ಹುಬ್ಬಳ್ಳಿ: ತಂದೆಯೇ ಕುಡಿದ ನಶೆಯಲ್ಲಿ ಮಗುವನ್ನು ಎತ್ತಿ ಬೀಸಾಡಿದ ಪರಿಣಾಮ ಒಂದು ವರ್ಷದ ಹೆಣ್ಣು ಮಗು ಚಿಕಿತ್ಸೆ ಫಲಕಾರಿಯಾಗಿದೆ ಮೃತಪಟ್ಟ ಘಟನೆ ಇಲ್ಲಿನ ಕಿಮ್ಸ್ ನಲ್ಲಿ ನಡೆದಿದೆ.
ಶ್ರೇಯಾ ಮೃತ ದುರ್ದೈವಿ ಮಗುವಾಗಿದ್ದು, ಧಾರವಾಡ ತಾಲೂಕಿನ ಯಾದವಾಡ ಗ್ರಾಮದಲ್ಲಿ ಘಟನೆ ನಡೆದಿದೆ. ಬುಧವಾರ (ಫೆ.28) ರಂದು ಘಟನೆ ನಡೆದಿದೆ.
ಗಾಯಗೊಂಡ ಮಗುವನ್ನು ಇಲ್ಲಿನ ಕಿಮ್ಸ್ ಗೆ ಚಿಕಿತ್ಸೆಗಾಗಿ ದಾಖಲು ಮಾಡಲಾಗಿತ್ತು. ಆದರೆ ಗಂಭೀರವಾಗಿ ಗಾಯಗೊಂಡಿದ್ದರಿಂದ ಚಿಕಿತ್ಸೆ ಫಲಕಾರಿಯಾಗದೆ ಗುರುವಾರ ಮೃತಪಟ್ಟಿದೆ.
ಘಟನೆ ವಿವರ: ಮೃತ ಮಗುವಿನ ತಂದೆ ಶಂಬಯ್ಯ ಮದ್ಯವ್ಯಸನಿಯಾಗಿದ್ದ, ನಿತ್ಯವೂ ಪತ್ನಿಯೊಂದಿಗೆ ಜಗಳ ಮಾಡುತ್ತಿದ್ದ. ಎಂದಿನಂತೆ ಬುಧವಾರ ಪಾನಮತ್ತನಾಗಿ ಮನೆಗೆ ಬಂದು ಪತ್ನಿಯೊಂದಿಗೆ ಜಗಳ ಮಾಡಿದ್ದಾನೆ. ಈ ಸಮಯದಲ್ಲಿ ಮಗು ಶ್ರೇಯಾ ಅಳುತ್ತಿದ್ದರಿಂದ ಕುಪಿತಗೊಂಡು ನಿತ್ಯವೂ ನಿದ್ದೆ ಮಾಡಲು ಬಿಡುತ್ತಿಲ್ಲ ಎಂದು ಮಗುವನ್ನು ಎತ್ತಿ ಬೀಸಾಡಿದ್ದಾನೆ. ಇದರಿಂದ ಮಗು ಗಂಭೀರವಾಗಿ ಗಾಯಗೊಂಡಿತ್ತು. ಕೂಡಲೇ ಕಿಮ್ಸ್ ಗೆ ದಾಖಲು ಮಾಡಲಾಗಿತ್ತು.