ಮಡಿಕೇರಿ ಜ.22 : ಸರ್ಕಾರ ಆಸ್ತಿ ತೆರಿಗೆ ಹೆಚ್ಚಳದ ನಿರ್ಧಾರವನ್ನು ತಕ್ಷಣ ಕೈಬಿಡಬೇಕು ಮತ್ತು ಅಗತ್ಯ ವಸ್ತುಗಳ ಬೆಲೆ ಏರಿಕೆಯನ್ನು ನಿಯಂತ್ರಿಸಬೇಕೆಂದು ಒತ್ತಾಯಿಸಿ ಕೊಡಗು ಜಿಲ್ಲಾ ಜಾತ್ಯತೀತ ಜನತಾದಳ ಮಡಿಕೇರಿಯಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿತು.
ನಗರದ ಇಂದಿರಾಗಾಂಧಿ ವೃತ್ತದಿಂದ ಜಿಲ್ಲಾಧಿಕಾರಿಗಳ ಕಚೇರಿಯವರೆಗೆ ತೆರಳಿದ ಪ್ರತಿಭಟನಾಕಾರರು ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.
ಕೋವಿಡ್ ಸಂಕಷ್ಟದಿಂದ ರಾಜ್ಯದ ಜನಸಾಮಾನ್ಯರು ಆರ್ಥಿಕ ಹಿನ್ನಡೆಯನ್ನು ಅನುಭವಿಸುತ್ತಿರುವ ಹೊತ್ತಿನಲ್ಲೆ ಆಸ್ತಿ ತೆರಿಗೆಯನ್ನು ಹೆಚ್ಚಳ ಮಾಡಿರುವುದು ಸರಿಯಾದ ಕ್ರಮವಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿದರು.
ಜೆಡಿಎಸ್ ಜಿಲ್ಲಾಧ್ಯಕ್ಷ ಕೆ.ಎಂ.ಗಣೇಶ್ ಮಾತನಾಡಿ ಸಾವಿರ ಚದರ ಅಡಿಗಿಂತ ಹೆಚ್ಚಿರುವ ಖಾಲಿ ನಿವೇಶನಗಳ ಆಸ್ತಿ ತೆರಿಗೆಯನ್ನು ಶೇ. 0.2 ರಿಂದ ಶೇ. 0.5ಕ್ಕೆ ಹೆಚ್ಚಿಸಲಾಗಿದೆ. ಅಲ್ಲದೆ ಮನೆಗಳ ತೆರಿಗೆಯನ್ನು ಶೇ.1 ರಿಂದ 1.5ರಷ್ಟು ಹೆಚ್ಚಿಸಲು ಕಾಯಿದೆಯಲ್ಲಿ ಅವಕಾಶ ನೀಡಲಾಗಿದೆ ಎಂದರು. ಆಸ್ತಿ ತೆರಿಗೆಯನ್ನು ಕೂಡ ಗಣನೀಯ ಪ್ರಮಾಣದಲ್ಲಿ ಹೆಚ್ಚಳ ಮಾಡಲಾಗಿದೆ. ಸ್ವಯಂ ಘೋಷಿತ ಆಸ್ತಿ ತೆರಿಗೆ ಕೂಡ ಏರಿಕೆಯಾಗಿದ್ದು, ಶೇ. 0.25 ಯಷ್ಟು ಹೆಚ್ಚಿಸಲಾಗಿದೆ. ತೆರಿಗೆ ಹೆಚ್ಚಳ ಕ್ರಮವನ್ನು ತಕ್ಷಣ ಕೈಬಿಟ್ಟು ಈ ಹಿಂದಿನ ಪ್ರಮಾಣದ ತೆರಿಗೆಯನ್ನೇ ನಿಗಧಿ ಮಾಡಬೇಕೆಂದು ಒತ್ತಾಯಿಸಿದರು.
