ಮಡಿಕೇರಿ ಜ.21 : ಪೌತಿ ಖಾತೆ ಸಂಬಂಧಿಸಿದಂತೆ ಕಡತ ವಿಲೇವಾರಿಗಾಗಿ ವ್ಯಕ್ತಿಯೊಬ್ಬರಿಂದ 2,500ರೂ.ಗಳನ್ನು ಲಂಚದ ರೂಪದಲ್ಲಿ ಸ್ವೀಕರಿಸುತ್ತಿದ್ದ ಮಡಿಕೇರಿ ತಾಲೂಕು ಕಚೇರಿಯ ಹೋಬಳಿ ಕೇಂದ್ರದ ಮರಗೋಡು ಗ್ರಾಮ ಸಹಾಯಕನನ್ನು ಭ್ರಷ್ಟಾಚಾರ ನಿಗ್ರಹ ದಳ ಬಂಧಿಸಿದೆ. ಗ್ರಾಮ ಸಹಾಯಕ ಹೆಚ್.ಎಸ್.ಮಣಿ ಎಂಬಾತನೇ ಲಂಚ ಸ್ವೀಕರಿಸುತ್ತಿದ್ದ ಸಂದರ್ಭ ಎಸಿಬಿ ಬಲೆಗೆ ಬಿದ್ದ ನೌಕರನಾಗಿದ್ದಾನೆ.
ಮರಗೋಡು ಕಟ್ಟೆಮಾಡು ನಿವಾಸಿ ದೂರುದಾರ ಎಂ.ಬಿ.ವಿನೋದ್ ಎಂಬವರ ತಂದೆಗೆ ಒಟ್ಟು 3 ಮಂದಿ ಸಹೋದರರಿದ್ದು, ಈ ಪೈಕಿ ಓರ್ವ ಸಹೋದರ ಗೋವಿಂದ ಎಂಬವರು ಕಳೆದ ಆಗಸ್ಟ್ ತಿಂಗಳಲ್ಲಿ ನಿಧನರಾಗಿದ್ದರು. ಈ 4 ಮಂದಿ ಸಹೋದರರಿಗೆ ಮರಗೋಡು ಕಟ್ಟೆಮಾಡುವಿನಲ್ಲಿ 85 ಸೆಂಟ್ ಜಾಗವಿದ್ದು, ಪೌತಿ ಖಾತೆಯಲ್ಲಿ ಮೃತ ಗೋವಿಂದ ಅವರ ಹೆಸರನ್ನು ತೆಗೆದು ಹಾಕಿ ಅವರ ಪತ್ನಿ ಜಾನಕಿ ಮತ್ತು ಮಗಳು ಪ್ರಮದ ಅವರ ಹೆಸರನ್ನು ಸೇರ್ಪಡೆ ಮಾಡಬೇಕಿತ್ತು. ಇದಕ್ಕಾಗಿ ವಿನೋದ್ ಅವರು 2020ರ ಡಿಸೆಂಬರ್ 27ರಂದು ಮಡಿಕೇರಿ ತಾಲೂಕು ಕಚೇರಿಗೆ ಅರ್ಜಿ ಸಲ್ಲಿಸಿದ್ದರು.
ಈ ಖಾತೆ ಬದಲಾವಣೆಗೆ ಮೃತ ಗೋವಿಂದ ಅವರ 3 ಮಂದಿ ಸಹೋದರರ ಯಾವುದೇ ಆಕ್ಷೇಪ ಇರಲಿಲ್ಲ. ಆದರೆ ಓರ್ವ ಸಹೋದರ ಕೇರಳ ಮತ್ತೋರ್ವರು ಬೆಂಗಳೂರಿನಲ್ಲಿದ್ದ ಹಿನ್ನಲೆಯಲ್ಲಿ ಅವರ ಸಹಿ ಪೌತಿ ಖಾತೆಗೆ ಅಗತ್ಯವಿತ್ತು. ಈ ಹಿನ್ನಲೆಯಲ್ಲಿ ದೂರುದಾರ ವಿನೋದ್ ಅವರು ಕಡತವನ್ನು ತಮಗೆ ನೀಡಿದಲ್ಲಿ ಪೋಸ್ಟ್ ಮೂಲಕ ಸಹಿ ಪಡೆದು ಹಿಂತಿರುಗಿಸುವುದಾಗಿ ಹೇಳಿದ್ದರು.
ಈ ನಡುವೆ ಮರಗೋಡು ಗ್ರಾಮ ಸಹಾಯಕ ಹೆಚ್.ಎಸ್.ಮಣಿ ಅದರ ಅಗತ್ಯವಿಲ್ಲ, 3 ಸಾವಿರ ರೂ. ಹಣ ನೀಡಿದಲ್ಲಿ ತಾನೇ ಕಡತವನ್ನು ವಿಲೇವಾರಿ ಮಾಡುವುದಾಗಿ ಹೇಳಿ ಹಣಕ್ಕೆ ಬೇಡಿಕೆ ಇಟ್ಟಿದ್ದ. ಅಷ್ಟು ಹಣ ತನ್ನ ಬಳಿ ಇಲ್ಲ ಎಂದು ಹೇಳಿದಾಗ ಕೊನೆಯದಾಗಿ 2,500ರೂ. ಹಣ ನೀಡಬೇಕೆಂದು ಹೇಳಿದ್ದ ಎನ್ನಲಾಗಿದೆ. ಇದರಿಂದ ನೊಂದ ಎಂ.ಬಿ.ವಿನೋದ್ ಭಷ್ಟಾಚಾರ ನಿಗ್ರಹ ದಳಕ್ಕೆ ದೂರು ನೀಡಿದ್ದರು.
ಗುರುವಾರ ಮಧ್ಯಾಹ್ನದ ಸಮಯದಲ್ಲಿ ಮಡಿಕೇರಿ ತಾಲೂಕು ಕಚೇರಿಯ ಸಮೀಪವಿರುವ ಜೆರಾಕ್ಸ್ ಮಳಿಗೆಯೊಂದರಲ್ಲಿ ಗ್ರಾಮ ಸಹಾಯಕ ಹೆಚ್.ಎಸ್.ಮಣಿ, ವಿನೋದ್ ಅವರಿಂದ 2,500ರೂ. ಲಂಚ ಪಡೆಯುತ್ತಿದ್ದ ಸಂದರ್ಭ ಎಸಿಬಿ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ದಾಳಿ ನಡೆಸಿ ಹೆಚ್.ಎಸ್.ಮಣಿಯನ್ನು ಬಂಧಿಸಿದರು. ಎಸಿಬಿ ಅಧಿಕಾರಿಗಳು ಲಂಚದ ರೂಪದಲ್ಲಿ ಸ್ವೀಕರಿಸಿದ 2,500ರೂ. ನಗದನ್ನು ವಶಕ್ಕೆ ಪಡೆದರು.
ಭ್ರಷ್ಟಾಚಾರ ನಿಗ್ರಹ ದಳದ ಪೊಲೀಸ್ ವರಿಷ್ಠಾಧಿಕಾರಿ ಡಾ.ಸುಮನ ಡಿ. ಪನ್ನೇಕರ್ ನಿರ್ದೇಶನದಂತೆ ಡಿವೈಎಸ್‍ಪಿ ಸದಾನಂದ ತಿಪ್ಪಣ್ಣನವರ್ ಅವರ ಮಾರ್ಗದರ್ಶನದಲ್ಲಿ ವೃತ್ತ ನಿರೀಕ್ಷಕಿ ಸುಮನ ಹಾಗೂ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿದರು.