ಉಡುಪಿ- ಚಿಕ್ಕ ಮಗಳೂರು‌ ಕ್ಷೇತ್ರಕ್ಕೆ ಹಾಲಿ ಸಂಸದೆ ಶೋಭಾ ಕರಂದ್ಲಾಜೆ ಮುಂದಿನ‌ ಬಿಜೆಪಿ ಅಭ್ಯರ್ಥಿಯಾಗುವ ಸಾಧ್ಯತೆ!

ಬದಲಾವಣೆಯ ಕೂಗು ಮೊಳಗಿದ್ದ ಕರಾವಳಿಯ ಮೂರು ಕ್ಷೇತ್ರಗಳಾದ ಉತ್ತರ ಕನ್ನಡ, ದಕ್ಷಿಣ ಕನ್ನಡ ಹಾಗೂ ಉಡುಪಿ-ಚಿಕ್ಕಮಗಳೂರು ಕ್ಷೇತ್ರಕ್ಕೆ ಸಂಬಂಧಪಟ್ಟಂತೆ ಹಾಲಿ ಸಂಸದರ ಹೆಸರೇ ಮುಂಚೂಣಿಯಲ್ಲಿದೆ.

ಉತ್ತರ ಕನ್ನಡದಿಂದ ಅನಂತಕುಮಾರ್‌ ಹೆಗಡೆ, ವಿಶ್ವೇಶ್ವರ ಹೆಗಡೆ ಕಾಗೇರಿ, ದಕ್ಷಿಣ ಕನ್ನಡದಿಂದ ನಳಿನ್‌ ಕುಮಾರ್‌ ಕಟೀಲ್‌, ಬ್ರಿಜೇಶ್‌ ಚೌಟ ಹಾಗೂ ಉಡುಪಿಯಿಂದ ಶೋಭಾ ಕರಂದ್ಲಾಜೆ ಹೆಸರು ಚರ್ಚೆಯಲ್ಲಿದೆ.

ಲೋಕಸಭಾ ಚುನಾವಣೆ ಅಭ್ಯರ್ಥಿ ಆಯ್ಕೆಗೆ ಸಂಬಂಧ ಪಟ್ಟಂತೆ ದಿಲ್ಲಿಯಲ್ಲಿ ಬಿಜೆಪಿಯ ಹೈವೋಲ್ಟೆàಜ್‌ ಸಭೆ ನಡೆದಿದ್ದು, ಮಾರ್ಚ್‌ 8 ರಂದು ಪ್ರಧಾನಿ ಅಧ್ಯಕ್ಷತೆಯಲ್ಲಿ ನಡೆಯುವ ಚುನಾವಣೆ ಸಮಿತಿ ಸಭೆಯಲ್ಲಿ ರಾಜ್ಯದ 8 ರಿಂದ 10 ಅಭ್ಯರ್ಥಿಗಳ ಹೆಸರು ಅಂತಿಮಗೊಳ್ಳುವ ಸಾಧ್ಯತೆ ಇದೆ. ಅಚ್ಚರಿಯ ಬೆಳವಣಿಗೆಯಲ್ಲಿ ಹಾವೇರಿ ಲೋಕಸಭಾ ಕ್ಷೇತ್ರಕ್ಕೆ ಇಬ್ಬರು ಮಾಜಿ ಮುಖ್ಯಮಂತ್ರಿಗಳ ಹೆಸರು ಪ್ರಸ್ತಾವಿ ಸಲಾಗಿದ್ದು, ಮೊದಲ ಪಟ್ಟಿಯಲ್ಲೇ ಈ ಕುತೂಹಲ ತಣಿಯಲಿದೆ.

ರಾಜ್ಯದ ನಾಯಕರು ಕೊಟ್ಟ ಪಟ್ಟಿಯಲ್ಲಿ ಹಾವೇರಿ ಲೋಕಸಭಾ ಕ್ಷೇತ್ರಕ್ಕೆ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಜಗದೀಶ್‌ ಶೆಟ್ಟರ್‌ ಹೆಸರನ್ನು ಸೂಚಿಸಲಾಗಿದೆ.
ಜತೆಗೆ ಶೆಟ್ಟರ್‌ ಹೆಸರನ್ನು ಹುಬ್ಬಳ್ಳಿ-ಧಾರವಾಡ ಕ್ಷೇತ್ರಕ್ಕೂ ಪ್ರಸ್ತಾಪಿಸಲಾಗಿದೆ. ಆದರೆ ಬೆಳಗಾವಿ ಕ್ಷೇತ್ರಕ್ಕೆ ಸಂಬಂಧಪಟ್ಟಂತೆ ಸಾಕಷ್ಟು ಗೊಂದಲ ಸೃಷ್ಟಿಯಾಗಿದೆ ಎನ್ನಲಾಗಿದೆ. ತುಮಕೂರಿಗೆ ಸಂಬಂಧಪಟ್ಟಂತೆ ಮಾಜಿ ಸಚಿವರಾದ ಮಾಧುಸ್ವಾಮಿ ಹಾಗೂ ವಿ.ಸೋಮಣ್ಣ ಇಬ್ಬರ ಹೆಸರು ಪ್ರಸ್ತಾಪಿಸಲಾಗಿದೆ.

Latest Indian news

Popular Stories