ಮಂಗಳೂರು: ರಾಜ್ಯದಲ್ಲಿ ಸುಮಾರು 49 ಸಾವಿರದಷ್ಟು ಬಾಲಕಿಯರು ವಿವಿಧ ಕಾರಣಗಳಿಂದ ಗರ್ಭಿಣಿಯರಾಗಿದ್ದಾರೆ ಎಂದು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ನಾಗಣ್ಣ ಗೌಡ ಆತಂಕ ವ್ಯಕ್ತಪಡಿಸಿದ್ದಾರೆ.
ಮಂಗಳೂರಿನಲ್ಲಿ ಮಾತನಾಡಿದ ಅವರು, ಇದು ಆತಂಕಕಾರಿ ಬೆಳವಣಿಗೆಯಾಗಿದ್ದು, ಅಪ್ರಾಪ್ತ ಗರ್ಭಿಣಿಯರಲ್ಲಿಯೇ ಕೂಲಂಕಷವಾಗಿ ಮಾಹಿತಿ ಪಡೆದು ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದರು.
ಕಲ್ಯಾಣ ಕರ್ನಾಟಕ, ಮಂಡ್ಯ ಭಾಗದಲ್ಲಿ ಹೆಚ್ಚಿನ ಪ್ರಕರಣಗಳು ಲಭ್ಯವಾಗಿದೆ. ಹದಿನೆಂಟು ತುಂಬುವ ಮೊದಲೇ ವಿವಾಹ, ಅತ್ಯಾಚಾರ, ಪ್ರೀತಿಯ ನೆಪದಲ್ಲಿ ದೈಹಿಕ ಸಂಪರ್ಕ ಹೀಗೆ ಹಲವಾರು ರೀತಿಯಲ್ಲಿ ಅಪ್ರಾಪ್ತೆಯರು ಗರ್ಭಿಣಿಯರಾಗುತ್ತಿರುವ ಪ್ರಕರಣಗಳು ಬಯಲಾಗುತ್ತಿದೆ. ಇಂತಹ ಪ್ರಕರಣಗಳು ಬಹಳ ಸೂಕ್ಷ್ಮವಾಗಿದ್ದು, ಸಂತ್ರಸ್ತ ಬಾಲಕಿಯರಿಗೆ ಹೆಚ್ಚಿನ ಮಟ್ಟದ ಸಾಂತ್ವನದ ಅಗತ್ಯವಿದೆ ಎಂದರು.
ಕೆಲವೊಂದು ಪ್ರಕರಣಗಳಲ್ಲಿ ಸಂತ್ರಸ್ತೆಯರು ಆತ್ಮಹತ್ಯೆಗೆ ಶರಣಾಗಿರುವ ಪ್ರಕರಣಗಳೂ ಬೆಳಕಿಗೆ ಬಂದಿದೆ. ಇಂತಹ ಪ್ರಕರಣಗಳನ್ನು ಮುಚ್ಚಿಟ್ಟ ವಿಚಾರದಲ್ಲಿ ಈಗಾಲೇ 6 – 7 ವೈದ್ಯರ ಮೇಲೆಯೇ ಪ್ರಕರಣ ದಾಖಲಾಗಿದೆ. ಅಲ್ಲದೆ ಒಂದೆರಡು ನರ್ಸಿಂಗ್ ಹೋಮ್ ಗಳನ್ನೇ ಮುಚ್ಚಲಾಗಿದೆ ಎಂದರು.