ನವದೆಹಲಿ: ಲೋಕಸಭೆ ಚುನಾವಣೆಗೆ ಬಿಜೆಪಿ- ಜೆಡಿಎಸ್ ಮೈತ್ರಿ ಮತ್ತೆ ಮುನ್ನಲೆಗೆ ಬಂದಿದೆ. ಕಾಂಗ್ರೆಸ್ ಗೆ ಮಾಸ್ಟರ್ ಸ್ಟ್ರೋಕ್ ಕೊಡಲು ನಿರ್ಧರಿಸಿರುವ ಜೆಡಿಎಸ್ ಲೋಕಸಭಾ ಚುನಾವಣೆ ಸಂಬಂಧ ದೆಹಲಿಯಲ್ಲಿ ಬಿಜೆಪಿ ವರಿಷ್ಠ ನಾಯಕರನ್ನು ಭೇಟಿ ಮಾಡಿದ್ದಾರೆ.
ಮೂಲಗಳ ಪ್ರಕಾರ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಮಾಜಿ ಪ್ರಧಾನಿ ಹೆಚ್‍ಡಿ ದೇವೇಗೌಡರು ಭೇಟಿ ಮಾಡಿದ್ದಾರೆ ಎನ್ನಲಾಗಿದೆ. ಇತ್ತೀಚೆಗೆ ಪ್ರಜ್ವಲ್ ರೇವಣ್ಣ ಅವರ ಕೋರ್ಟ್ ಕೇಸ್ ಗೆ ಸಂಬಂಧಿಸಿದಂತೆ ವಕೀಲರ ಭೇಟಿಗೆ ತೆರಳಿದ್ದ ದೇವೇಗೌಡರು ಇದೇ ವೇಳೆ ರಹಸ್ಯವಾಗಿ ಅಮಿತ್ ಶಾ ಜೊತೆ ಚರ್ಚೆ ನಡೆಸಿದ್ದಾರೆ. ಉಭಯ ನಾಯಕರ ನಡುವೆ ಮೈತ್ರಿ ಬಗ್ಗೆ ಅನೌಪಚಾರಿಕವಾಗಿ ಚರ್ಚೆ ನಡೆದಿದೆ ಎಂದು ತಿಳಿದು ಬಂದಿದೆ,
ಅಮಿತ್ ಶಾ ಭೇಟಿ ವೇಳೆ ಅನೌಪಚಾರಿಕವಾಗಿ ಮೈತ್ರಿ ಮಾತುಕತೆ ನಡೆಸಿರುವ ದೇವೇಗೌಡರು ನಾಲ್ಕೈದು ಸ್ಥಾನಗಳಿಗೆ ಬೇಡಿಕೆ ಇಟ್ಟಿದ್ದಾರೆ ಎಂದು ಹೇಳಲಾಗ್ತಿದೆ. ಹಾಸನ, ಮಂಡ್ಯ, ಮೈಸೂರು, ಚಿಕ್ಕಬಳ್ಳಾಪುರ, ತುಮಕೂರು, ಬೆಂಗಳೂರು ಗ್ರಾಮಾಂತರದಲ್ಲಿ ಜೆಡಿಎಸ್ ಗೆ ಬೆಂಬಲ ನೀಡುವಂತೆ ಕೇಳಿರುವ ದೇವೇಗೌಡರು, ಈ ಭಾಗದಲ್ಲಿ ನಮಗೆ ಹೆಚ್ಚು ಶಕ್ತಿ ಇದೆ. ನೀವು ನಮ್ಮ ಕೈ ಜೋಡಿಸಿ, ಉಳಿದ ಕಡೆ ನಾವು ನಿಮಗೆ ಬೆಂಬಲ ನೀಡುವುತ್ತೇವೆ ಎಂದು ಹೇಳಿದ್ದಾರೆ ಎನ್ನಲಾಗಿದೆ. ದೇವೇಗೌಡರ ಬೇಡಿಕೆಗೆ ಒಪ್ಪಿಗೆ ಸಿಕ್ಕಿದರೆ ಸೆ. 10ರ ಸಮಾವೇಶದ ಬಳಿಕ ಜೆಡಿಎಸ್ ನಿರ್ಧಾರ ಪ್ರಕಟವಾಗಲಿದೆ.
ಬದಲಾದ ರಾಜಕೀಯ ಸನ್ನಿವೇಶದಲ್ಲಿ ಮುಂದೆ ಯಾರಿಗೆ ಬೆಂಬಲ ನೀಡಬೇಕು ಎಂಬುವುದರ ಬಗ್ಗೆ ತೀರ್ಮಾನ ಆಗಬೇಕಿದೆ. ನಾವು ‘ಇಂಡಿಯಾ’ ಒಕ್ಕೂಟದ ಯಾವುದೇ ಸಭೆಗೆ ಹಾಜರಾಗಿಲ್ಲ ಎಂದು ಕೆಲ ದಿನಗಳ ಹಿಂದೆ ಮಾಜಿ ಸಿಎಂ ಹೆಚ್ ಡಿಕೆ ಕುಮಾರಸ್ವಾಮಿ ಹೇಳಿದ್ದರು. ಹೀಗಾಗಿ, ಜೆಡಿಎಸ್ ಬಹುತೇಕ ಬಿಜೆಪಿ ಜೊತೆ ಸೇರಲಿದೆ ಎಂಬ ಮಾತು ರಾಜಕೀಯ ವಲಯದಲ್ಲಿ ಕೇಳಿ ಬಂದಿತ್ತು. ಈ ಬೆನ್ನಲ್ಲೇ ದೇವೇಗೌಡರು ಅಮಿತ್ ಶಾ ಅವರನ್ನು ಭೇಟಿಯಾಗಿದ್ದಾರೆ ಎನ್ನುವುದು ಕುತೂಹಲಕ್ಕೆ ಕಾರಣವಾಗಿದೆ.