ಬೆಂಗಳೂರು,ಡಿ.15(ಯುಎನ್‍ಐ):- ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಎಲ್ಲಾ ರಾಜಕೀಯ ಪಕ್ಷದ ಮುಖಂಡರು, ಸ್ಪರ್ಧಾಳುಗಳು ಮಾದರಿ ನೀತಿ ಸಂಹಿತೆ ಹಾಗೂ ಕಾನೂನು ಉಲ್ಲಂಘನೆಯಾಗದಂತೆ ಅಗತ್ಯ ಕ್ರಮವಹಿಸಬೇಕೆಂದು ರಾಜ್ಯ ಚುನಾವಣಾ ಆಯೋಗದ ಅಧೀನ ಕಾರ್ಯದರ್ಶಿ ಹೊನ್ನಾಂಬ ತಿಳಿಸಿದ್ದಾರೆ.
ಈ ಕುರಿತು ಹೇಳಿಕೆ ನೀಡಿರುವ ಗ್ರಾಮ ಪಂಚಾಯ್ತಿ ಚುನಾವಣೆಗಳು ಪಕ್ಷ ರಹಿತ ಚುನಾವಣೆಯಾಗಿದ್ದು, ರಾಜಕೀಯ ಪಕ್ಷಗಳು ಈ ಚುನಾವಣೆಯಲ್ಲಿ ಪ್ರಚಾರ ಕಾರ್ಯದಲ್ಲಿ ಭಾಗಿಯಾಗುವ, ಸಭೆ-ಸಮಾರಂಭಗಳನ್ನು ನಡೆಸುವ ರಾಜಕೀಯ ಮುಖಂಡರುಗಳ ಭಾವಚಿತ್ರಗಳನ್ನು ಕರಪತ್ರಗಳಲ್ಲಿ ಮುದ್ರಿಸಿ ಪಕ್ಷಗಳ ಬಾವುಟ ಮತ್ತು ಚಿಹ್ನೆಯನ್ನು ಬಳಸಿಕೊಂಡು ಪ್ರಚಾರ ಮಾಡದಿರುವಂತೆ ಎಚ್ಚರಿಕೆ ವಹಿಸಬೇಕೆಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಅವರು ಸೂಚಿಸಿದ್ದಾರೆ.
ರಾಜಕೀಯ ಪಕ್ಷಗಳು ಸಭೆ-ಸಮಾರಂಭಗಳನ್ನು ಏರ್ಪಡಿಸಿ ವೇದಿಕೆ ಮೇಲೆ ಪಕ್ಷದ ಬಾವುಟ, ಬ್ಯಾನರ್‍ಗಳನ್ನು ಬಳಸಲು ಅನುಮತಿ ಇರುವುದಿಲ್ಲ. ಸ್ಪರ್ಧಾಳುಗಳನ್ನು ತಮ್ಮ ಪಕ್ಷದ ಅಥವಾ ಬೆಂಬಲಿತ ಅಭ್ಯರ್ಥಿ ಎಂದು ಪರಿಚಯಿಸುವುದು ಹಾಗೂ ಅವರ ಪರವಾಗಿ ಮತಯಾಚನೆ ಮಾಡುವುದಕ್ಕೆ ಅನುಮತಿ ಇರುವುದಿಲ್ಲ.