ಸಂತೆಕಟ್ಟೆ: ಜಂಕ್ಷನ್’ನ ಒವರ್’ಪಾಸ್ ಕಾಮಗಾರಿ ಇಂದಿನಿಂದ ಆರಂಭಗೊಂಡಿದೆ. ಇದೀಗ ಕಾಮಗಾರಿಯನ್ನು ಒಂದು ವರ್ಷದೊಳಗೆ ಪೂರ್ತಿಕರಿಸಲು ಸೂಚಿಸಲಾಗಿದೆ.
ಹಲವಾರು ವರ್ಷಗಳಿಂದ ಸಂಚಾರ ದಟ್ಟಣೆ, ಅಪಘಾತಗಳ ಕೇಂದ್ರವಾಗಿದ್ದ ಈ ಜಂಕ್ಷನ್‌ನಲ್ಲಿ ಓವರ್‌ಪಾಸ್ ನಿರ್ಮಿಸುವಂತೆ ಸಾರ್ವಜನಿಕ ವಲಯದಲ್ಲಿ ಬೇಡಿಕೆ ಹೆಚ್ಚಿತ್ತು. ಅನಂತರ ಇಲ್ಲಿ ಓವರ್‌ಪಾಸ್ ನಿರ್ಮಾಣ ಕುರಿತ ಪ್ರಸ್ತಾವನೆಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ(ಎನ್‌ಎಚ್‌ಎಐ) 27.4 ಕೋ. ರೂ. ವೆಚ್ಚದ ಅನುಮೋದನೆ ನೀಡಿದ್ದು, ಇದೀಗ ಟೆಂಡರ್ ಪಕ್ರಿಯೆ ಪೂರ್ಣಗೊಂಡು ಕಾಮಗಾರಿಗೆ ತಯಾರಿ ನಡೆಸಲಾಗುತ್ತಿದೆ. ಟ್ರಿನಿಟಿ ಕನ್‌ಸ್ಟ್ರಕ್ಷನ್ ಸಂಸ್ಥೆಯು ಓವರ್‌ಪಾಸ್ ನಿರ್ಮಾಣ ಗುತ್ತಿಗೆ ಪಡೆದಿದೆ.
ಸರ್ವಿಸ್ ರಸ್ತೆ ಮೂಲಕ ವಾಹನಗಳ ಓಡಾಟಕ್ಕೆ ಅವಕಾಶ ಮಾಡಿಕೊಡಲಾಗಿದ್ದು ಇದೀಗ ಸರ್ವೀಸ್ ರಸ್ತೆ ಅಗಲೀಕರಣಗೊಳಿಸಿ ಸುಗಮ ಸಂಚಾರಕ್ಕೆ ವ್ಯವಸ್ಥೆಮಾಡಲಾಗುತ್ತಿದೆ.
ಮೊದಲ ಹಂತದಲ್ಲಿ ಬ್ರಹ್ಮಾವರದಿಂದ ಉಡುಪಿ ಕಡೆಗೆ ಕಾಮಗಾರಿ ಆರಂಭವಾಗಲಿದ್ದು ಬದಲಿ ಮಾರ್ಗ ಬಳಸಲು ಈಗಾಗಲೇ ಶಾಸಕರಾದ ರಘುಪತಿ ಭಟ್ ವಿನಂತಿಸಿದ್ದಾರೆ.
ಸಂತೆಕಟ್ಟೆ ಓವರ್ ಪಾಸ್ ಕಾಮಗಾರಿಯನ್ನು ಮೂರು ಪಾಳಿಯಲ್ಲಿ ನಿರ್ವಹಿಸುವ ಮೂಲಕ ಮಳೆ ಶುರುವಾಗುವ ಮುನ್ನ ಮೇ-ಜೂನ್ ಒಳಗೆ ಬಹುತೇಕ ಪ್ರಮುಖ ಹಂತದ ಕಾಮಗಾರಿಯನ್ನು ಪೂರ್ಣಗೊಳಿಸಲು ಹೆದ್ದಾರಿ ಎಂಜಿನಿಯರ್ ಗಳಿಗೆ ಮತ್ತು ಗುತ್ತಿಗೆ ಸಂಸ್ಥೆಗೆ ಸೂಚಿಸಲಾಗಿದೆ ಎಂದು ಶಿಲಾನ್ಯಾಸ ಸಂದರ್ಭದಲ್ಲಿ ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ರಾಜ್ಯ ಖಾತೆ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದರು.
ಇದೇ ಸಂದರ್ಭದಲ್ಲಿಸರ್ವಿಸ್ ರಸ್ತೆಯನ್ನು ಅಂಬಾಗಿಲುವರೆಗೆ ವಿಸ್ತರಿಸಲಾಗುತ್ತದೆ. ಈ ಬಗ್ಗೆ ಡಿಸಿ, ಎಸ್‌ಪಿ ಅವರು ನಿರಂತರ ನಿಗಾ ವಹಿಸಲಿದ್ದಾರೆ.
ಬದಲಿ ಮಾರ್ಗ:
ಕುಂದಾಪುರದಿಂದ ಉಡುಪಿ ಕಡೆಗೆ ಬರುವ ಬಸ್ ಸಹಿತವಾಗಿ ಬೃಹತ್ ವಾಹನಗಳನ್ನು ಕೆ.ಜಿ. ರೋಡ್, ಕೊಳಲಗಿರಿ, ಉಪ್ಪೂರು ಮಾರ್ಗವಾಗಿ ಶೀಂಬ್ರಾ ಸೇತುವೆಯಿಂದ ಪೆರಂಪಳ್ಳಿ – ಮಣಿಪಾಲದ ಕಾಯಿನ್ ವೃತ್ತಕ್ಕೆ ಬಂದು ಸಿಂಡಿಕೇಟ್ ವೃತ್ತದಿಂದ ಉಡುಪಿಗೆ ಬರಲಿದೆ. ಇದರಿಂದ ಸುಮಾರು 10 ಕಿ.ಮೀ ಸುತ್ತುವರಿದು ಬರಬೇಕಾಗುತ್ತದೆ. ಸೋಮವಾರದಿಂದ ಪ್ರಾಯೋಗಿಕವಾಗಿ ಈ ಪ್ರಕ್ರಿಯೆ ಶುರುವಾಗಲಿದೆ.