ಬಳ್ಳಾರಿ: ಕ್ಷಯ ರೋಗ ನಿರ್ಮೂಲನೆಗೆ ಸಹಕರಿಸಿ:ಡಿಎಚ್‍ಒ ಜನಾರ್ಧನ್

ಬಳ್ಳಾರಿ,ಡಿ.01:- ಕ್ಷಯರೋಗವನ್ನು ಸಕ್ರಿಯವಾಗಿ ಪತ್ತೆ ಹಚ್ಚಿ ಚಿಕಿತ್ಸೆ ನೀಡುವ ಆಂದೋಲನವನ್ನು ಜಿಲ್ಲೆಯಾದ್ಯಂತ ಹಮ್ಮಿಕೊಳ್ಳಲಾಗಿದ್ದು, ಆರೋಗ್ಯ ಇಲಾಖೆಯ ಸಿಬ್ಬಂದಿ ಮತ್ತು ಆಶಾ ಕಾರ್ಯಕರ್ತೆಯರನ್ನು ಒಳಗೊಂಡ ತಂಡಗಳು ಕ್ಷಯರೋಗವನ್ನು ಪತ್ತೆ ಹಚ್ಚಲು ಮನೆ ಮನೆಗೆ ಬಂದ ಸಂದರ್ಭದಲ್ಲಿ ಸಾರ್ವಜನಿಕರು ಸಂಪೂರ್ಣವಾಗಿ ಸಹಕರಿಸಿ ಕ್ಷಯರೋಗವನ್ನು ನಿರ್ಮೂಲನೆ ಮಾಡುವಲ್ಲಿ ಸಹಕರಿಸಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಎಚ್.ಎಲ್.ಜನಾರ್ಧನ್ ಹೇಳಿದರು.
ನಗರದ ಬಂಡಿಹಟ್ಟಿ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಸಕ್ರಿಯ ಕ್ಷಯರೋಗ ಪತ್ತೆ ಮತ್ತು ಚಿಕಿತ್ಸೆ ಆಂದೋಲನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಈಗಾಗಲೇ 1529 ಹೈ ರಿಸ್ಕ್ ಪ್ರದೇಶಗಳನ್ನು ಗುರುತಿಸಲಾಗಿದ್ದು, ಜಿಲ್ಲೆಯ ಒಟ್ಟು 14,04,672 ಜನರನ್ನು ತಪಾಸಣೆಗೆ ಒಳಪಡಿಸಲು ಗುರಿ ಹೊಂದಲಾಗಿದೆ. 3,43,675 ಮನೆಗಳಿಗೆ ಭೇಟಿ ನೀಡಲು 1017 ಮನೆ ಬೇಟಿ ತಂಡಗಳನ್ನು ರಚಿಸಲಾಗಿದೆ. 182 ಜನರು ಮೇಲ್ವಿಚಾರಕರು ಕಾರ್ಯನಿರ್ವಹಿಸಲಿದ್ದಾರೆ. ಡಿ.1ರಿಂದ 30ರವರೆಗೆ ಒಟ್ಟು 30 ದಿನಗಳ ಕಾಲ ಈ ಆಂದೋಲನ ಜರುಗಲಿದೆ ಎಂದರು.
ಕ್ಷಯರೋಗವು ಮೈಕೋಬ್ಯಾಕ್ಟಿರೀಯಂ ಟ್ಯೂಬರ್ ಕ್ಯುಲೋಸಿಸ್ ಎಂಬ ಸೂಕ್ಷ್ಮಾಣು ಜೀವಿಯಿಂದ ಬರುತ್ತದೆ. ಕ್ಷಯರೋಗವು ದೇಹದ ಯಾವುದೇ ಭಾಗಕ್ಕಾದರೂ ಬರಬಹುದು. ಕ್ಷಯರೋಗದಲ್ಲಿ ಶ್ವಾಸಕೋಶದ ಕ್ಷಯ ಮತ್ತು ಶ್ವಾಸಕೋಶೇತರ ಕ್ಷಯ ಎಂಬ ಎರಡು ವಿಧಗಳಿವೆ. ಕ್ಷಯರೋಗಿ ಕೆಮ್ಮಿದಾಗ, ಸೀನಿದಾಗ ಹೊರಬರುವ ತುಂತುರುಗಳಿಂದ ರೋಗಾಣುಗಳು ಆರೋಗ್ಯವಂತ ವ್ಯಕ್ತಿಯ ದೇಹ ಸೇರಿ ಕ್ಷಯರೋಗದ ಸೋಂಕು ಉಂಟುಮಾಡುತ್ತದೆ ಎಂದು ಅವರು ವಿವರಿಸಿದರು.
ಎರಡು ವಾರಗಳಿಗೂ ಮೇಲ್ಪಟ್ಟ ಕೆಮ್ಮು ಕ್ಷಯರೋಗದ ಸಾಮಾನ್ಯ ಲಕ್ಷಣವಾಗಿದೆ. ಸಂಜೆವೇಳೆ ಜ್ವರ ಬರುವುದು ರಾತ್ರಿ ವೇಳೆ ಬೆವರುವುದು. ಎದೆ ನೋವು ಕೆಲವೊಮ್ಮೆ ಕಫದ ಜೊತೆ ರಕ್ತ ಬೀಳುವುದು. ಹಸಿವಾಗದಿರುವುದು ಮತ್ತು ತೂಕ ಕಡಿಮೆಯಾಗುವುದು. ಮಕ್ಕಳಲ್ಲಿ ಸತತವಾಗಿ ತೂಕ ಕಡಿಮೆಯಾಗುವುದು ಅಥವಾ ಹೆಚ್ಚದೇ ಇರುವುದು, ಚಿಕಿತ್ಸೆಗೆ ಬಗ್ಗದ ಅತಿಸಾರ ಬೇದಿ, ಕುತ್ತಿಗೆ ಬಗುಲುಗಳಲ್ಲಿ ಗಡ್ಡೆ ಕ್ಷಯರೋಗದ ಲಕ್ಷಣಗಳಾಗಿದ್ದು, ಈ ರೀತಿಯ ಲಕ್ಷಣಗಳಿದ್ದರೆ ತಕ್ಷಣವೇ ಸಮೀಪದ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ 2 ಬಾರಿ ಕಫ ಪರೀಕ್ಷೆ ಮಾಡಿಸಿ ಚಿಕಿತ್ಸೆ ಪಡೆದುಕೊಳ್ಳಬೇಕು ಎಂದರು.
ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಎನ್.ಬಸರೆಡ್ಡಿ ಅವರು ಮಾತನಾಡಿ, ಕ್ಷಯರೋಗವನ್ನು ನೇರ ನಿಗಾವಣಾ ಅಲ್ಪಾವಧಿ ಚಿಕಿತ್ಸೆ (ಡಾಟ್ಸ್) ಯಿಂದ ಸಂಪೂರ್ಣವಾಗಿ ಗುಣಪಡಿಸಬಹುದು. 6-8 ತಿಂಗಳು ತಪ್ಪದೇ ಚಿಕಿತ್ಸೆಯನ್ನು ಪಡೆಯಬೇಕು ಎಂದರು.
ಜಿಲ್ಲಾ ಕ್ಷಯರೋಗ ನಿರ್ಮೂಲನ ಅಧಿಕಾರಿಗಳಾದ ಡಾ.ಇಂದ್ರಾಣಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ದೇಶದಲ್ಲಿ ಶೇ.40ರಷ್ಟು ಯುವಜನಾಂಗವು ಕ್ಷಯರೋಗದ ಸೋಂಕಿತರಾಗಿದ್ದು ಜೀವಿತಾವಧಿಯಲ್ಲಿ ರೋಗಿಯಾಗಿ ಪರಿಣಮಿಸುವ ಸಾದ್ಯತೆ ಇದೆ. ಪ್ರತಿದಿನ 6 ಸಾವಿರ ಜನ ಹೊಸ ಕ್ಷಯರೋಗಿಗಳಾಗುತ್ತಿದ್ದಾರೆ. ಪ್ರತಿ ಎರಡೂವರೆ ನಿಮಿಷಕ್ಕೆ ಒಬ್ಬರು (ಪ್ರತಿ ದಿನ 600) ಕ್ಷಯರೋಗದಿಂದ ಸಾವನ್ನಪ್ಪುತ್ತಿದ್ದಾರೆ ಎಂದು ಅವರು ವಿವರಿಸಿದರು.
ಟಿ.ಬಿ ಯನ್ನು ಸೋಲಿಸಿ-ದೇಶವನ್ನು ಗೆಲ್ಲಿಸಿ, ಕ್ಷಯರೋಗವನ್ನು ಶತ್ರುವನ್ನಾಗಿಸಿ-ರೋಗಿಯನ್ನು ನಿಮ್ಮ ಮಿತ್ರನಂತೆ ಕಾಣಿರಿ, ಕ್ಷಯರೋಗ ಸಂಪೂರ್ಣ ಗುಣಮುಖ ವಾಗುವಂತ ರೋಗ, ಕ್ಷಯರೋಗಿಯನ್ನು ಮುಟ್ಟುವುದರಿಂದ ಕೈ ಕುಲುಕುವುದರಿಂದ ಕ್ಷಯರೋಗ ಹರಡುವುದಿಲ್ಲ, ರೋಗವನ್ನು ದೂರವಿಡಿ, ರೋಗಿಯನ್ನು ಅಲ್ಲ. ಕ್ಷಯರೋಗವನ್ನು ತಡೆಗಟ್ಟುವುದು ಪ್ರತಿಯೊಬ್ಬರ ಜವಾಬ್ದಾರಿ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ತಾಲೂಕು ಆರೋಗ್ಯ ಅಧಿಕಾರಿ ಡಾ.ಮೋಹನ್‍ಕುಮಾರಿ, ಜಿಲ್ಲಾ ಕುಷ್ಠರೋಗ ನಿಯಂತ್ರಣಾಧಿಕಾರಿ ಡಾ.ರಾಜಶೇಖರ ರೆಡ್ಡಿ, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ವಿಜಯಲಕ್ಷ್ಮೀ,ಜಿಲ್ಲಾ ಆರ್‍ಸಿಎಚ್ ಅಧಿಕಾರಿ ಡಾ.ಅನಿಲಕುಮಾರ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಮರಿಯಂಬಿ,ಜಿಲ್ಲಾ ಮಲೇರಿಯಾ ಅಧಿಕಾರಿ ಡಾ.ಅಬ್ದುಲ್ಲಾ,ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ್ ದಾಸಪ್ಪನವರ್ ಮತ್ತಿತರರು ಇದ್ದರು.
ಕ್ಷಯರೋಗದಿಂದ ಗುಣಮುಖರಾದ ಮೆಹಬೂಬ್‍ಸಾಬ್ ಅವರು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.

Latest Indian news

Popular Stories