ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಗೆ 20 ಕ್ಷೇತ್ರಗಳ ಗೆಲುವು ಗ್ಯಾರಂಟಿ: ಸಿದ್ದರಾಮಯ್ಯ

ಬೆಂಗಳೂರು, ಮೇ 27: ವಿಧಾನಸಭಾ ಚುಣಾವಣೆಯಲ್ಲಿ 135 ಸ್ಥಾನಗಳನ್ನ ಗೆಲ್ಲುವ ಮೂಲಕ ಅಧಿಕಾರಕ್ಕೆ ಬಂದ ಕಾಂಗ್ರೆಸ್‌ ಲೋಕಸಭಾ ಚುನಾವಣೆಯಲ್ಲಿ ಅತೀ ಹೆಚ್ಚು ಸ್ಥಾನಗಳನ್ನ ಗೆಲ್ಲುವ ಮೂಲಕ ಕಲಮ-ದಳ ನಾಯಕರಿಗೆ ಠಕ್ಕರ್‌ ಕೊಡುವ ಲೆಕ್ಕಾಚಾರವನ್ನ ಕೈ ನಾಯಕರು ಹಾಕಿಕೊಂಡಿದ್ದಾರೆ.

ಈಗಾಗಲೇ ಎರಡು ಹಂತದಲ್ಲಿ ರಾಜ್ಯದಲ್ಲಿ ಚುನಾವಣೆ ನಡೆದಿದ್ದು, ಕೈ ಪಾಳಯದಲ್ಲಿ ಸೋಲು ಗೆಲುವಿನ ಲೆಕ್ಕಾಚಾರ ಜೋರಾಗಿದೆ.

ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾತನಾಡಿ, ಕಾಂಗ್ರೆಸ್ ಕಾರ್ಯಕರ್ತರ ಶ್ರಮದಿಂದ ಲೋಕಸಭೆಯಲ್ಲಿ ಕಾಂಗ್ರೆಸ್ 15-20 ಸ್ಥಾನ ಗೆದ್ದೇ ಗೆಲ್ಲುತ್ತದೆ. 28 ಕ್ಕೆ 28 ಗೆಲ್ಲುತ್ತೀವಿ ಎನ್ನುತ್ತಿದ್ದ ಬಿಜೆಪಿ ಬಾಯಿ ಬಂದಾಗಿದೆ. ಇಡೀ ದೇಶದಲ್ಲಿ ಬಿಜೆಪಿ ತಿರಸ್ಕೃತಗೊಂಡಿದೆ ಎಂದರು.

ಪ್ರಧಾನಿ ಮೋದಿಯವರಿಗೆ ಬಿಜೆಪಿ, ಎನ್ ಡಿ ಎ ಸೋಲು ಖಚಿತವಾಗಿ ಗೊತ್ತಾಗಿದೆ. ಹತಾಶರಾಗಿ ವಿಚಿತ್ರ ವಿಚಿತ್ರವಾಗಿ ಮಾತಾಡುತ್ತಿದ್ದಾರೆ. ದೇವರೇ ನನ್ನನ್ನು ಕಳುಹಿಸಿದ್ದು ಎಂದು ಮಾತಾಡುತ್ತಿದ್ದಾರೆ. ಅವರ ಸೋಲು ಮೋದಿಯವರನ್ನು ಈ ಮಟ್ಟಕ್ಕೆ ಮಾಡಿಟ್ಟಿದೆ ಎಂದು ವ್ಯಂಗ್ಯವಾಡಿದರು. ನಮ್ಮ ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿ ದೇಶವನ್ನು ಮಾರ್ಪಡಿಸಲು ಬಿಜೆಪಿ ಮತ್ತು ಮೋದಿ ಯತ್ನಿಸುತ್ತಿದ್ದು ಇದಕ್ಕೆ ಭಾರತೀಯರು ಅವಕಾಶ ಕೊಡುವುದಿಲ್ಲ ಎಂದರು.

