ಬಳ್ಳಾರಿ: ಕೆಕೆಆರ್ ಟಿಸಿ ಭದ್ರತಾ ಇನ್ಸ್ ಪೆಕ್ಟರ್ ತಲೆಗೆ ಮಾರಕಾಸ್ತ್ರಗಳಿಂದ ಹೊಡೆದು ಹತ್ಯೆ!

ಬಳ್ಳಾರಿ: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ಬಳ್ಳಾರಿ ವಿಭಾಗದ ವಿಭಾಗೀಯ ಭದ್ರತಾ ಇನ್ಸ್ ಪೆಕ್ಟರ್ ಹುಸೇನಪ್ಪ ಅವರನ್ನು ಭಾನುವಾರ ರಾತ್ರಿ ದುಷ್ಕರ್ಮಿಗಳು ಭೀಕರವಾಗಿ ಹತ್ಯೆ ಮಾಡಿದ್ದಾರೆ.

ಹುಸೇನಪ್ಪ ರಾತ್ರಿ 8-30ರ ಸುಮಾರಿಗೆ ಬೀದರ್ ಗೆ ಹೊರಡಲು ಬ್ಯಾಗ್ ತೆಗೆದುಕೊಂಡು ಸ್ಕೂಟಿಯಲ್ಲಿ ಮನೆಯಿಂದ ಹೊರಟ್ಟಿದ್ದಾಗ ಬೈಕ್ ನಲ್ಲಿ ಬಂದ ಅಪರಿಚಿತರು ಅವರ ತಲೆಗೆ ಮಾರಕಾಸ್ತ್ರಗಳಿಂದ ಹೊಡೆದು ಕೊಲೆ ಮಾಡಿದ್ದಾರೆ ಎಂದು ಕೆಕೆಆರ್ ಟಿಸಿ ಮೂಲಗಳು ತಿಳಿಸಿವೆ.

ಬೀದರ್ ನಲ್ಲಿ ನಡೆಯುತ್ತಿರುವ ಚಾಲಕರ ನೇಮಕಾತಿ ಪರೀಕ್ಷೆಗೆ ಅವರನ್ನು ನಿಯೋಜಿಸಲಾಗಿತ್ತು. ಮನೆಯಿಂದ ಕೂಗಳತೆ ದೂರದಲ್ಲಿಯೇ ಹತ್ಯೆ ನಡೆದಿದೆ.  ಹುಸೇನಪ್ಪ ಕಿರುಚಾಟಕ್ಕೆ ಮನೆಯವರು ಹೊರಗೆ ಬಂದಿದ್ದಾರೆ. ಆ ವೇಳೆಗೆ ಆರೋಪಿಗಳು ಬೈಕ್ ನಲ್ಲಿ ಪರಾರಿಯಾಗಿದ್ದಾರೆ.

ಹುಸೇನಪ್ಪ ಇಬ್ಬರು ಗಂಡು ಮಕ್ಕಳು, ಓರ್ವ ಪುತ್ರಿಯನ್ನು ಅಗಲಿದ್ದಾರೆ. ಕೊಲೆಗೆ ಕಾರಣ ತಿಳಿದುಬಂದಿಲ್ಲ. ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಲಾಗಿದೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

Latest Indian news

Popular Stories