ಬೆಂಗಳೂರು: ಪಾದಚಾರಿ ಮಾರ್ಗದಲ್ಲಿ ವಾಹನ ನಿಲುಗಡೆ ಮಾಡುವವರಿಗೆ ಹೈಕೋರ್ಟ್ ಬಿಗ್‌ಶಾಕ್ ನೀಡಿದೆ ತ್ಯಾಗರಾಜ ನಗರದಲ್ಲಿನ ಪಾದಚಾರಿ ಮಾರ್ಗಗಳ ಒತ್ತುವರಿ ತೆರವುಗೊಳಿಸಬೇಕು’ ಎಂದು ಕೋರಿ ಸ್ಥಳೀಯ ನಿವಾಸಿ ಪ್ರಶಾಂತ್ ರಾವ್ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಪಿ.ಎಸ್.ದಿನೇಶ್ ಕುಮಾರ್ ಹಾಗೂ ನ್ಯಾಯಮೂರ್ತಿ ಟಿ.ಜಿ.ಶಿವಶಂಕರೇಗೌಡ ಅವರಿದ್ದ ವಿಭಾಗೀಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿನ ರಸ್ತೆ, ಪಾದಚಾರಿ ಮಾರ್ಗಗಳಲ್ಲಿ ದೀರ್ಘಕಾಲದಿಂದ ನಿಲುಗಡೆ ಮಾಡಲಾಗಿರುವ ಅಪರಿಚಿತ ಹಾಗೂ ವಾರಸುದಾರರು ಪತ್ತೆಯಾಗದ ವಾಹನಗಳನ್ನು ಹರಾಜು ಹಾಕಲು ಹೈಕೋರ್ಟ್ ಕಾಲಮಿತಿ ನಿಗದಿಪಡಿಸಿ ಆದೇಶ ಹೊರಡಿಸಿದೆ.
ವಿಚಾರಣೆ ವೇಳೆ ಸರ್ಕಾರದ ಪರ ವಾದ ಮಂಡಿಸಿದ ಅಡ್ವೋಕೇಟ್ ಜನರಲ್ ಕೆ. ಶಶಿಕಿರಣ ಶೆಟ್ಟಿ, ನಗರದಲ್ಲಿ ಪಾದಚಾರಿ ಮಾರ್ಗಗಳ ಒತ್ತುವರಿ ತೆರವು ಹಾಗೂ ರಸ್ತೆಗಳಲ್ಲಿ ಬಿಟ್ಟು ಹೋಗಿರುವ ಅಪರಿಚಿತ ಮತ್ತು ವಾರಸುದಾರರು ಪತ್ತೆಯಾಗದ ವಾಹಗಳ ಸ್ಥಳಾಂತರ, ಅವುಗಳ ಹರಾಜು ಹಾಕುವ ಸಂಬಂಧ 2024ರ ಜ.31ರಂದು ಬಿಬಿಎಂಪಿ ಹಾಗೂ ಪೊಲೀಸ್ ಅಧಿಕಾರಿಗಳ ಜಂಟಿ ಸಭೆಯ ನಿರ್ಣಯಗಳ ಬಗ್ಗೆ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹಾಗೂ ಜಂಟಿ ಪೊಲೀಸ್ ಆಯುಕ್ತ (ಸಂಚಾರ) ಅನುಚೇತ್ ಅವರ ಅಫಿಡವಿಟ್‌ಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿದರು.