ನೀರಿನ ಸಂಪ್ ನಲ್ಲಿ ಮುಳುಗಿ ಬಾಲಕನೊಬ್ಬ ಮೃತಪಟ್ಟಿರುವ ದಾರುಣ ಘಟನೆ ಹೈದರಾಬಾದ್ ನ ಎಲ್ ಬಿ ಸ್ಟೇಡಿಯಂನಲ್ಲಿ ನಡೆದಿದೆ.
ಮೊಹಮ್ಮದ್ ಅಹಿಲ್ (6) ಮೃತ ಬಾಲಕ. ಮಂಗಳವಾರ ಸಂಜೆ(ಫೆ.6 ರಂದು) ಈ ಘಟನೆ ನಡೆದಿದ್ದು, ಮೊಹಮ್ಮದ್ ಅಹಿಲ್ ತನ್ನ ಶಾಲೆಯ ವಾರ್ಷಿಕ ಕ್ರೀಡಾ ದಿನಾಚರಣೆಯ ಸಂದರ್ಭದಲ್ಲಿ ಕ್ರೀಡಾ ಚಟುವಟಿಕೆಯಲ್ಲಿ ಭಾಗಿಯಾಗಿದ್ದಾನೆ.
ಮಗನನ್ನು ಪ್ರೋತ್ಸಾಹಿಸಲು ಆತನ ತಾಯಿ ಶಫಿಯಾ ಹಾಗೂ ಸಹೋದರ ಕೂಡ ಕ್ರೀಡಾಂಗಣಕ್ಕೆ ಬಂದಿದ್ದರು. ಈ ವೇಳೆ ತಾನು ಗೆದ್ದಿರುವ ಪ್ರಮಾಣ ಪತ್ರವನ್ನು ತಾಯಿಗೆ ತೋರಿಸಲು ಸ್ಟೇಡಿಯಂ ಹೊರಗಿನ ದಾರಿಯಲ್ಲಿ ಅಹಿಲ್ ನಿಂತಿದ್ದಾನೆ. ಇನ್ನೇನು ಮಗನನ್ನು ನೋಡಲು ಹೋಗಬೇಕೆನ್ನುವಾಗಲೇ ಮಗ ಎಲ್ಲಿ ಹುಡುಕಿದರೂ ಸಿಗದೇ ಇರುವಾಗ ತಾಯಿ ಭೀತಿಗೊಳಗಾಗಿದ್ದಾರೆ.
ಎಲ್ಲೆಡೆ ಹುಡುಕಿದ ನಂತರ ಸ್ಟೇಡಿಯಂನಲ್ಲಿರುವ 12 ಆಳದ ಸಂಪ್ ನಲ್ಲಿ ಅಹಿಲ್ ಬಿದ್ದಿರುವುದು ಗೊತ್ತಾಗಿದೆ. ಕೂಡಲೇ ಆತನನ್ನು ಹೊರಗೆ ತೆಗೆದು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿದರೂ, ಆದಾಗಲೇ ಆತ ಮೃತಪಟ್ಟಿದ್ದಾನೆ ಎಂದು ವೈದ್ಯರು ಹೇಳಿದ್ದಾರೆ.
ಪ್ರಮಾಣ ಪತ್ರವನ್ನು ತೋರಿಸಲು ನಿಂತಿದ್ದ ಅಹಿಲ್, ಪಕ್ಕದಲ್ಲಿದ್ದ ನೀರಿನ ಸಂಪ್ ಒಳಗೆ ಬಿದ್ದಿದ್ದಾನೆ. ನೀರಿನ ಸಂಪ್ ಸರಿಯಾಗಿ ಮುಚ್ಚದೆ ಇರುವ ಕಾರಣದಿಂದ ಈ ದುರಂತ ನಡೆದಿದೆ ಎನ್ನಲಾಗಿದೆ.
ಸದ್ಯ ಪೊಲೀಸರು ಎಲ್ ಬಿ ಸ್ಟೇಡಿಯಂಗೆ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಿದ್ದಾರೆ.