ಉದ್ಯಾವರದಲ್ಲಿ ನಡೆದ ಮನೆ ಕಳ್ಳತನದ ಆರೋಪಿಯ ಬಂಧನ

ಕಾಪು, ಆ.23: ವಾರದ ಹಿಂದೆ ಉದ್ಯಾವರ ಬೊಳ್ಜೆಯಲ್ಲಿ ನಡೆದ ಮನೆ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿ ಓರ್ವ ಆರೋಪಿ ಯನ್ನು ಕಾಪು ಪೊಲೀಸರು ಕಟಪಾಡಿ ಸಮೀಪದಬಅಚ್ಚಡ ಕ್ರಾಸ್ ಬಳಿ ಬಂಧಿಸಿದ್ದಾರೆ.

ಬಂಧಿತನನ್ನು ಅಚ್ಚಡ ಸಲ್ಪಾ ನಿವಾಸಿ ಜೋನ್ ಪ್ರಜ್ವಲ್ ಫೆರ್ನಾಂಡಿಸ್(32) ಎಂದು‌ ಗುರುತಿಸಲಾಗಿದೆ. ಈತ ಆ.17ರಂದು ಬೊಳ್ಜೆಯ ಅನಿತಾ ಡಿಸಿಲ್ವ ಎಂಬವರ ಮನೆಗೆ ನುಗ್ಗಿ ಕಪಾಟಿನ ಲಾಕರ್ ಮುರಿದು ಸೊತ್ತುಗಳನ್ನು ಕಳವು ಮಾಡಿಕೊಂಡು ಹೋಗಿದ್ದನು ಎಂದು ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಬಂಧಿತನಿಂದ ಚಿನ್ನದ ಕರಿಮಣಿಸರ, 3 ಚಿನ್ನದ ಬಳೆ, 9 ಚಿನ್ನದ ಉಂಗುರ, 5 ಚಿನ್ನದ ಸರ, 2 ಬ್ರಾಸ್‌ಲೈಟ್, 3 ಕಿವಿಯ ಓಲೆ, 1 ಚಿನ್ನದ ಕ್ರಾಸ್ ಸೇರಿದಂತೆ ಒಟ್ಟು 130.150 ಗ್ರಾಂ ತೂಕದ 6,90,713ರೂ. ಮೌಲ್ಯದ ಚಿನ್ನಾಭರಣಗಳು, ಮೊಬೈಲ್, 36,370ರೂ. ನಗದು, ಕೃತ್ಯಕ್ಕೆ ಬಳಸಿದ ಒಂದು ಸ್ಕೂಟರ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಇವುಗಳ ಒಟ್ಟು ಮೌಲ್ಯ 8,02,083ರೂ. ಎಂದು ಅಂದಾಜಿಸಲಾಗಿದೆ.

ಎಸ್ಪಿ ಅಕ್ಷಯ್ ಎಂ.ಹಾಕೆ, ಹೆಚ್ಚುವರಿ ಎಸ್ಪಿ ಎಸ್.ಟಿ.ಸಿದ್ದಲಿಂಗಪ್ಪ ನಿರ್ದೇಶನ ದಂತೆ ಕಾರ್ಕಳ ಡಿವೈಎಸ್ಪಿ ಅರವಿಂದ ಕಲಗುಜ್ಜಿ ಮಾರ್ಗದರ್ಶನದಲ್ಲಿ ಕಾಪು ವೃತ್ತ ನಿರೀಕ್ಷ ಕೆ.ಸಿ.ಪೂವಯ್ಯ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆಸಿದ್ದು, ಕಾಪು ಎಸ್ಸೈ ಪುರುಷೋತ್ತಮ್, ಅಪರಾಧ ಪತ್ತೆ ತಂಡದ ಪ್ರವೀಣ ಕುಮಾರ್, ರಾಜೇಶ್, ನಾರಾಯಣ, ಶ್ರೀಧರ್, ಸುಧಾಕರ್ ಹಾಗೂ ಚಾಲಕ ಪ್ರಸಾದ್ ಸಹಕರಿಸಿದ್ದಾರೆ.

Latest Indian news

Popular Stories