದೆ. 20 ಸಾವಿರ ಮೇಲ್ಪಟ್ಟ ನೆರವನ್ನು ಚೆಕ್ ಮೂಲಕವೇ ಪಡೆದುಕೊಳ್ಳಲಾಗುತ್ತದೆ. ಸಂಗ್ರಹಿತ ಹಣ ಯಾವೊಬ್ಬ ಕಾರ್ಯಕರ್ತನ ಬಳಿಯಲ್ಲಿ 24 ಗಂಟೆಗಿಂತ ಹೆಚ್ಚಿನ ಅವಧಿ ಇರುವಂತಿಲ್ಲ, ಸಂಗ್ರಹಿತ ಹಣವನ್ನು ಸೂಚಿತ ಬ್ಯಾಂಕ್ ಖಾತೆಗೆ ಜಮೆ ಮಾಡುವ ಮೂಲಕ ಅತ್ಯಂತ ಪಾರದರ್ಶಕತೆಯನ್ನು ಕಾಯ್ದುಕೊಳ್ಳಲಾಗುತ್ತದೆಂದು ಸ್ಪÀಷ್ಟಪಡಿಸಿದರು.
ವೇದಿಕೆಯಲ್ಲಿ ಮಂಗಳೂರು ವಿಹಿಂಪ ಸಹ ಕಾರ್ಯದರ್ಶಿ ಕೃಷ್ಣ ಮೂರ್ತಿ, ಆರ್‍ಎಸ್‍ಎಸ್ ಜಿಲ್ಲಾ ಸಂಘ ಚಾಲಕ್ ಚಕ್ಕೇರ ಮನು ಕಾವೇರಪ್ಪ ಉಪಸ್ಥಿತರಿದ್ದರು.
ಶಾಸಕ ಅಪ್ಪಚ್ಚು ರಂಜನ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ರವಿ ಭೂತನಕಾಡು ಪ್ರಾರ್ಥಿಸಿ, ಅಭಿಯಾನದ ಜಿಲ್ಲಾ ಸಂಯೋಜಕರಾದ ಜಿಲ್ಲಾ ವಿಹಿಂಪ ಪ್ರಧಾನ ಕಾರ್ಯದರ್ಶಇ ಡಿ. ನರಸಿಂಹ ಸ್ವಾಗತಿಸಿದರು. ಭಜರಂಗದಳದ ವಿನಯ್ ಕಾರ್ಯಕ್ರಮ ನಿರೂಪಿಸಿ, ಅಭಿಯಾನದ ಮತ್ತೋರ್ವ ಸಂಯೋಜಕರಾದ ರೀನಾ ಪ್ರಕಾಶ್ ವಂದಿಸಿದರು.
ವಿಶೇಷ ಪೂಜೆ- ಪೇಜಾವರ ಶ್ರೀಗಳು ಆರಂಭದಲ್ಲಿ ಶ್ರೀ ಓಂಕಾರೇಶ್ವರ ಸನ್ನಿಧಿ ಮತ್ತು ಶ್ರೀಆಂಜನೇಯ ದೇಗುಲಗಳಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು. ಇದಕ್ಕೂ ಮೊದಲು ಆರ್‍ಎಸ್‍ಎಸ್ ಕಛೇರಿ ಮಧು ಕೃಪದಲ್ಲಿ ಸ್ವಾಮೀಜಿಗಳಿಗೆ ಪಾದ ಪೂಜೆ ಸಲ್ಲಿಸಿ ಮಂಗಳ ವಾದ್ಯಗಳೊಂದಿಗೆ ಅವರನ್ನು ದೇವಸ್ಥಾನಕ್ಕೆ ಕರೆತರಲಾಯಿತು.