ಒಂದು ಕಣ್ಣಿಗೆ ಬೆಣ್ಣೆ ಇನ್ನೊಂದು ಕಣ್ಣಿಗೆ ಸುಣ್ಣ’ಎಂಬಂತಹ ಕೇಂದ್ರ ಬಿಜೆಪಿ ಸರ್ಕಾರದ ತೆರಿಗೆ ಹಂಚಿಕೆಯ ನೀತಿಗಳಿಂದ ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದ ರಾಜ್ಯಗಳಿಗೆ ಆರ್ಥಿಕ ಅನ್ಯಾಯವಾಗುತ್ತಿದೆ.
ಸಹಜವಾಗಿಯೇ ಈ ಮಲತಾಯಿ ಧೋರಣೆಯ ವಿರುದ್ಧ ನಮ್ಮ ಜನರು ಧ್ವನಿ ಎತ್ತುತ್ತಿದ್ದಾರೆ.ಆಕ್ರೋಶ ಹೊರಹಾಕುತ್ತಿದ್ದಾರೆ ಎಂದು ಸಚಿವ ದಿನೇಶ್ ಗುಂಡೂರಾವ್ ಕಿಡಿಕಾರಿದರು.14ನೇ ಹಣಕಾಸು ಆಯೋಗದ ಅನ್ವಯ ಶೇ. 4.7 ಇದ್ದ ಕರ್ನಾಟಕದ ತೆರಿಗೆ ಪಾಲನ್ನು 15ನೇ ಹಣಕಾಸು ಆಯೋಗದಲ್ಲಿ ಶೇ. 3.6 ಕ್ಕೆ ಇಳಿಸಲಾಗಿದೆ. ಇದರಿಂದಾಗಿ ರಾಜ್ಯವು 5 ವರ್ಷಗಳ ಅವಧಿಯಲ್ಲಿ ಸುಮಾರು 30000 ಕೋಟಿ ಹಣ ಕಳೆದುಕೊಂಡಿದೆ.
ಕರ್ನಾಟಕದ ತೆರಿಗೆ ಪಾಲು ವರ್ಷದಿಂದ ವರ್ಷಕ್ಕೆ ಕಡಿಮೆ ಆಗುತ್ತಿದ್ದರೆ ಮೋದಿ ತವರು ರಾಜ್ಯ ಗುಜರಾತಿನ ತೆರಿಗೆ ಪಾಲು ಪ್ರತಿವರ್ಷ ಗಣನೀಯವಾಗಿ ಹೆಚ್ಚುತ್ತಿದೆ. ಕರ್ನಾಟಕದ ಪಾಲು 1.82 ಲಕ್ಷ ಕೋಟೆಯಿಂದ 1.56 ಲಕ್ಷ ಕೋಟಿಗೆ ಇಳಿಕೆಯಾಗಿದ್ದರೆ, ಗುಜರಾತಿನ ತೆರಿಗೆ ಪಾಲು 1.18 ಲಕ್ಷ ಕೋಟಿಯಿಂದ 1.51 ಲಕ್ಷ ಕೋಟಿಗೆ ಏರಿಕೆಯಾಗಿದೆ ಎಂದು ಸಚಿವ ದಿನೇಶ್ ಗುಂಡೂರಾವ್ ಕಿಡಿಕಾರಿದರು.
2014 ರ ನಂತರ ಕೇಂದ್ರದಲ್ಲಿ ಬಿಜೆಪಿ ಸರ್ಕಾರವು ಅಧಿಕಾರಕ್ಕೆ ಬಂದ ನಂತರ ಈ ಅನ್ಯಾಯ ಹೆಚ್ಚಾಗಿದೆ. ದಕ್ಷಿಣ ಭಾರತದಲ್ಲಿ ನೆಲೆ ಕಂಡುಕೊಳ್ಳಲಾಗದ ಬಿಜೆಪಿಯು ತೆರಿಗೆ ಕಡಿತ ಮಾಡುವ ಮೂಲಕ ಕರ್ನಾಟಕ ಸೇರಿದಂತೆ ದಕ್ಷಿಣದ ರಾಜ್ಯಗಳ ಮೇಲೆ ಸೇಡಿನ ರಾಜಕಾರಣ ಮಾಡುತ್ತಿದೆ.