ಬಳ್ಳಾರಿ: ಉತ್ತಂಗಿ ಗ್ರಾಮದಲ್ಲಿ ಗೋವಿನಜೋಳ ಬೆಳೆಯ ಕ್ಷೇತ್ರೋತ್ಸವ

ಬಳ್ಳಾರಿ,ನ.17: ಹೂವಿನಹಡಗಲಿ ತಾಲೂಕಿನ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ವತಿಯಿಂದ ತಾಲೂಕಿನ ಉತ್ತಂಗಿ ಗ್ರಾಮದ ಪ್ರಗತಿಪರ ರೈತರಾದ ಮುದೇಗೌಡ್ರ ಬಸವರಾಜಪ್ಪ ಅವರ ಜಮೀನಿನಲ್ಲಿ ಇತ್ತೀಚೆಗೆ “ಗೋವಿನಜೋಳ ಬೆಳೆ ಕ್ಷೇತ್ರೋತ್ಸವ” ವನ್ನು ಆಯೋಜಿಸಲಾಗಿತ್ತು.
ಹೂವಿನಹಡಗಲಿ ತಾಲೂಕಿನ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ವಿಸ್ತರಣಾಧಿಕಾರಿ ಮುಂದಾಳುಗಳಾದ ಡಾ. ಸಿ.ಎಮ್. ಕಾಲಿಬಾವಿ ಅವರು ಮಾತನಾಡಿ, ರಾಯಚೂರು ಕೃಷಿ ವಿಶ್ವವಿದ್ಯಾಲಯದಲ್ಲಿ ನೂತನವಾಗಿ ಬಿಡುಗಡೆಗೊಂಡಂತ ಹೈಬ್ರೀಡ್ ಗೋವಿನಜೋಳ (ಆರ್.ಸಿ.ಆರ್. ಎಮ್.ಹೆಚ್-2) ವು ಬರಸಹಿಷ್ಣುತೆಯನ್ನು ಹಾಗೂ ರೋಗ ನಿರೋಧಕ ಶಕ್ತಿಯನ್ನು ಹೊಂದಿದ್ದು, ಇಳುವರಿ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ರೈತರು ಈ ಹೈಬ್ರೀಡ್ ಗೋವಿನಜೋಳವನ್ನು ಮುಂದಿನ ದಿನಗಳಲ್ಲಿ ಹೆಚ್ಚಿನ ಪ್ರದೇಶದಲ್ಲಿ ಬೆಳೆದು ಅಧಿಕ ಇಳುವರಿಯನ್ನು ಪಡೆಯುವುದರ ಮೂಲಕ ಆರ್ಥಿಕವಾಗಿ ಸದೃಢರಾಗಬೇಕ ಎಂದರು.
ಗೋವಿನಜೋಳ ಸುಧಾರಿತ ಬೇಸಾಯ ಕ್ರಮಗಳಲ್ಲಿ ಗೋವಿನಜೋಳ : ತೊಗರಿ (4:2 / 6:2) ಸಾಲುಗಳ ಅಂತರ ಬೆಳೆಯು ರೈತರ ಆಧಾಯ ವೃದ್ಧಿಸುವ ಜೊತೆಗೆ ಮಣ್ಣಿನ ಫಲವತ್ತತೆ ಸುಸ್ಥಿರವಾಗುತ್ತದೆ. ಗೋವಿನಜೋಳ ಕಟಾವಿನ ನಂತರ ತೊಗರಿ ಬೆಳೆ ಅಂತರ ಹೆಚ್ಚಾಗಿದ್ದಲ್ಲಿ, ಕಪ್ಪು ಜಮೀನಿನಲ್ಲಿ ಕಡಲೆ, ಕುಸುಬೆ, ಅವೀಜ (ಕೊತ್ತಂಬರಿ), ಅಗಸೆ ಬೆಳೆಯಿಂದ ಹೆಚ್ಚಿನ ಲಾಭ ಪಡೆಯಬಹುದಾಗಿದೆ ಎಂದರು.
ಉತ್ತಂಗಿಯ ರೈತರಾದ ಎಸ್.ಎಮ್. ಕೃಪಾಮೂರ್ತಿ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಈ ಭಾರಿ ಮುಂಗಾರು ಮಳೆಯು ಉತ್ತಮವಾಗಿದ್ದು, ಗೋವಿನಜೋಳದಲ್ಲಿ ಹೆಚ್ಚಿನ ಇಳುವರಿ ಬರಬಹುದೆಂಬ ನಿರೀಕ್ಷೆ ಇದೆ ಎಂದು ಸಂತೋಷ ವ್ಯಕ್ತಪಡಿಸಿದರು.
ಇನ್ನೋರ್ವ ರೈತರಾದ ಬಿ.ಚಂದ್ರಪ್ಪ, ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಗೋವಿನಜೋಳವು ಈ ವರ್ಷ ಅತೀ ಹೆಚ್ಚಿನ ಇಳುವರಿ ಬರಲು ಸಕಾಲಕ್ಕೆ ಉತ್ತಮ ಮಳೆ ಮತ್ತು ವಾತಾವರಣವೇ ಕಾರಣವಾಗಿದೆ. ಸರ್ಕಾರವು ಆದಷ್ಟು ಬೇಗನೆ ಬೆಂಬಲ ಬೆಲೆಯನ್ನು ನಿಗದಿಗೊಳಿಸಿ ರೈತರಿಗೆ ಅನುಕೂಲ ಮಾಡಿಕೊಡಬೇಕೆಂದರು ಮನವಿ ಮಾಡಿದರು.
ಉತ್ತಂಗಿ ಗ್ರಾಮದ ಪ್ರಗತಿಪರ ರೈತರಾದ ಜಿ. ಸೋಮೆಶೇಖರ ಅವರು ಮಾತನಾಡಿ, ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ವಿಜ್ಞಾನಿಗಳು ನಮ್ಮ ಗ್ರಾಮದ ರೈತರಿಗೆ ನೂತನ ತಾಂತ್ರಿಕತೆಗಳ ಮಾಹಿತಿಯನ್ನು ಹಾಗೂ ನೂತನವಾಗಿ ಬಿಡುಗಡೆಗೊಂಡಂತ ತಳಿಗಳನ್ನು ಪ್ರಾತ್ಯಕ್ಷಿಕೆಯ ಮೂಲಕ ರೈತರಿಗೆ ಪರಿಚಯಿಸುತ್ತಿದ್ದು, ರೈತರು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ರೈತರಾದ ಕೆ.ಎ.ನಾಗರಾಜ, ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ವಿಜ್ಞಾನಿಗಳಾದ ಹನುಮಂತಪ್ಪ ಶ್ರೀಹರಿ, ಡಾ. ಮಂಜುನಾಥ ಭಾನುವಳ್ಳಿ ಅವರು ಮಾತನಾಡಿದರು.
ಈ ಕ್ಷೇತ್ರೋತ್ಸವದಲ್ಲಿ ಸುನೀತಾ ಎನ್.ಹೆಚ್., ಉತ್ತಂಗಿ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಹೆಚ್ಚಿನ ರೈತರು ಭಾಗವಹಿಸಿ ಕೃಷಿಯಲ್ಲಿ ಬರುವ ಸಮಸ್ಯೆಗಳ ಕುರಿತು ಚರ್ಚಿಸಿ ಸಲಹೆಯನ್ನು ಪಡೆದುಕೊಂಡರು.

Latest Indian news

Popular Stories