ಬೆಂಗಳೂರು, ಡಿ.31 (ಯುಎನ್‍ಐ):- ಪಾದರಾಯನಪುರದ ಅಡ್ಡ ರಸ್ತೆಗಳಿಗೆ ಮುಸ್ಲಿಮರ ಹೆಸರುಗಳನ್ನಿಡುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ -ಬಿಬಿಎಂಪಿ ತೀರ್ಮಾನಕ್ಕೆ ಸಂಸದ ಹಾಗೂ ಕೇಂದ್ರದ ಮಾಜಿ ಸಚಿವ ಅನಂತಕುಮಾರ ಹೆಗಡೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಪಾದರಾಯನಪುರದ ಅಡ್ಡ ರಸ್ತೆಗಳಿಗೆ ಸಮಾಜ ಸೇವಕರ ಹೆಸರಿಡಬೇಕೆನ್ನುವ ನಿರ್ಣಯ ಕೈಗೊಳ್ಳಲಾಗಿತ್ತು. ಆದರೆ, ಈಗ ಸಮಾಜ ಸೇವಕರ ಹೆಸರಿನಲ್ಲಿ ಮುಸ್ಲಿಮರ ಹೆಸರುಗಳನ್ನು ಮಾತ್ರ ಶಿಫಾರಸ್ಸು ಮಾಡಲಾಗಿದೆ. ಒಂದು ಕೋಮಿನ ತುಷ್ಟೀಕರಣಕ್ಕೆ ಮುಂದಾಗಲಾಗಿದೆ ಎಂದು ಬಿಬಿಎಂಪಿ ಆಯುಕ್ತರಿಗೆ ಬರೆದಿರುವ ಪತ್ರದಲ್ಲಿ ಅನಂತಕುಮಾರ ಹೆಗಡೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಸ್ವಾತಂತ್ರ್ಯ ಹೋರಾಟಗಾರರು, ದೇಶಕ್ಕಾಗಿ ಹೋರಾಡಿದ ವೀರ ಸೈನಿಕರು, ರಾಷ್ಟ್ರದ ಮಹಾನ್ ವ್ಯಕ್ತಿಗಳ ಹೆಸರನ್ನು ಇಡಬಹುದು. ಆದರೆ, ಮುಸ್ಲಿಮರ ಹೆಸರನ್ನು ಇಡುವುದಕ್ಕೆ ನನ್ನ ತೀವ್ರ ವಿರೋಧವಿದೆ ಎಂದು ಅನಂತಕುಮಾರ ಹೆಗಡೆ ಹೇಳಿದ್ದಾರೆ.