ಬಿಜೆಪಿಗೆ ಸಂವಿಧಾನದಲ್ಲಿ ನಂಬಿಕೆ ಇಲ್ಲ. ಸಂವಿಧಾನದ ಆಶಯಗಳಲ್ಲಿ ದೇಶವನ್ನು ಮುನ್ನಡೆಸುವುದು ಕಾಂಗ್ರೆಸ್ ಪಕ್ಷ ಮಾತ್ರ. ನೆಹರೂ, ಇಂದಿರಾಗಾಂಧಿ ಅವಧಿಯಲ್ಲಿ ಭೂ ಸುಧಾರಣೆ ಮಾಡಿದರು‌. ಕೈಗಾರಿಕೆಗಳನ್ನು ಸ್ಥಾಪಿಸಿದರು. ಈಗ ಬಿಜೆಪಿ ಇದಕ್ಕೆ ವಿರುದ್ಧವಾದ ಕೆಲಸ ಮಾಡುತ್ತಿದೆ. ರೈತರಿಂದ ಭೂಮಿ ಕಿತ್ತುಕೊಳ್ಳುವುದು , ದೇಶದ ಕೈಗಾರಿಕೆಳನ್ನು ಖಾಸಗಿಯವರಿಗೆ ಮಾರಾಟ ಮಾಡುವುದು ಬಿಜೆಪಿಯ ಸಾಧನೆಯಾಗಿದೆ ಎಂದರು.

ಸಾಮಾಜಿಕವಾಗಿ, ಸಾಂಸ್ಕೃತಿಕವಾಗಿ ಭಾರತ ಬಹುತ್ವದ ದೇಶ. ಈ ಬಹುತ್ವದ ದೇಶವನ್ನು ನಾಶ ಮಾಡಿ ಬಿಜೆಪಿ ಮೂಗಿನ ನೇರದ ಹಿಂದೂ ದೇಶ ಮಾಡುವುದು ಅಸಾಧ್ಯ. ಈ ದೇಶ ಪ್ರತಿಯೊಬ್ಬ ಭಾರತೀಯರಿಗೆ ಸೇರಿದ್ದು ಎಂದರು. ತಮ್ಮನ್ನು ತೀವ್ರವಾಗಿ ಟೀಕಿಸುತ್ತಿದ್ದ ಲೋಹಿಯಾ ಅವರ ಮಾತನ್ನು ಪಾರ್ಲಿಮೆಂಟಿನಲ್ಲಿ ಕುಳಿತು ನೆಹರೂ ಆಲಿಸುತ್ತಿದ್ದರು. ಸ್ಪಂದಿಸುತ್ತಿದ್ದರು‌. ಇದು ನೆಹರೂ ರೂಢಿಸಿಕೊಂಡಿದ್ದ ರಾಜಕೀಯ ಮೌಲ್ಯ ಎಂದರು.ನಮ್ಮ ಸರ್ಕಾರದ ಸಾಧನೆಗಳ ಕುರಿತು ಬಿಜೆಪಿ ಸರಣಿ ಸುಳ್ಳುಗಳನ್ನು ಹೇಳುತ್ತಿದೆ ಎಂದರು.

KPCC ಕಚೇರಿಯಲ್ಲಿ ನಡೆದ ಪಂಡಿತ್ ಜವಾಹರಲಾಲ್ ನೆಹರೂ ಅವರ ಪುಣ್ಯ ಸ್ಮರಣೆ ಕಾರ್ಯಕ್ರಮವನ್ನು ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಉದ್ಘಾಟಿಸಿದ ಸಿದ್ದರಾಮಯ್ಯ ಅವರು, ಪ್ರಜಾಪ್ರಭುತ್ವ ಮತ್ತು ಜಾತ್ಯತೀತ ತತ್ವದಲ್ಲಿ ದೇಶದ ಅಭಿವೃದ್ಧಿಗೆ ಅಡಿಪಾಯ ಹಾಕಿದ್ದು ಜವಾಹರಲಾಲ್ ನೆಹರೂ ಎಂದು ಬಣ್ಣಿಸಿದರು.

ಪ್ರಜಾಪ್ರಭುತ್ವ ಮತ್ತು ಜಾತ್ಯತೀತ ತತ್ವದಲ್ಲಿ ದೇಶದ ಅಭಿವೃದ್ಧಿ ಮಾಡಲು ಮುಂದಾದರು. 17 ವರ್ಷಗಳ ದೀರ್ಘ ಕಾಲ ದೇಶದ ಪ್ರಧಾನ ಮಂತ್ರಿಯಾಗಿ ಭವಿಷ್ಯದ ಭಾರತವನ್ನು ಕಟ್ಟುವ ಕೆಲಸ ಮಾಡಿದರು. ಇಡೀ ವಿಶ್ವದಲ್ಲಿ ಶಾಂತಿ ನೆಲೆಸಬೇಕು ಎನ್ನುವ ಬದ್ಧತೆ ಉಳ್ಳವರಾಗಿದ್ದರು. ಆಗ ಮಾತ್ರ ವಿಶ್ವದ ಅಭಿವೃದ್ಧಿ ಸಾಧ್ಯ ಎನ್ನುವ ನಂಬಿಕೆ ಹೊಂದಿದ್ದರು ಎಂದು ವಿವರಿಸಿದರು.

Latest Indian news

Popular Stories