ಶಾಲಾ ಶಿಕ್ಷಕರಿಗೂ ಡ್ರೆಸ್ ಕೋಡ್: ಚರ್ಚೆ ಬಳಿಕ ನಿರ್ಧಾರ- ಮೇಲ್ಮನೆಯಲ್ಲಿ ಮಧು ಬಂಗಾರಪ್ಪ

ಬೆಂಗಳೂರು: ಶಾಲಾ ಶಿಕ್ಷಕರಿಗೆ ಡ್ರೆಸ್ ಕೋಡ್ ಜಾರಿಗೆ ತರುವ ಕುರಿತು ಚರ್ಚೆ ನಡೆಸಿದ ನಂತರ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಸೋಮವಾರ ವಿಧಾನಪರಿಷತ್ತಿನಲ್ಲಿ ತಿಳಿಸಿದರು.

ಪ್ರಶ್ನೋತರ ವೇಳೆಯಲ್ಲಿ ಕಾಂಗ್ರೆಸ್ ನ ಮಂಜುನಾಥ ಭಂಡಾರಿ ಪ್ರಶ್ನೆಗೆ ಉತ್ತರಿಸಿದ ಅವರು, ಶಾಲಾ ಶಿಕ್ಷಕರ ಡ್ರೆಸ್ ಕೋಡ್ ಗೆ ನಿಯಮಗಳಿಲ್ಲ. ವಸ್ತ್ರ ಸಂಹಿತೆ ಒಳಿತು ಎನ್ನುವುದಾದರೆ ಎಲ್ಲರ ಜೊತೆ ಚರ್ಚಿಸಿದ ನಂತರವೇ ನಿರ್ಧಾರವೇ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದರು.

ನ್ಯಾಯಾಲಯದ ಸ್ಟೇ ಇರುವ ಕಾರಣ 13,500 ಶಿಕ್ಷಕರ ನೇಮಕಾತಿಗೆ ಆದೇಶ ನೀಡಲು ಸಾಧ್ಯವಾಗಿಲ್ಲ. ಈ ಸಂಬಂಧ ಕಾನೂನು ತಜ್ಞರ ಜೊತೆಗೆ ಚರ್ಚಿಸಲಾಗಿದೆ. 900ಕ್ಕೂ ಹೆಚ್ಚು ವಿಶೇಷ ಶಿಕ್ಷಕರ ನೇಮಕಾತಿಗೂ ಕ್ರಮ ಕೈಗೊಳ್ಳಲಾಗುವುದು, ರಾಜ್ಯದ 306 ಸರ್ಕಾರಿ ಪ್ರೌಢಶಾಲೆಗಳನ್ನು ಮೇಲ್ದರ್ಜೇಗೇರಿಸಿ, ಪದವಿ ಪೂರ್ವ ಶಿಕ್ಷಣಕ್ಕೆ ಅವಕಾಶ ನೀಡಲಾಗುವುದು ಎಂದು ಅವರು ತಿಳಿಸಿದರು.

ಅನುದಾನಿತ ಪ್ರೌಢಶಾಲೆಗಳಲ್ಲಿ ಖಾಲಿ ಇರುವ 3,794 ಹುದ್ದೆಗಳ ಭರ್ತಿಗೆ ಅನುಮತಿ ನೀಡಲಾಗಿದೆ. ಪ್ರಸ್ತುತ 4,783 ಹುದ್ದೆಗಳು ಖಾಲಿ ಇರುವುದಾಗಿ ಸಚಿವರು ಸದನಕ್ಕೆ ಮಾಹಿತಿ ನೀಡಿದರು.

Latest Indian news

Popular Stories