ಬಳ್ಳಾರಿ: ಸಂಚಾರ ನಿಯಮಗಳ ಉಲ್ಲಂಘನೆ 1488 ಪ್ರಕರಣಗಳು ದಾಖಲು; ರೂ.28ಲಕ್ಷ ದಂಡ ವಸೂಲಿ

ಬಳ್ಳಾರಿ,ಜ.20:- ಬಳ್ಳಾರಿ ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನಲ್ಲಿ ಸಂಚಾರಿ ನಿಯಮ ಉಲ್ಲಂಘನೆ ಮಾಡಿದ ವಾಹನಗಳ ಮೇಲೆ 1488 ಪ್ರಕರಣಗಳು ದಾಖಲಿಸಲಾಗಿದ್ದು, ಈ ಪ್ರಕರಣಗಳಿಂದ 28,24,694 ರೂ. ದಂಡ ವಸೂಲಿ ಮಾಡಲಾಗಿದೆ ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಂಚಾರಿ ನಿಯಮ ಉಲ್ಲಂಘನೆ ಮಾಡಿದ ವಾಹನಗಳ ಚಾಲಕ ಸವಾರರ ಒಟ್ಟು 68 ಚಾಲನಾ ಅನುಜ್ಞಾ ಪತ್ರಗಳನ್ನು ಅಮಾನತುಪಡಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
32ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸವನ್ನು ‘ಸಡಕ್ ಸುರಕ್ಷಾ ಜೀವನ್ ರಕ್ಷಾ’ ಎಂಬ ಧ್ಯೇಯದೊಡನೆ ಜ.18 ರಿಂದ ಫೆ.17 ರವರೆಗೆ ಆಚರಿಸಲಾಗುತ್ತಿದ್ದು, ಜಿಲ್ಲೆಯ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿಯಲ್ಲಿ ರಸ್ತೆ ಸುರಕ್ಷತಾ ಸಪ್ತಹವನ್ನು ಜ.20 ರಿಂದ 25 ರವರೆಗೆ ಹಮ್ಮಿಕೊಳ್ಳಲಾಗಿದ್ದು ಈಗಾಗಲೇ ಆರ್‍ಟಿಒ ಕಚೇರಿಯಲ್ಲಿ ಚಾಲನೆ ನೀಡಲಾಗಿದೆ.
ಜ.20ರಂದು ನಗರದ ಮುಖ್ಯ ರಸ್ತೆಗಳಲ್ಲಿ ಬ್ಯಾನರ್‍ಗಳನ್ನು ಕಟ್ಟುವುದರ ಜತೆಗೆ ಕಛೇರಿಯ ಆವರಣದಲ್ಲಿ/ನಗರದ ಮುಖ್ಯ ರಸ್ತೆಗಳಲ್ಲಿ ಕರಪತ್ರ ಹಂಚುವುದು, ಸಿರುಗುಪ್ಪ ಕ್ಯಾಂಪ್‍ದಲ್ಲಿ ಸಾರ್ವಜನಿಕರಿಗೆ ಹಾಗೂ ವಾಹನ ಚಾಲಕರುಗಳಿಗೆ ತಿಳಿವಳಿಕೆ ನೀಡುವುದು, ದ್ವಿ ಚಕ್ರ ಸವಾರರಿಗೆ ಹೆಲ್ಮೆಟ್ ಧರಿಸುವಂತೆ ತಿಳಿಸಲಾಗುತ್ತದೆ. ಜ.21 ರಂದು ಬಳ್ಳಾರಿ ವ್ಯಾಪ್ತಿಯಲ್ಲಿ ಸಾರ್ವಜನಿಕರಿಗೆ ಹಾಗೂ ವಾಹನ ಚಾಲಕರುಗಳಿಗೆ ತಿಳಿವಳಿಕೆ ನೀಡುವುದು, ದ್ವಿ ಚಕ್ರ ಸವಾರರಿಗೆ ಹೆಲ್ಮೆಟ್ ಧರಿಸಲು, ಟ್ರಿಪಲ್ ರೈಡಿಂಗ್ ಮಾಡದಿರಲು ತಿಳಿಸುವುದು, ಲಘು ಮೋಟಾರು ವಾಹನ ಚಾಲಕರಿಗೆ ಸೀಟ್ ಬೆಲ್ಟ್ ಹಾಕಿಕೊಳ್ಳಲು ತಿಳಿಸುವುದು, ಸರಕು ವಾಹನಗಳಲ್ಲಿ ಜನರು ಸಾಗಿಸದೇ ಇರಲು, ಪ್ರಯಾಣಿಕ ವಾಹನಗಳಲ್ಲಿ ಸೀಟಿನ ಸಾಮಥ್ರ್ಯಕ್ಕಿಂತ ಹೆಚ್ಚಿನ ಪ್ರಯಾಣಿಕರು ಪ್ರಯಾಣಿಸದಿರಲು ಇತ್ಯಾದಿ ತಿಳಿಸುವ ಕಾರ್ಯಕ್ರಮ.
ಜ.22 ರಂದು ಕಣ್ಣಿನ ಪರೀಕ್ಷೆಯನ್ನು ಪರಿಣಿತ ವೈದ್ಯರಿಂದ ವಾಹನದ ಚಾಲಕರಿಗೆ ಪರೀಕ್ಷಿಸಿಸುವ ಕಾರ್ಯಕ್ರಮ. ಜ.23 ರಂದು ಹೋಮ್‍ಗಾರ್ಡ್‍ಗಳಿಂದ ಹೆಲ್ಮೆಟ್ ಧರಿಸಿ ರ್ಯಾಲಿ ಮಾಡುವುದು, ರೀಪ್ಲೇಕ್ಟರ್‍ಗಳ ಸ್ಟಿಕ್ಕರ್‍ಗಳನ್ನು ವಾಹನಗಳಿಗೆ ಅಂಟಿಸುವುದು. ಜ.24 ರಂದು ಬಳ್ಳಾರಿ ವ್ಯಾಪ್ತಿಯಲ್ಲಿ ಆಟೋ ಚಾಲಕರಿಗೆ ರಸ್ತೆ ಸುರಕ್ಷತೆ ಕುರಿತು ಅರಿವು ಮೂಡಿಸುವ ಕಾರ್ಯಕ್ರಮ. ಜ.25ರಂದು ಎನ್.ಇ.ಕೆ.ಆರ್.ಟಿ.ಸಿ. ಬಸ್ ಡಿಪೋ ಬಳ್ಳಾರಿಯಲ್ಲಿ ಚಾಲಕ ಹಾಗೂ ನಿರ್ವಾಹಕರಿಗೆ ರಸ್ತೆ ಸುರಕ್ಷತೆ ಕುರಿತಂತೆ ಅರಿವು ಮೂಡಿಸುವ ಕಾರ್ಯಕ್ರಮವನ್ನು ನಡೆಸಲು ಉದ್ದೇಶಿಸಲಾಗಿದೆ ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Latest Indian news

Popular Stories