ಬಳ್ಳಾರಿ,ಜ.2: ಜಿಲ್ಲಾ ಖನಿಜ ನಿಧಿ ಅಡಿ ಆರೋಗ್ಯಕ್ಕೆ ಮೊದಲ ಆದ್ಯತೆ ನೀಡಲಾಗಿದ್ದು, ಗರ್ಭಿಣಿ ಬಾಣಂತಿಯರು, ಮಕ್ಕಳು, ವಯಸ್ಸಾದವರು ಹಳ್ಳಿಗಳಿಂದ ಪಟ್ಟಣಕ್ಕೆ ಬರಲು ಸಮಸ್ಯೆಯಾಗುತ್ತದೆ ಎಂದರಿತು ಅಮೃತ ವಾಹಿನಿ ಅಡಿ ಮೊಬೈಲ್ ಮೆಡಿಕಲ್ ಯೂನಿಟ್ (ಸಂಚಾರಿ ಆರೋಗ್ಯ ಘಟಕಗಳು) ಒದಗಿಸಲಾಗುತ್ತಿದ್ದು, ಈ ಯೂನಿಟ್‍ಗಳು ಹಳ್ಳಿ-ಹಳ್ಳಿಗೆ ತೆರಳಿ ಆರೋಗ್ಯ ಸೇವೆ ಒದಗಿಸಲಿವೆ ಎಂದು ಅರಣ್ಯ,ಪರಿಸರ, ಜೀವಿಶಾಸ್ತ್ರ ಹಾಗೂ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವರಾದ ಆನಂದಸಿಂಗ್ ಹೇಳಿದರು.
ಸಂಡೂರು ಪಟ್ಟಣದ ಬಸ್‍ಡಿಪೋ ಆವರಣದಲ್ಲಿ ಜಿಲ್ಲಾಡಳಿತ, ಜಿಪಂ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಎನ್‍ಎಂಡಿಸಿ ಸಿಎಸ್‍ಆರ್ ನಿಧಿಯಲ್ಲಿ ಅಮೃತ ವಾಹಿನಿ ಯೋಜನೆಯಡಿ ಸಂಚಾರಿ ಆರೋಗ್ಯ ಘಟಕಗಳನ್ನು ಶನಿವಾರ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.
ಸಂಡೂರು ತಾಲೂಕಿನ ಜನರು ಈ ಸಂಚಾರಿ ಆರೋಗ್ಯ ಘಟಕಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಗಣಿಗಾರಿಕೆಯಿಂದ ಸಂಡೂರು ತಾಲೂಕು ಜಿಲ್ಲೆಯ ಅಕ್ಷಯ ಪಾತ್ರೆಯಾಗಿದೆ. ಖನಿಜ ನಿಧಿಯಿಂದ ಅನೇಕ ತಾಲೂಕುಗಳು ಅಭಿವೃದ್ದಿ ಅನುದಾನ ಪಡೆಯುತ್ತಿವೆ. 1956ರಿಂದಲೂ ಸಂಡೂರು ಭಾಗದಲ್ಲಿ ಗಣಿಗಾರಿಕೆ ನಡೆಯುತ್ತಿದ್ದು ಇಲ್ಲಿನ ಜನರ ಪ್ರಮುಖ ಉದ್ಯೋಗವಾಗಿದೆ. ಮಾಲಿನ್ಯರಹಿತ ತಂತ್ರಜ್ಞಾನ ಆಧಾರಿತ ಗಣಿಗಾರಿಕೆ ನಡೆಯುವಂತಾಗಬೇಕು ಎಂದು ಹೇಳಿದ ಸಚಿವ ಸಿಂಗ್ ಅವರು ಕುದುರೆಮುಖ ಗಣಿ ಕಂಪನಿಗೆ (ಕೆಒಐಸಿಎಲ್) 470 ಹೆಕ್ಟೇರ್ ಪ್ರದೇಶದಲ್ಲಿ ಗಣಿಗಾರಿಕೆಗೆ ಅವಕಾಶ ನೀಡಲಾಗಿದೆ ಎಂದರು.
ಉತ್ತರ ಕರ್ನಾಟಕದ ಮಲೆನಾಡು ಎಂದು ಖ್ಯಾತಿ ಗಳಿಸಿರುವ ಸಂಡೂರು ಕೂರ್ಗ್ ಮಾದರಿಯಲ್ಲಿ ಪ್ರವಾಸಿ ತಾಣವಾಗಬೇಕು ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ ಅರಣ್ಯ ಸಚಿವ ಆನಂದ್‍ಸಿಂಗ್ ಅವರು ಪಕ್ಕದಲ್ಲೆ ವಿಶ್ವ ಪಾರಂಪರಿಕ ತಾಣ ಹಂಪಿಯಿದ್ದು, ಸಂಡೂರು ಸಹ ಪ್ರವಾಸಿ ತಾಣವಾದರೆ ಪ್ರವಾಸೋದ್ಯಮ ಅಭಿವೃದ್ದಿಯ ಜೊತೆಗೆ ಉದ್ಯೋಗಗಳು ಸೃಷ್ಟಿಯಾಗಲಿವೆ. ಮುಂದಿನ ದಿನಗಳಲ್ಲಿ ಹೊಸಪೇಟೆ-ಸಂಡೂರು ಅವಳಿ ನಗರಗಳಾಗಲಿವೆ ಎಂದು ಭವಿಷ್ಯ ನುಡಿದರು.
ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಅವರು ಮಾತನಾಡಿ, ಡಿಎಂಎಫ್‍ನಲ್ಲಿ ಆರೋಗ್ಯಕ್ಕೆ ಮೊದಲ ಆಧ್ಯತೆ ನೀಡಬೇಕೆಂಬ ಉದ್ದೇಶದಿಂದ ಅಮೃತವಾಹಿನಿ ಆರಂಭಿಸಲಾಗಿದೆ. ಗಣಿಬಾಧಿತ ಪ್ರದೇಶವಾದ ಸಂಡೂರಿನಲ್ಲಿ ಮೊಬೈಲ್ ಮೆಡಿಕಲ್ ಯೂನಿಟ್ (ಚಕ್ರಗಳ ಮೇಲೆ ಆರೋಗ್ಯ) ಸೇವೆ ಒದಗಿಸಬೇಕೆಂದು ಒಂದು ವರ್ಷದ ಹಿಂದೆಯೆ ಯೋಜನೆ ಹಾಕಿಕೊಳ್ಳಲಾಗಿತ್ತು. ಇದೀಗ ಕಾರ್ಯರೂಪಕ್ಕೆ ಬಂದಿದ್ದು, ಇದರಡಿ ಒಟ್ಟು 10 ಸಂಚಾರಿ ಆರೋಗ್ಯ ಘಟಕಗಳು ನಿಗದಿತ ದಿನಗಳಂದು ಆಯಾ ಗ್ರಾಮಗಳಿಗೆ ತೆರಳಿ ಸೇವೆ ನೀಡಲಿವೆ. ವಿವಿದ ಆರೋಗ್ಯ ಸೇವೆ ಒದಗಿಸುವ ಮೊಬೈಲ್ ಯೂನಿಟ್ ವಾಹನದಲ್ಲಿ ವೈದ್ಯ, ನರ್ಸ್ ಮತ್ತು ಔಷಧಗಳಿರುತ್ತವೆ. ಆರೋಗ್ಯ ಕ್ಷೇತ್ರದಲ್ಲಿ ಬಳ್ಳಾರಿ ಜಿಲ್ಲೆ ರಾಜ್ಯಕ್ಕೆ ಮಾದರಿಯನ್ನಾಗಿ ಮಾಡುವ ಉದ್ದೇಶ ಹೊಂದಲಾಗಿದೆ. ಜಿಲ್ಲೆಯ ಎಲ್ಲ ಪಿಎಚ್‍ಸಿಗಳನ್ನು ಉನ್ನತೀಕರಣ ಮಾಡಲಾಗುವುದು ಆದಕ್ಕಾಗಿ 18 ಆಂಬುಲೆನ್ಸ್ ಖರೀದಿ ಪ್ರಕ್ರಿಯೆ ಸಹ ನಡೆದಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಶಾಸಕ ಇ.ತುಕಾರಾಮ್ ಮಾತನಾಡಿ, ತಾಲೂಕಿನ ಬಡ ಮಕ್ಕಳಿಗೆ ಎಲ್‍ಕೆಜಿಯಿಂದ ಪಿಜಿವರೆಗೆ ಉಚಿತ ಶಿಕ್ಷಣ ನೀಡುವ ಗುರಿ ಹೊಂದಲಾಗಿದೆ. ಎಸ್‍ಎಸ್‍ಎಲ್‍ಸಿ-ಪಿಯುಸಿ ಓದಿ ಮನೆಯಲ್ಲಿ ಉಳಿದುಕೊಂಡಿರುವ ತಾಲೂಕಿನ 3800ಜನ ನಿರುದ್ಯೋಗಿಗಳಿಗೆ ಕೌಶಲ್ಯಾಭಿವೃದ್ದಿ ತರಬೇತಿ ನೀಡಿ ಸ್ವಯಂ ಉದ್ಯೋಗಾವಕಾಶ ಕಲ್ಪಿಸಲಾಗುವುದು ಎಂದರು.
ಸಂಸದ ವೈ.ದೇವೇಂದ್ರಪ್ಪ, ಜಿಪಂ ಸಿಇಒ ಕೆ.ಆರ್.ನಂದಿನಿ, ಎನ್‍ಎಂಡಿಸಿ ಅಧಿಕಾರಿ ಸಂಜಯ್ ಸಾಹಿ ಮಾತನಾಡಿದರು.
ಸಹಾಯಕ ಆಯುಕ್ತ ರಮೇಶ ಕೋನರೆಡ್ಡಿ, ಡಿಎಚ್‍ಒ ಡಾ.ಎಚ್.ಎಲ್.ಜನಾರ್ಧನ, ವಿಮ್ಸ್ ನಿರ್ದೇಶಕ ದೇವಾನಂದ, ತಾಪಂ ಅಧ್ಯಕ್ಷೆ ಫರ್ಜಾನಾ ಜಿ.ಆಜಂ, ಪುರಸಭೆ ಅಧ್ಯಕ್ಷೆ ಅನಿತಾ ವಸಂತಕುಮಾರ್, ಟಿಎಚ್‍ಒ ಡಾ.ಗೋಪಾಲರಾವ್, ಡಾ.ರಾಮಶೆಟ್ಟಿ ಇತರರಿದ್ದರು.