ಪತ್ನಿ ಹಾಗೂ ಪತ್ನಿಯ ಪರಿಚಯಸ್ಥ ಸೇರಿಕೊಂಡು ಕುತ್ತಿಗೆ ಹಿಸುಕಿ ಪತಿಯ ಹತ್ಯೆ

ವಿಟ್ಲ: ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲ ಸಮೀಪ ಕೋಣೆಯಲ್ಲಿ ಮಲಗಿದಲ್ಲಿಯೇ ವ್ಯಕ್ತಿ ಮೃತಪಟ್ಟಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಆತನ ಪತ್ನಿ ಹಾಗೂ ಪತ್ನಿಯ ಪರಿಚಯಸ್ಥ ಸೇರಿಕೊಂಡು ಕುತ್ತಿಗೆ ಹಿಸುಕಿ ಕೊಲೆ ಮಾಡಿರುವುದು ಪೊಲೀಸ್ ತನಿಖೆಯಿಂದ ದೃಢಪಟ್ಟಿದೆ.ಅದರಂತೆ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡ ಘಟನೆ ನಡೆದಿದೆ.

ಸಾವನ್ನಪ್ಪಿದ ವ್ಯಕ್ತಿ ಇಡ್ಕಿದು ಕುಮೇರು ನಿವಾಸಿ ಅರವಿಂದ ಭಾಸ್ಕರ (39) ಎಂದು ತಿಳಿದು ಬಂದಿದೆ.

ಅರವಿಂದ ಅವರ ಪತ್ನಿ ಆಶಾ ಹಾಗೂ ಮನೆಯ ಸೆಂಟ್ರಿಂಗ್‌ ಕೆಲಸ ನಿರ್ವಹಿಸಿದ ಯೋಗೀಶ ಗೌಡ ಆರೋಪಿಗಳಾಗಿದ್ದಾರೆ.

ಅರವಿಂದ ಭಾಸ್ಕರ ಅವರು ಸುಮಾರು 2 ವರ್ಷಗಳ ಹಿಂದೆ ಹೊಸ ಮನೆಯನ್ನು ಕಟ್ಟಲು ಆರಂಭಿಸಿದ್ದು, ಅದರ ಸೆಂಟ್ರಿಂಗ್‌ ಕೆಲಸವನ್ನು ಯೋಗೀಶ ಗೌಡ ಎಂಬವರು ನಿರ್ವಹಿಸುತ್ತಿದ್ದು, ಆತ ಅರವಿಂದ ಭಾಸ್ಕರನ ಪತ್ನಿ ಆಶಾಳೊಂದಿಗೆ ತುಂಬಾ ಅನ್ಯೋನ್ಯವಾಗಿದ್ದ ಎನ್ನಲಾಗಿದೆ ‌

ಅರವಿಂದ ಭಾಸ್ಕರ ಅವರು ಅಡಿಕೆ ಮಾರಾಟ ಮಾಡಿ ಬಂದ ಹಣವನ್ನು ದುಂದುವೆಚ್ಚ ಮಾಡುತ್ತಿದ್ದ ಬಗ್ಗೆ ಆತನ ಪತ್ನಿ ಆಕ್ಷೇಪಿಸುತ್ತಿದ್ದುದಲ್ಲದೇ, ಯೋಗೀಶ ಆಶಾಳೊಂದಿಗೆ ಸೇರಿಕೊಂಡು ಅರವಿಂದ ಭಾಸ್ಕರನಿಗೆ ಹಲ್ಲೆ ನಡೆಸುತ್ತಿದ್ದರು. ಇದರಿಂದ ಹೆದರಿ ರಾತ್ರಿ ವೇಳೆಯಲ್ಲಿ ಮನೆಯ ಕೋಣೆಯ ಬಾಗಿಲಿನ ಚಿಲಕವನ್ನು ಹಾಕಿ ಮಲಗುತ್ತಿರುವ ಬಗ್ಗೆ ಸುಮಾರು 1 ತಿಂಗಳ ಹಿಂದೆ ತಿಳಿಸಿದ್ದರು.

ವಿಟ್ಲ ಕಸಬಾ ಗ್ರಾಮದ ಮೇಗಿನಪೇಟೆ ನಿವಾಸಿ ರಘುನಾಥ ಎಂಬವರು ನೀಡಿದ ದೂರಿನ ವಿವರ ಇಂತಿದೆ: ಫೆ. 26ರಂದು ಬೆಳಿಗ್ಗೆ 8 ಗಂಟೆ ಸುಮಾರಿಗೆ ತಂದೆಯವರಿಗೆ ಕರೆ ಮಾಡಿದ ಆಶಾ, ಪತಿ ನಿನ್ನೆ ರಾತ್ರಿ 10 ಗಂಟೆಗೆ ಕೋಣೆಯಲ್ಲಿ ಮಲಗಿದ್ದು, ಬೆಳಗ್ಗಿನ ಜಾವ 7.30 ಸುಮಾರಿಗೆ ನೋಡುವಾಗ ಪತಿ ಏಳುತ್ತಿಲ್ಲ, ಮನೆಗೆ ಬನ್ನಿ ಎಂದು ತಿಳಿಸಿದ್ದಾಳೆ. ಬಳಿಕ ವಿಟ್ಲ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಬಂದ ವಿಚಾರ ತಿಳಿದು ಅಲ್ಲಿಗೆ ಹೋದಾಗ ವೈದ್ಯರು ಅರವಿಂದ ಭಾಸ್ಕರನನ್ನು ಪರೀಕ್ಷಿಸಿ ಮೃತಪಟ್ಟಿರುವುದಾಗಿ ದೃಢಪಡಿಸಿದ್ದಾರೆ. ಮೃತದೇಹದ ಸ್ಥಿತಿಗತಿಯನ್ನು ಪರಿಶೀಲಿಸಿದಾಗ ಕುತ್ತಿಗೆಯನ್ನು ಅಮುಕಿ ಹಿಡಿದು ಉಸಿರುಗಟ್ಟಿಸಿ ಕೊಲೆ ಮಾಡಿರುವ ಸಂಶಯ ವ್ಯಕ್ತವಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ವಿಟ್ಲ ಪೊಲೀಸರು ಈ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Latest Indian news

Popular Stories