ಕೃಷಿ ವಿಶೇಷ | ಸೌತೆಕಾಯಿ ಬೆಳೆದು ಅಧಿಕ ಲಾಭದ ನಿರೀಕ್ಷೆಯಲ್ಲಿ ಸರಕಾರಿ ನೌಕರ

ಜಿಲ್ಲೆಯ ಡಾವರಗಾಂವ್ ಗ್ರಾಮದ ಗೋರಖನಾಥ ಎಣಕಮೂರೆ ಅವರು ಸರ್ಕಾರಿ ನೌಕರಿಯಲ್ಲಿದ್ದರೂ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡು ಕೈತುಂಬಾ ಆದಾಯ ಗಳಿಸುತ್ತಿದ್ದಾರೆ.

ಒಂದುವರೆ ಎಕರೆ ಪ್ರದೇಶದಲ್ಲಿ ಸೌತೆಕಾಯಿ ಬೆಳೆದಿದ್ದಾರೆ. ಬೆಳೆಗೆ ಸರಿಯಾದ ಸಮಯಕ್ಕೆ ನೀರು ಹಾಯಿಸಿ, ರಸಗೊಬ್ಬರ ಸಿಂಪಡಣೆ ಮಾಡಿದ್ದಾರೆ.
ಅದಕ್ಕೆ ತಕ್ಕಂತೆ ಬೆಳೆಯೂ ಹುಲುಸಾಗಿ ಬೆಳೆದಿದೆ.

ಒಂದುವರೆ ಎಕರೆ ಸೌತೆಕಾಯಿ ಬೆಳೆ ಬೆಳೆಯಲು ಹೊಲ ಹದ ಮಾಡುವುದು, ಬಿತ್ತನೆ ಬೀಜ ಸೇರಿದಂತೆ ಇನ್ನಿತರ ಖರ್ಚು ವೆಚ್ಚ ಸೇರಿ ₹30 ಸಾವಿರ ಖರ್ಚಾಗಿದೆ. ಸದ್ಯ ಮಾರುಕಟ್ಟೆಯಲ್ಲಿ ಸೌತೆಕಾಯಿ ಪ್ರತಿ ಕೆಜಿಗೆ ₹40 ರಿಂದ ₹50 ಕ್ಕೆ ಮಾರಾಟ ಆಗುತ್ತಿದೆ’ ಎನ್ನುತ್ತಾರೆ.

‘ ವಾರದಲ್ಲಿ ಮೂರು ಬಾರಿ ಸೌತೆಕಾಯಿ ಕಟಾವಿಗೆ ಬರುತ್ತಿದೆ. ಪ್ರತಿ ಬಾರಿ ಕಟಾವು ಮಾಡಿದಾಗ ಮೂರು ಕ್ವಿಂಟಾಲ್ ವರೆಗೆ ಇಳುವರಿ ಬರುತ್ತಿದೆ. ಈಗಾಗಲೇ ನಾನು ಖರ್ಚು ಮಾಡಿದ ₹30 ಸಾವಿರ ಬಂದಿದೆ. ಮುಂದಿನ ದಿನಗಳಲ್ಲಿ ಒಂದುವರೆ ಲಕ್ಷ ಆದಾಯ ಬರುವ ನಿರೀಕ್ಷೆಯಿದೆ’ ಎಂದು ರೈತ ಗೋರಖ ಸಂತಸ ವ್ಯಕ್ತಪಡಿಸುತ್ತಾರೆ.

ನಾನು ಒಂದು ಎಕರೆ ಪ್ರದೇಶದಲ್ಲಿ ಈಗಾಗಲೇ ಕಲ್ಲಂಗಡಿ ಬೆಳೆ ಬೆಳೆದಿದ್ದೆ. ಆದರೆ ಈಚೆಗೆ ಸುರಿದ ಮಳೆಯಿಂದಾಗಿ ಬೆಳೆ ಕೊಳೆತು ನಷ್ಟವಾಗಿದೆ. ಈಗ ಸೌತೆಕಾಯಿ ಬೆಳೆಯಿಂದ ಲಾಭ ಆಗುತ್ತಿದೆ. ಇದರಿಂದ ನಷ್ಟ ಸರಿದೂಗಿದಂತಾಗಿದೆ’ ಎಂದು ಎಣಕಮೂರೆ ಸಂತಸ ವ್ಯಕ್ತಪಡಿಸುತ್ತಾರೆ.

‘ರೈತರು ಒಂದೇ ಬೆಳೆಯ ಮೇಲೆ ಅವಲಂಬಿತರಾಗಬಾರದು. ಮಿಶ್ರ ಬೆಳೆ ಬೆಳೆಯಬೇಕು. ಇದರಿಂದ ಒಂದು ಬೆಳೆಯಿಂದ ನಷ್ಟವಾದರೆ ಇನ್ನೊಂದು ಬೆಳೆಯಿಂದ ಲಾಭ ಪಡೆಯಬಹುದು’ ಎಂದು ರೈತ ಸಂಪರ್ಕ ಕೇಂದ್ರದ ಅಧಿಕಾರಿ ಬಸವಪ್ರಭು ತಿಳಿಸುತ್ತಾರೆ.

Latest Indian news

Popular Stories