ಮಡಿಕೇರಿ ಮೇ.09(ಕರ್ನಾಟಕ ವಾರ್ತೆ):-ವಿಧಾನಸಭಾ ಚುನಾವಣೆ ಹಿನ್ನೆಲೆ ಮೇ, 10 ರಂದು ಮತದಾನ ನಡೆಯಲಿದೆ. ಈ ಸಂದರ್ಭದಲ್ಲಿ ಮತದಾನದ ಮಹತ್ವವನ್ನು ಸಾರುವ ಉದ್ದೇಶದಿಂದ ಸಾಂಕೇತಿಕವಾಗಿ ಕೊಡಗು ಜಿಲ್ಲಾಡಳಿತ, ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ಮಡಿಕೇರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮತಗಟ್ಟೆ ಸಂಖ್ಯೆ 210 ಹಾಗೂ 211 ನಗರಸಭೆಯ ಹಿರಿಯ ಪ್ರಾಥಮಿಕ ಶಾಲೆ, ಹಿಲ್ ರಸ್ತೆ, ಮಡಿಕೇರಿ ಇಲ್ಲಿನ ಮತಗಟ್ಟೆಯನ್ನು ಮಾದರಿ ಮತಗಟ್ಟೆಯಾಗಿ ವಿನ್ಯಾಸಗೊಳಿಸಲಾಗಿದೆ.
ಮಾದರಿ ಮತಗಟ್ಟೆಯಲ್ಲಿ ಲಭ್ಯವಿರುವ ಸೌಲಭ್ಯಗಳು: ಶಾಲಾ ಕಟ್ಟಡವನ್ನು ಕೊಡಗಿನ ಕಾಫಿ ಸಂಸ್ಕøತಿಯನ್ನು ಸಾರುವ ಚಿತ್ರಕಲೆ ಮೂಲಕ ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ. ವಿಶೇಷಚೇತನರಿಗಾಗಿ ರ್ಯಾಂಪ್, ರೈಲಿಂಗ್ಸ್, ವೀಲ್‍ಚೇರ್ ಹಾಗೂ ವಾಹನ ಸೌಲಭ್ಯ ಕಲ್ಪಿಸಲಾಗಿದೆ. ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ.
ರಿಯಾಯಿತಿ ದರದಲ್ಲಿ ಮತದಾರರಿಗೆ ಕುಡಿಯಲು ಕಾಫಿ ವ್ಯವಸ್ಥೆ ಮಾಡಲಾಗಿದೆ(ರೂ.10 ಕ್ಕೆ ಫಿಲ್ಟರ್ ಕಾಫಿಯನ್ನು ನಿರೀಕ್ಷಣಾ ಕೊಠಡಿಯಲ್ಲಿ ಕುಳಿತು ಸವಿಯಬಹುದಾಗಿದೆ). ಪುರುಷರು ಹಾಗೂ ಮಹಿಳೆಯರಿಗೆ ಪ್ರತ್ಯೇಕ ಶೌಚಾಲಯ ಕಲ್ಪಿಸಲಾಗಿದೆ.
ಪೀಠೋಪಕರಣಗಳು, ಫ್ಯಾನ್, ಬೆಳಕಿನ ವ್ಯವಸ್ಥೆಗಳನ್ನೊಳಗೊಂಡಂತೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲಾಗಿದೆ.
ವೈಟಿಂಗ್ ರೂಮ್ ಸೌಲಭ್ಯದೊಂದಿಗೆ ವ್ಯವಸ್ಥಿತ ರೀತಿಯಲ್ಲಿ ಮತದಾನ ಮಾಡಲು ಟೋಕನ್ ಸೌಲಭ್ಯ ಕಲ್ಪಿಸಲಾಗಿದೆ. ವಿಶೇಷಚೇತನರು ಹಾಗೂ ಹಿರಿಯ ನಾಗರಿಕ ಮತದಾರರ ಸಹಾಯಕ್ಕಾಗಿ ಸ್ವಯಂ ಸೇವಕರ ಸೇವೆಯನ್ನು ಒದಗಿಸಲಾಗಿದೆ ಎಂದು ಕೊಡಗು ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷರು ಹಾಗೂ ಜಿ.ಪಂ. ಸಿಇಒ ಡಾ.ಎಸ್.ಆಕಾಶ್ ಅವರು ತಿಳಿಸಿದ್ದಾರೆ.