ಕೋಟ: ಮನೆಯ ಅನ್ನ ಸಾಂಬಾರ್ ನಲ್ಲಿ ಗಾಜಿನ ಚೂರು: ಯುವಕನ ಕೃತ್ಯ

ಕೋಟ: ನೆರೆಮನೆಯವರ ಊಟದ ಅನ್ನ-ಸಂಬಾರಿಗೆ ಗಾಜಿನ ಚೂರು ಹಾಕುತ್ತಿದ್ದ ಯುವಕನೋರ್ವ ಸಾಕ್ಷಿ ಸಮೇತ ಸಿಕ್ಕಿ ಬಿದ್ದು ಪೊಲೀಸರ ಅತಿಥಿಯಾದ ಘಟನೆ ಕೋಟ ಪೊಲೀಸ್‌ ಠಾಣೆ ವ್ಯಾಪ್ತಿಯ ಕೋಟತಟ್ಟು ಪಡುಕರೆಯಲ್ಲಿ ನಡೆದಿದೆ.

ಇಲ್ಲಿನ ನಿವಾಸಿ ವಿಜೇಂದ್ರ ಪ್ರಕರಣದ ಆರೋಪಿಯಾಗಿದ್ದು, ಈತ ಎದುರು ಮನೆಯ ಗೀತಾ ಎನ್ನುವವರಿಗೆ ಸಂಬಂಧಿಯಾದ ಕಾರಣ ಆಗಾಗ್ಗೆ ಬಂದು ಹೋಗುತ್ತಿದ್ದ. ಕಳೆದ ತಿಂಗಳು ಗೀತಾ ಅವರು ಊಟ ಮಾಡುವಾಗ ಎರಡೆರಡು ಬಾರಿ ಅನ್ನ-ಸಾಂಬರಿನಲ್ಲಿ ಗಾಜಿನ ಚೂರುಗಳು ಕಂಡು ಬಂದವು. ಅದರಂತೆ ಅಕ್ಕಿ ಹಾಗೂ ಇತರ ಪದಾರ್ಥಗಳನ್ನು ಪರಿಶೀಲಿಸಿದಾಗ ಅದರಲ್ಲಿ ಯಾವುದೇ ಗಾಜಿನ ಚೂರು ಕಂಡು ಬಂದಿರಲಿಲ್ಲ. ಹಾಗಾದರೆ ಊಟದಲ್ಲಿ ಗಾಜಿನ ಚೂರು ಬಂದಿದ್ದಾದರೂ ಹೇಗೆ ಎಂದು ಆಲೋಚಿಸಸಿದಾಗ ಪಕ್ಕದ ಮನೆಯ ವಿಜೇಂದ್ರನ ಮೇಲೆ ಅನುಮಾನ ಬಂದಿದೆ.

ಆತ ಇವರ ಮನೆಗೆ ಬಂದಾಗಲೆಲ್ಲ ಓರ್ವನೇ ಅಡುಗೆ ಮನೆಗೆ ತೆರಳಿ ನೀರು ಕುಡಿಯುತ್ತಿದ್ದ ಹಾಗೂ ಈತ ಮನೆಗೆ ಬಂದಾಗಲೆಲ್ಲ ಗಾಜಿನ ಚೂರು ಕಂಡುಬರುತ್ತಿತ್ತು. ಹೀಗಾಗಿ ಸಾಕ್ಷಿ ಸಮೇತ ಪ್ರಕರಣವನ್ನು ಬೇಧಿಸಬೇಕು ಎಂದುಕೊಂಡ ಮನೆಯವರು ಎ. 17ರಂದು ವಿಜೇಂದ್ರ ಮನೆಗೆ ಬಂದ ಸಂದರ್ಭ ಅಡುಗೆ ಮನೆಯಲ್ಲಿ ಮೊಬೈಲ್‌ ಕೆಮರಾವನ್ನು ಆನ್‌ ಮಾಡಿ ಇಟ್ಟಿದ್ದರು. ಅದರಂತೆ ನೀರು ಕುಡಿಯುವ ನೆಪದಲ್ಲಿ ಸೀದಾ ಅಡುಗೆ ಮನೆಗೆ ಹೋದ ಆತ ಅನ್ನ ಸಾಂಬಾರಿಗೆ ಗಾಜಿನ ಚೂರುಗಳನ್ನು ಹಾಕಿದ್ದ. ಈ ದೃಶ್ಯ ಮೊಬೈಲ್‌ನಲ್ಲಿ ಸೆರೆಯಾಗಿತ್ತು.
ಆರೋಪಿಯನ್ನು ವಶಕ್ಕೆ ಪಡೆದ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ದುಷ್ಕೃತ್ಯಕ್ಕೆ ಕಾರಣ ಇನ್ನಷ್ಟೇ ತಿಳಿದು ಬರಬೇಕಿದೆ.

Latest Indian news

Popular Stories