ದಿನದಿಂದ ದಿನಕ್ಕೆ ಒಂದೊಂದು ನೆಪವೊಡ್ಡಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ಜನಸಾಮಾನ್ಯರ ಮೇಲೆ ದುಬಾರಿ ದರದ ಹೊರೆಯನ್ನು ಹೊರಿಸುತ್ತಲೇ ಇದೆ. ಪಡಿತರ ವ್ಯವಸ್ಥೆಯಲ್ಲಿ 7 ಕೆ.ಜಿ.ಗೆ ಬದಲಾಗಿ 5 ಕೆ.ಜಿ. ಅಕ್ಕಿಯನ್ನು ನೀಡಲಾಗುತ್ತಿದೆ. ತೊಗರಿ ಬೇಳೆÉ ಮತ್ತು ಕಾಳು ವಿತರಣೆಯನ್ನು ಸ್ಥಗಿತಗೊಳಿಸಲಾಗಿದೆ. ಕಡು ಬಡವರಿಗೆ ಅಂಗಡಿಯಲ್ಲಿ ಖರೀದಿಸಲಾಗದಷ್ಟು ನಿತ್ಯ ಬಳಕೆಯ ವಸ್ತುಗಳ ಬೆಲೆ ಗಗನಕ್ಕೇರಿದೆ. ಪ್ರಾಕೃತಿಕ ವಿಕೋಪ, ಕೋವಿಡ್ ಸಂಕಷ್ಟ, ನಿರುದ್ಯೋಗ, ವ್ಯಾವಹಾರಿಕ ನಷ್ಟ ಇವುಗಳಿಂದ ಜನರು ಚೇತರಿಸಿಕೊಳ್ಳಲು ಸಾಧ್ಯವೇ ಆಗಿಲ್ಲ. ಕೇಂದ್ರದ ದ್ವ್ವಂದ್ವ ಧೋರಣೆಗಳಿಂದ ಪೆಟ್ರೋಲ್ ಮತ್ತು ಡೀಸೆಲ್ ದರ ಗಗನಕ್ಕೇರಿದೆ. ಅಡುಗೆ ಅನಿಲದ ಬೆಲೆ 450 ರಿಂದ 850ಕ್ಕೆ ಏರಿಕೆಯಾಗಿದೆ. ಇದರಿಂದ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಗಣೇಶ್ ಅಸಮಾಧಾನ ವ್ಯಕ್ತಪಡಿಸಿದರು.
ಅಗತ್ಯ ವಸ್ತುಗಳ ಬೆಲೆ ಏರಿಕೆಯನ್ನು ನಿಯಂತ್ರಿಸದಿದ್ದಲ್ಲಿ ಹೋರಾಟವನ್ನು ತೀವ್ರಗೊಳಿಸುವುದಾಗಿ ಎಚ್ಚರಿಕೆ ನೀಡಿದರು.
ಜೆಡಿಎಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮುಳ್ಳುಸೋಗೆ ರಾಜೇಶ್, ಕಾರ್ಯದರ್ಶಿ ಎನ್.ಸಿ.ಸುನೀಲ್, ಖಜಾಂಚಿ ಡೆನ್ನಿ ಬರೋಸ್, ಅಲ್ಪಸಂಖ್ಯಾತರ ಘಟಕದ ಜಿಲ್ಲಾಧ್ಯಕ್ಷ ಇಸಾಕ್ ಖಾನ್, ನಗರಾಧ್ಯಕ್ಷ ಕಲೀಲ್ ಬಾದ್‍ಷಾ, ಯುವ ಘಟಕದ ಜಿಲ್ಲಾಧ್ಯಕ್ಷ ಸಿ.ಎಲ್.ವಿಶ್ವ, ಪ್ರಧಾನ ಕಾರ್ಯದರ್ಶಿ ಜಾಶೀರ್, ಸಂಘಟನಾ ಕಾರ್ಯದರ್ಶಿ ಇಬ್ರಾಹಿಂ, ಮಡಿಕೇರಿ ತಾಲ್ಲೂಕು ಅಧ್ಯಕ್ಷ ಬಲ್ಲಚಂಡ ಗೌತಮ್, ವಿರಾಜಪೇಟೆ ತಾಲ್ಲೂಕು ಅಧ್ಯಕ್ಷ ಮಂಜುನಾಥ್, ಉಪಾಧ್ಯಕ್ಷ ಯೋಗೇಶ್ ನಾಯ್ಡು, ಸಂಘಟನಾ ಕಾರ್ಯದರ್ಶಿ ಗಣೇಶ್, ಎಸ್.ಸಿ. ಘಟಕದ ಜಿಲ್ಲಾಧ್ಯಕ್ಷ ಚಂದ್ರು, ಮಹಿಳಾ ಅಲ್ಪಸಂಖ್ಯಾತರ ಘಟಕದ ಜಿಲ್ಲಾಧ್ಯಕ್ಷೆ ಎಂ.ಎ.ರುಬೀನಾ, ಮಹಿಳಾ ಘಟಕದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಲೀಲಾ ಶೇಷಮ್ಮ, ನಗರಾಧ್ಯಕ್ಷೆ ಸುನಂದ, ನಗರ ಯುವ ಅಧ್ಯಕ್ಷ ಮೋನಿಷ್, ಸಾಮಾಜಿಕ ಜಾಲತಾಣದ ಜಿಲ್ಲಾ ಸಂಚಾಲಕ ಅಜಿತ್ ಕೊಟ್ಟಕೇರಿಯನ, ಪ್ರಮುಖರಾದ ಯೂಸುಫ್, ಸಾಧಿಕ್, ಮಹೇಶ್, ರಾಮಚಂದ್ರ, ಎಂ.ಬಿ.ಮಂದಣ್ಣ, ಗ್ರಾ.ಪಂ ನೂತನ ಸದಸ್ಯರಾದ ವಿನಯ್ ಸಂಭ್ರಮ್, ಜಿನಾಶ್ ಮತ್ತಿತರರು ಜಿಲ್ಲಾಡಳಿತದ ಮೂಲಕ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸುವ ಸಂದರ್ಭ ಹಾಜರಿದ್ದರು.