ನವದೆಹಲಿ: ದೆಹಲಿಯಲ್ಲಿ ಲಿವ್ ಇನ್ ಪಾರ್ಟ್ನರ್ ಶ್ರದ್ದಾ ವಾಕರ್ ಹತ್ಯೆಗೈದು ಆಕೆಯ ದೇಹವನ್ನು 35 ತುಂಡುಗಳಾಗಿ ಕತ್ತರಿಸಿ ಹಾಕಿದ ಭೀಕರ ಘಟನೆಯ ಆರೋಪಿ ಆಫ್ತಾಬ್ ಅಮೀನ್ ಪೂನವಾಲಾ ವಿರುದ್ಧ ದೆಹಲಿ ಪೊಲೀಸರು 3,000 ಪುಟಗಳ ಚಾರ್ಜ್‌ಶೀಟ್ ನ್ನು ಸಿದ್ಧಪಡಿಸಿದ್ದಾರೆ.
ಮೂಲಗಳ ಪ್ರಕಾರ, 100 ಸಾಕ್ಷಿಗಳನ್ನು ಹೊರತುಪಡಿಸಿ, 3,000ಕ್ಕೂ ಹೆಚ್ಚು ಪುಟಗಳ ಕರಡು ಚಾರ್ಜ್ ಶೀಟ್‌ಗೆ ಫೋರೆನ್ಸಿಕ್ ಮತ್ತು ಎಲೆಕ್ಟ್ರಾನಿಕ್ ಸಾಕ್ಷ್ಯಗಳನ್ನು ಆಧಾರವಾಗಿ ಮಾಡಲಾಗಿದೆ. ಜನವರಿ ಅಂತ್ಯದೊಳಗೆ ದೆಹಲಿ ಪೊಲೀಸರು ಆರೋಪಪಟ್ಟಿ ಸಲ್ಲಿಸುವ ಸಾಧ್ಯತೆ ಇದೆ.
ಮೂಲಗಳ ಪ್ರಕಾರ, ದೆಹಲಿ ಪೊಲೀಸರು ಸಿದ್ಧಪಡಿಸಿರುವ ಚಾರ್ಜ್ ಶೀಟ್ ಕರಡನ್ನು ಕಾನೂನು ತಜ್ಞರು ಪರಿಶೀಲಿಸುತ್ತಿದ್ದಾರೆ.
ಕಳೆದ ವರ್ಷ ಮೇ 18 ರಂದು ಆರೋಪಿ ಅಫ್ತಾಬ್ ಪೂನವಾಲಾ ದೆಹಲಿಯ ಛತ್ತರ್‌ಪುರ ಪ್ರದೇಶದಲ್ಲಿ ಶ್ರದ್ಧಾ ವಾಕರ್‌ಳನ್ನು ಕತ್ತು ಹಿಸುಕಿ ಕೊಂದು ಹಾಕಿದ್ದನು. ನಂತರ ದೇಹವನ್ನು ಹಲವು ತುಂಡುಗಳಾಗಿ ಮಾಡಿ ಕೆಲವು ದಿನ ಫ್ರಿಡ್ಜ್ ನೊಳಗೆ ಇಟ್ಟಿದ್ದನು.
ಛತ್ತರ್‌ಪುರದ ಅರಣ್ಯದಿಂದ ಪತ್ತೆಯಾಗಿರುವ ಮೂಳೆಗಳು ಮತ್ತು ಅವುಗಳ ಡಿಎನ್‌ಎ ವರದಿಯು ಶ್ರದ್ಧಾ ಅವರ ಮೂಳೆಗಳು ಎಂದು ಪೊಲೀಸರು ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಿದ್ದಾರೆ. ಅಫ್ತಾಬ್ ಪೂನಾವಾಲಾ ತಪ್ಪೊಪ್ಪಿಗೆ ಮತ್ತು ನಾರ್ಕೋ ಪರೀಕ್ಷೆಯ ವರದಿಯನ್ನು ಸಹ ಪೊಲೀಸರು ಚಾರ್ಜ್ ಶೀಟ್ ನಲ್ಲಿ ಸೇರಿಸಿದ್ದಾರೆ.
ಈ ಎರಡೂ ವರದಿಗಳು ನ್ಯಾಯಾಲಯದಲ್ಲಿ ಹೆಚ್ಚಿನ ಪ್ರಾಮುಖ್ಯತೆಯನ್ನು ಹೊಂದಿಲ್ಲ ಎಂದು ದೆಹಲಿ ಪೊಲೀಸ್ ಮೂಲಗಳು ತಿಳಿಸಿವೆ. ಜನವರಿ 4 ರಂದು, ದಕ್ಷಿಣ ದೆಹಲಿಯ ಮೆಹ್ರೌಲಿ ಅರಣ್ಯ ಪ್ರದೇಶದಿಂದ ಪತ್ತೆಯಾದ ಕೂದಲು ಮತ್ತು ಮೂಳೆಗಳ ಮಾದರಿಗಳು ಶ್ರದ್ಧಾ ಅವರ ಮಾದರಿಗಳೊಂದಿಗೆ ಹೊಂದಿಕೆಯಾಗುತ್ತವೆ ಎಂದು ಪೊಲೀಸರು ತಿಳಿಸಿದ್ದಾರೆ.