ಕೊವಿಡ್ ವಾರಿಯರ್ಸ್‍ಗಳಿಗೆ ಪ್ರಮಾಣಪತ್ರ ವಿತರಣೆ; ಕೊರೊನಾ ವಾರಿಯರ್ಸ್‍ಗಳು ಸಲ್ಲಿಸಿದ ಸೇವೆ ಅನನ್ಯ: ಡಿಸಿ ನಕುಲ್

ಬಳ್ಳಾರಿ,ಜ.02: ಕೊರೊನಾ ವಾರಿಯರ್ಸ್‍ಗಳು ಕೋವಿಡ್ ಸಂದರ್ಭದಲ್ಲಿ ಸಲ್ಲಿಸಿದ ಸೇವೆ ಅನನ್ಯವಾಗಿದೆ ಎಂದು ಜಿಲ್ಲಾಧಿಕಾರಿಗಳು ಹಾಗೂ ಭಾರತೀಯ ರೆಡ್‍ಕ್ರಾಸ್ ಸಂಸ್ಥೆಯ ಜಿಲ್ಲಾಧ್ಯಕ್ಷ ಎಸ್.ಎಸ್.ನಕುಲ್ ಅವರು ಬಣ್ಣಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ಸಂಜೆ ಕೊರೊನಾ ಸಂದರ್ಭದಲ್ಲಿ ತಮ್ಮ ಪ್ರಾಣವನ್ನು ಲೆಕ್ಕಿಸದೇ ಸೇವೆ ಸಲ್ಲಿಸಿದ ಕೋವಿಡ್ ವಾರಿಯರ್ಸ್‍ಗಳಿಗೆ ಪ್ರಮಾಣಪತ್ರ ವಿತರಿಸಿದ ಅವರು ಮಾತನಾಡಿದರು.
ಕೋವಿಡ್ ಸಂದರ್ಭದಲ್ಲಿ ಕೊರೊನಾ ಸೈನಿಕರು ಕೋವಿಡ್ ಕುರಿತು ಜಾಗೃತಿ,ಮಾಸ್ಕ್ ವಿತರಣೆ, ಹ್ಯಾಂಡ್ ವಾಶ್ ಪ್ಲಾಟ್‍ಫಾರಂ, ವಲಸೆ ಕಾರ್ಮಿಕರನ್ನು ಸುರಕ್ಷಿತವಾಗಿ ಅವರ ಸ್ಥಳಕ್ಕೆ ತೆರಳುವಂತೆ ನೋಡಿಕೊಂಡಿರುವುದು, ತರಕಾರಿ ಮಾರುಕಟ್ಟೆಯಲ್ಲಿ ಸಾಮಾಜಿಕ ಅಂತರ ಪಾಲನೆ, ಆಹಾರ ವಿತರಣೆ ಸೇರಿದಂತೆ ಅನೇಕ ಕೆಲಸಗಳನ್ನು ಸಮರ್ಪಕವಾಗಿ ನಿರ್ವಹಿಸಿದ್ದಾರೆ ಎಂದರು.
ವಲಸೆ ಕಾರ್ಮಿಕರಿಗೆ ಊಟೋಪಚಾರ,ಔಷಧ ಒದಗಿಸುವಿಕೆ,ರಕ್ತದಾನ, ಐಸಿಯೂನಲ್ಲಿರುವ ಮಾನಸಿಕ ಸಮಾಲೋಚನೆ ಸೇರಿದಂತೆ ಅನೇಕ ಕಾರ್ಯಗಳನ್ನು ಕೊರೊನಾ ಸೈನಿಕರು ಸಮರ್ಪಕವಾಗಿ ನಿರ್ವಹಿಸಿದ್ದಾರೆ. ಕೋವಿಡ್ ಸಂದರ್ಭದಲ್ಲಿ ಕೊರೊನಾ ಸೈನಿಕರು ಬಳ್ಳಾರಿ ಜಿಲ್ಲೆಯಲ್ಲಿ ಅತ್ಯುತ್ತಮವಾಗಿ ಕೆಲಸ ನಿರ್ವಹಿಸಿದ್ದಾರೆ ಎಂದು ಕೋವಿಡ್ ಹರಡುತ್ತಿದ್ದ ಪ್ರಮುಖ ಕಾಲಘಟ್ಟದಲ್ಲಿ ಸಮೀಕ್ಷೆ ನಡೆಸಿದ ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ಮ್ಯಾನೇಜ್‍ಮೆಂಟ್ ತನ್ನ ವರದಿಯಲ್ಲಿ ತಿಳಿಸಿದೆ. ಇದೇ ಮಾದರಿಯನ್ನು ಎಲ್ಲೆಡೆ ವಿಸ್ತರಿಸಬೇಕು ಎಂದು ತಿಳಿಸಿರುವುದು ನಮ್ಮ ಜಿಲ್ಲೆಯ ಕೊರೊನಾ ಸೈನಿಕರ ಸಾಹಸ ಕಾರ್ಯಕ್ಕೆ ಸಂದಗೌರವ ಎಂದರು.
