ಮುಂದೂಡಲ್ಪಟ್ಟಿದ್ದ ಪತ್ರಕರ್ತರ ರಾಜ್ಯ ಸಮ್ಮೇಳನದ ಉದ್ಘಾಟನೆಗೆ ಬರಲು ಸಮ್ಮತಿಸಿದ ಸಿಎಂ ಬೊಮ್ಮಾಯಿ

ಬೆಂಗಳೂರು: ಐತಿಹಾಸಿಕ ವಿಜಯಪುರ ನಗರದಲ್ಲಿ ಜ. 9 ಮತ್ತು 10 ರಂದು ನಡೆಯಬೇಕಿದ್ದ 37ನೇ ರಾಜ್ಯ ಮಟ್ಟದ ಪತ್ರಕರ್ತರ ಸಮ್ಮೇಳನವನ್ನು ಫೆ. 4 ಮತ್ತು 5 ರಂದು ನಡೆಸಲು ಮೌಖಿಕವಾಗಿ ಸಮ್ಮತಿಸಿದ್ದು, ಸಮ್ಮೇಳನವನ್ನು ಚೆನ್ನಾಗಿ ಮಾಡೋಣ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ (KUWJ) ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ನೇತೃತ್ವದಲ್ಲಿ ಸಮ್ಮೇಳನದ ಆತಿಥ್ಯ ವಹಿಸಿಕೊಂಡಿರುವ ವಿಜಯಪುರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಸಂಗಮೇಶ ಚೂರಿ ಹಾಗೂ ಪದಾಧಿಕಾರಿಗಳು ವಿಧಾನಸೌಧದಲ್ಲಿ ಸಮ್ಮೇಳನಕ್ಕೆ ಅಧಿಕೃತ ಆಮಂತ್ರಣ ನೀಡಿದ ವೇಳೆ ಮುಖ್ಯಮಂತ್ರಿಗಳು ಈ ಭರವಸೆ ನೀಡಿದರು.

ಶ್ರೀ ಸಿದ್ದೇಶ್ವರ ಸ್ವಾಮೀಜಿ ಅವರು ನಮ್ಮೊಡನೆ ಇಲ್ಲದಿರುವ ಬಗ್ಗೆ ಬೇಸರ ವ್ಯಕ್ತಪಡಿಸಿದ ಮುಖ್ಯಮಂತ್ರಿ, ಸಮ್ಮೇಳನವನ್ನು ಅಚ್ಚುಕಟ್ಟಾಗಿ ಅರ್ಥಪೂರ್ಣವಾಗಿ ನಡೆಯುವಂತಾಗಲಿ ಎಂದು ಶುಭ ಹಾರೈಸಿದರು.

ಜ. 9 ಮತ್ತು 10 ರಂದು ನಡೆಯಬೇಕಿದ್ದ ಈ ಸಮ್ಮೇಳನವನ್ನು ಜ್ಞಾನಯೋಗಾಶ್ರಮದ ಶ್ರೀ ಸಿದ್ದೇಶ್ವರ ಸ್ವಾಮೀಜಿ ಲಿಂಗೈಕ್ಯರಾದ ಹಿನ್ನೆಲೆಯಲ್ಲಿ ಮುಂದೂಡಿದ್ದನ್ನು ಸ್ವಾಗತಿಸಿದ ಸಿಎಂ ಬೊಮ್ಮಾಯಿ ಅವರು, ಬರುವ ಫೆ. 4 ಮತ್ತು 5 ರಂದು ಸಮ್ಮೇಳನ ದಿನಾಂಕ ನಿಗದಿಪಡಿಸಿ. ಸಮ್ಮೇಳನ ಉದ್ಘಾಟನೆಗೆ ಆಗಮಿಸುವುದಾಗಿ ಭರವಸೆ ನೀಡಿದರು.

ಸಮ್ಮೇಳನಗಳನ್ನು ಯಶಸ್ವಿಗೊಳಿಸುವುದೆಂದರೆ ವಿಜಯಪುರ ಜನತೆಗೆ ಎಲ್ಲಿಲ್ಲದ ಹಿಗ್ಗು. ಹಾಗಾಗಿ ವಿಜಯಪುರದಲ್ಲಿ ನಡೆಯಲಿರುವ ಸಮ್ಮೇಳನ ಯಶಸ್ಸು ಕಾಣಲು ಸಾಧ್ಯವಾಗುತ್ತದೆ ಎಂದರು.

ಈ ಸಂದರ್ಭದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ವಿಜಯಪುರ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮೋಹನ ಕುಲಕರ್ಣಿ, ರಾಜ್ಯ ಸಮಿತಿ ಸದಸ್ಯ ಡಿ.ಬಿ. ವಡವಡಗಿ, ಸಹ ಖಜಾಂಚಿ ದೀಪಕ ಶಿಂತ್ರೆ ಹಾಗೂ ವಿಜಯಪುರದ ಹಿರಿಯ ಪತ್ರಕರ್ತ ಅಲ್ಲಮಪ್ರಭು ಮಲ್ಲಿಕಾರ್ಜುನಮಠ ಮತ್ತಿತರರಿದ್ದರು.

Latest Indian news

Popular Stories