ಕೋವಿಡ್ ಸಮಯದಲ್ಲಿ ಹಸಿವಿನಿಂದ ಬಳಲುತ್ತಿದ್ದ ಹಲವು ಜನ ನಿರಾಶ್ರಿತರಿಗೆ, ಒಂದೊತ್ತಿನ ಊಟಕ್ಕೂ ಪರದಾಡುವಂತ ಪರಿಸ್ಥಿತಿಯಲ್ಲಿ ಬದುಕುತ್ತಿದ್ದಂತಹ ಸಾಮನ್ಯ ಜನರಿಗೆ ಆಹಾರದ ಕಿಟ್‍ಗಳನ್ನು ವಿತರಿಸುವ ಮೂಲಕ ಬಡವರಿಗೆ ನೆರವಾಗಿರುವುದು ಒಂದು ಉತ್ತಮ ಕಾರ್ಯ ಎಂದು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಅವರು ಶ್ಲಾಘಿಸಿದರು.
ಕೋವಿಡ್ ಸಮಯದಲ್ಲಿ ಹಸಿವಿನಿಂದ ಬಳಲುತ್ತಿದ್ದಂತ ನೂರಾರು ಜನರಿಗೆ ನೀವು ಧ್ವನಿಯಾಗಿ ಕೆಲಸ ಮಾಡಿದ್ದೀರಿ. ತುಂಬಾ ಜನ ಒಂದೊತ್ತಿನ ಊಟಕ್ಕೂ ಪರದಾಡುವಂತ ಸ್ಥಿತಿ ನಿರ್ಮಾಣವಾಗಿತ್ತು. ಅಂತಹ ಕಷ್ಟದ ಸಮಯದಲ್ಲಿ ನಿರಾಶ್ರಿತರಿಗೆ ಹೆಗಲು ನೀಡಿದ್ದೀರಿ. ಬಡಜನರ ಆಶಿರ್ವಾದ ನಿಮ್ಮ ಮೇಲಿರಲಿದೆ ಎಂದರು.
ಜಿಲ್ಲಾ ಕಾರ್ಮಿಕ ಅಧಿಕಾರಿ ಚಂದ್ರಶೇಖರ ಐಲಿ ಅವರು ಮಾತನಾಡಿ, ಜಿಲ್ಲಾಧಿಕಾರಿಗಳ ಮಾರ್ಗದರ್ಶನದಲ್ಲಿ ಬಳ್ಳಾರಿ ಜಿಲ್ಲೆಯಲ್ಲಿ ಕೊರೊನಾ ಸೈನಿಕರು ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿದ್ದಾರೆ ಎಂದರು.
ಭಾರತೀಯ ರೆಡ್‍ಕ್ರಾಸ್ ಸಂಸ್ಥೆಯ ಕಾರ್ಯದರ್ಶಿ ಎಂ.ಎ.ಷಕೀಬ್ ಅವರು ಮಾತನಾಡಿದರು.
ಈ ಸಂದರ್ಭದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಬಿ.ಕೆ.ರಾಮಲಿಂಗಪ್ಪ, ಭಾರತೀಯ ರೆಡ್‍ಕ್ರಾಸ್ ಸಂಸ್ಥೆಯ ಕಾರ್ಯಕಾರಿ ಸಮಿತಿ ಸದಸ್ಯರಾದ ಚಂದ್ರಶೇಖರ,ಅನ್ನಪೂರ್ಣ ಸದಾಶಿವ, ರೇಖಾ ಪ್ರಕಾಶ, ಬಾಲಕಾರ್ಮಿಕ ಯೋಜನಾಧಿಕಾರಿ ಮೌನೇಶ ಸೇರಿದಂತೆ ಕೋವಿಡ್ ವಾರಿಯರ್ಸ್‍ಗಳು ಇದ್ದರು.

Latest Indian news

Popular Stories